ADVERTISEMENT

‘ಪರಿಹಾರ ಕಾಮಗಾರಿಗೆ ತುರ್ತು ಕ್ರಮ ವಹಿಸಿ’

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒಕ್ಕೊರಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 13:51 IST
Last Updated 22 ಆಗಸ್ಟ್ 2019, 13:51 IST
ಬೆಳಗಾವಿಯಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿದರು. ಉಪಾಧ್ಯಕ್ಷ ಮಾರುತಿ ಸನದಿ, ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸನದಿ ಇದ್ದಾರೆ
ಬೆಳಗಾವಿಯಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿದರು. ಉಪಾಧ್ಯಕ್ಷ ಮಾರುತಿ ಸನದಿ, ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸನದಿ ಇದ್ದಾರೆ   

ಬೆಳಗಾವಿ: ‘ತಾಲ್ಲೂಕಿನ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎಂದುನಗರದಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ‘ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡಲು ಅಧಿಕಾರಿಗಳು ಮುಂದಾಗಬೇಕು. ರೈತರ ಬೆಳೆಗಳ ಹಾನಿಗೊಂಡಿರುವುದರಿಂದ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸರ್ವೇ ಕಾರ್ಯಕೈಗೊಂಡು ಎಲ್ಲರಿಗೂ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು. ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗದಂತೆ ಎಚ್ಚರವಹಿಸಬೇಕು’ ಎಂದು ಸೂಚನೆ ನೀಡಿದರು.

‘ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಪ್ರವಾಹದಿಂದ ಬೆಳೆಗಳು ನಾಶವಾಗಿವೆ. ಹೀಗಾಗಿ, ತಾಲ್ಲೂಕು ಸಂಪೂರ್ಣ ನೆರೆಪೀಡಿತವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಹೆಚ್ಚಿನ ಅನುದಾನಕ್ಕೆ ಮನವಿ ಮಾಡಬೇಕು’ ಎಂದು ಸದಸ್ಯ ಮಹಾಂತೇಶ ಆಲಬದ್ದಿ ಒತ್ತಾಯಿಸಿದರು.

ADVERTISEMENT

ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಬಿ. ಕಲ್ಯಾಣಿ ಮಾತನಾಡಿ, ‘ಬೆಳೆಗಳ ಹಾನಿ ಕುರಿತು ಸರ್ವೇ ಕಾರ್ಯ ಆರಂಭಿಸಿದ್ದೇವೆ. ಶೀಘ್ರವೇ ವರದಿ ಸಲ್ಲಿಸಲಾಗುವುದು’ ಎಂದರು.

ಶಿಕ್ಷಕರವಿರುದ್ಧಆಕ್ರೋಶ:ನೆರೆ ಸಂತ್ರಸ್ತರ ಸಹಾಯಕ್ಕಾಗಿಎಲ್ಲ ಇಲಾಖೆಯ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಶಿಕ್ಷಕರು ರಜೆ ಸಿಕ್ಕ ಕೂಡಲೇ ಮನೆಯಲ್ಲೇ ಕೂತರು.ಶಾಲೆಗಳಲ್ಲಿ ತೆರೆಯಲಾದ ಪರಿಹಾರ ಕೇಂದ್ರಕ್ಕೂ ಯಾರೊಬ್ಬರು ಬರಲಿಲ್ಲ.ಇಲಾಖೆಯ ಅಧಿಕಾರಿಗಳು ಕೂಡ ಈ ಬಗ್ಗೆ ಸುತ್ತೋಲೆ ಹೊರಡಿಸಲಿಲ್ಲ. ಮುಂದೆ ಈ ರೀತಿ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು’ ಎಂದು ಸದಸ್ಯಯಲ್ಲಪ್ಪ ಕೋಳೆಕರ್‌ ಆಗ್ರಹಿಸಿದರು. ಇದಕ್ಕೆ ಇತರ ಸದಸ್ಯರು ದನಿಗೂಡಿಸಿದರು.

ಇದಕ್ಕುತ್ತರಿಸಿದ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ, ‘ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಇಲಾಖೆಯ ಅಧಿಕಾರಿಗಳು ಪರಿಹಾರ ಕೇಂದ್ರಗಳಿಗೆ ಭೇಟಿ ಕೊಟ್ಟಿದ್ದಾರೆ. ಶಿಕ್ಷಕರು ಕೂಡ ಬರಬೇಕಾಗಿತ್ತು. ಈ ಬಗ್ಗೆ ಎಚ್ಚರವಹಿಸಲಾಗುವುದು’ ಎಂದರು.

ಸ್ವಚ್ಛತಾ ಕಾರ್ಯಕ್ಕೆ ಅನುದಾನ: ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ,ಈಗಲೂ ಜಲಾವೃತವಾಗಿರುವ ಗ್ರಾಮಗಳಲ್ಲಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲು ಹಾಗೂ ಸ್ವಚ್ಛತಾ ಕಾರ್ಯಕ್ಕೆ ತಾಲ್ಲೂಕು ಪಂಚಾಯ್ತಿಯಲ್ಲಿ ₹5 ಲಕ್ಷ ಅನುದಾನ ಮೀಸಲಿಡಲಾಗಿದೆ. ಅಗತ್ಯವಿರುವ ಗ್ರಾಮಗಳಿಗೆ ಅನುದಾನ ನೀಡಲಾಗುವುದು’ ಎಂದು ತಿಳಿಸಿದರು.

ಪ್ರವಾಹದಿಂದ ‌ಉಂಟಾಗಿರುವ ಸಮಸ್ಯೆಗಳನ್ನು ನಿವಾರಿಸಲು ಕೈಗೊಂಡಿರುವಕ್ರಮಗಳ ಕುರಿತುವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.ಉಪಾಧ್ಯಕ್ಷ ಮಾರುತಿ ಸನದಿ, ಅಧಿಕಾರಿಗಳು ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.