ADVERTISEMENT

ಉಪ ಚುನಾವಣೆಗೆ ಆಯೋಗದಿಂದ ಸಿದ್ಧತೆ: ಸಂಜೀವ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 12:12 IST
Last Updated 9 ಫೆಬ್ರುವರಿ 2021, 12:12 IST
ಸಂಜೀವ್‌ಕುಮಾರ್‌
ಸಂಜೀವ್‌ಕುಮಾರ್‌   

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರ ಸೇರಿದಂತೆ ಮುಂಬರುವ ಉಪ ಚುನಾವಣೆಗಳಿಗೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಇಲ್ಲಿ ಮಂಗಳವಾರ ಹೇಳಿದರು.

‘ಮತದಾರರ ಪಟ್ಟಿ ಪರಿಷ್ಕರಣೆ, ಸಿಬ್ಬಂದಿ ನಿಯೋಜನೆ, ಇವಿಎಂಗಳ ವ್ಯವಸ್ಥೆ ಮೊದಲಾದ ತಯಾರಿಯನ್ನು ಮಾಡಿಕೊಂಡಿದ್ದೇವೆ. ಮತದಾರರ ಪಟ್ಟಿ ಪರಿಷ್ಕರಣೆ ಮುಗಿದಿದೆ. ನವ ಮತದಾರರಿಗೆ ಗುರುತಿನ ಚೀಟಿ(ಎಪಿಕ್)ಗಳನ್ನು ವಾರಗೊಳಗೆ ವಿತರಿಸಲಾಗುವುದು. ಉಪ ಚುನಾವಣೆ ಯಾವಾಗ ಘೋಷಣೆ ಆಗುತ್ತದೆ ಎನ್ನುವುದನ್ನು ನಾವು ಹೇಳಲಾಗುವುದಿಲ್ಲ. ನಾವೂ ಕಾಯುತ್ತಿದ್ದೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಅಂಗವಿಕಲರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 80 ವರ್ಷ ದಾಟಿದವರು ಹಾಗೂ ಕೋವಿಡ್ ಸೋಂಕಿತರಿಗೂ ಈ ಸೌಲಭ್ಯ ದೊರೆಯಲಿದೆ. ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಇಲ್ಲವೇ ಎನ್ನುವುದನ್ನು ಪೂರ್ವಭಾವಿಯಾಗಿ ಪರಿಶೀಲಿಸಿಕೊಳ್ಳಬೇಕು. ಹೆಸರು ಬಿಟ್ಟು ಹೋಗಿದ್ದರೆ ಸೇರಿಸಲು ಅವಕಾಶವಿದೆ. ಚುನಾವಣಾ ಆಯೋಗದ ಹೊಸ ಉಪಕ್ರಮದಲ್ಲಿ ಮತದಾರರು ಇ–ಎಪಿಕ್ ಕಾರ್ಡ್‌ ಅನ್ನು ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಗುರುತಿನ ಚೀಟಿ ಇರುವುದು ಮುಖ್ಯವಲ್ಲ; ಮತ ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಮುಖ್ಯ ಎನ್ನುವುದನ್ನು ಮರೆಯಬಾರದು’ ಎಂದರು.

‘ಚುನಾವಣಾ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.