ADVERTISEMENT

ಇಂಗ್ಲಿಷನ್ನು ಭಾಷೆಯಾಗಿ ಕಲಿಸಲಿ, ಮಾಧ್ಯಮವಾಗಿ ಬೇಡ

ಹಿರಿಯ ಕವಿ ಜಿನದತ್ತ ದೇಸಾಯಿ ಸಲಹೆ

ಎಂ.ಮಹೇಶ
Published 22 ಡಿಸೆಂಬರ್ 2018, 19:45 IST
Last Updated 22 ಡಿಸೆಂಬರ್ 2018, 19:45 IST
ಜಿನದತ್ತ ದೇಸಾಯಿ
ಜಿನದತ್ತ ದೇಸಾಯಿ   

‌ಬೆಳಗಾವಿ: ಮುಂದಿನ ಸಾಲಿನಲ್ಲಿ ರಾಜ್ಯದ 1000 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧನೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರಕಟಿಸಿರುವುದಕ್ಕೆ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಈ ಕ್ರಮದಿಂದ ಗಡಿ ಭಾಗಗಳಲ್ಲಿ ಹಾಗೂ ಕನ್ನಡದ ಬೆಳವಣಿಗೆ ವಿಷಯದಲ್ಲಿ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎನ್ನುವ ಕುರಿತು ಹಿರಿಯ ಕವಿ, ನಿವೃತ್ತ ನ್ಯಾಯಾಧೀಶರೂ ಆಗಿರುವ ಜಿನದತ್ತ ದೇಸಾಯಿ ಮಾತನಾಡಿದ್ದಾರೆ.

* ಸರ್ಕಾರದ ಪ್ರಸ್ತಾವದ ಬಗ್ಗೆ ಪ್ರತಿಕ್ರಿಯೆ ಏನು?

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಜಾರಿಗೊಳಿಸುವುದು ಸರಿಯಲ್ಲ. ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವುದಕ್ಕೆ ಯಾರದೂ ವಿರೋಧವಿಲ್ಲ. ಬೇಕಿದ್ದರೆ 5ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಿ. ಅಲ್ಲಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಬೋಧನೆ ಇರಬೇಕು.

ADVERTISEMENT

* ಸರ್ಕಾರಿ ಶಾಲೆ ಮಕ್ಕಳು ಇಂಗ್ಲಿಷ್‌ ಕಲಿಯುವುದು ಬೇಡವೇ?

ಅಂತರರಾಷ್ಟ್ರೀಯ ಸಂಪರ್ಕಕ್ಕೆ ಹಾಗೂ ಇಂದಿನ ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್‌ ಕಲಿಯಬೇಕು ನಿಜ. ಅದನ್ನು ಭಾಷೆಯಾಗಿ ಕಲಿಸಲು ಬಹಳಷ್ಟು ಅವಕಾಶಗಳಿವೆ. ಸರ್ಕಾರದ ಅದನ್ನು ಮಾಡಬೇಕು. ನಾವೆಲ್ಲವೂ ಕನ್ನಡ ಮಾಧ್ಯಮದಲ್ಲಿಯೇ ಓದಿದವರು; ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿತವರು. ಕನ್ನಡ ಮಾಧ್ಯಮದಲ್ಲಿ ಓದಿದವರು ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರಲ್ಲವೇ?

* ಇಂಗ್ಲಿಷ್ ಮಾಧ್ಯಮದಿಂದ ಆಗುವ ತೊಂದರೆಗಳೇನು?

ಈಗಾಗಲೇ ಇಂಗ್ಲಿಷ್‌ ಪ್ರಭಾವದಿಂದಾಗಿ ಕನ್ನಡ ಸೊರಗುತ್ತಿದೆ. ಹೀಗಿರುವಾಗ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮ ಶುರುವಾದರೆ ಮಾತೃಭಾಷೆಯೇ ಕಣ್ಮರೆಯಾಗುತ್ತದೆ. ಮಾತೃಭಾಷೆ ಕಣ್ಮರೆಯಾದರೆ ನಾಡಿನ ಸಂಸ್ಕೃತಿ, ಇತಿಹಾಸವನ್ನೇ ನಾಶ ಮಾಡಿದಂತೆ ಎನ್ನುವುದನ್ನು ಮರೆಯಬಾರದು. ವಿದೇಶಿ ಭಾಷೆಯಿಂದ ಸ್ವಂತ ಆಲೋಚನೆ ಸಾಧ್ಯವಾಗುವುದಿಲ್ಲ. ಸೃಜನಾತ್ಮಕ ಸಾಹಿತ್ಯ ರಚನೆ ಸಾಧ್ಯವಾಗುವುದಿಲ್ಲ. ಇದರಿಂದ ನೆಲದ ಭಾಷೆಯಾದ ಕನ್ನಡಕ್ಕೆ ಬಹಳ ದೊಡ್ಡ ಹೊಡೆತ ಬೀಳುತ್ತದೆ.

* ಹಾಗಾದರೆ ಸರ್ಕಾರ ಏನು ಮಾಡಬೇಕು?

ಸರ್ಕಾರಿ ಶಾಲೆಗಳಲ್ಲಿ ಶುದ್ಧ ಇಂಗ್ಲಿಷ್ ಕಲಿಸುವ (ಭಾಷೆಯಾಗಿ) ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಕನ್ನಡ ಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸಬೇಕು. ಇಂಗ್ಲಿಷ್ ಮಾಧ್ಯಮ ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಇದು ರಾಜಕಾರಣಿಗಳು ಮಾತ್ರವೇ ಸೇರಿ ಮಾಡುವ ನಿರ್ಣಯವಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದಾಗಿ ಹಾಗೂ ಸಂಸ್ಕೃತಿಯ ಪ್ರಶ್ನೆಯನ್ನು ಗಮನದಲ್ಲಿಟ್ಟುಕೊಂಡು ಭಾಷಾ ತಜ್ಞರೊಂದಿಗೆ ಚರ್ಚಿಸಿ, ಮುಂದಿನ ಕ್ರಮ ತೆಗೆದುಕೊಳ್ಳಬೇಕು. ತರಾತುರಿಯಲ್ಲಿ ಇಂಗ್ಲಿಷ್‌ ಹೇರಿಕೆ ಮಾಡುವುದು ಸರಿಯಲ್ಲ. ಮಕ್ಕಳು ಮಾತೃಭಾಷೆಯಲ್ಲಿ ಕಲಿಯುವಷ್ಟು ಪರಿಣಾಮಕಾರಿಯಾಗಿ ಬೇರೆ ಭಾಷೆಯಲ್ಲಿ ಕಲಿಯಲು ಆಗದು ಎನ್ನುವುದನ್ನು ನೆನಪಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.