ADVERTISEMENT

ಇಎಸ್‌ಐ ಆಸ್ಪತ್ರೆಗೆ ಮರು ಟೆಂಡರ್‌: ಈರಣ್ಣ ಕಡಾಡಿ

ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 3:19 IST
Last Updated 7 ಆಗಸ್ಟ್ 2025, 3:19 IST
ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ
ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ   

ಮೂಡಲಗಿ: ‘ಜಿಲ್ಲೆಗೆ ಮಂಜೂರಾದ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಯ ಮರು ಟೆಂಡರ್ ಪ್ರಕ್ರಿಯೆಗೆ ಕೇಂದ್ರ ಸರ್ಕಾರವು ಆದೇಶ ಹೊರಡಿಸಿದೆ’ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

‘ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರದ ನಿರಾಶಕ್ತಿಯ ಕಾರಣ ಟೆಂಡರ್ ಪ್ರಕ್ರಿಯೆಯನ್ನು ರದ್ದು ಮಾಡಲಾಗಿತ್ತು. ಕೇಂದ್ರ ಸರ್ಕಾರಕ್ಕೆ ನಾವು ಮತ್ತೊಮ್ಮೆ ವಿಶೇಷ ಮನವಿ ಸಲ್ಲಿಸಿ ಪ್ರಯತ್ನ ಮಾಡಿದ್ದರ ಫಲವಾಗಿ ಮತ್ತೆ ಟೆಂಡರ್‌ಗೆ ಅನುಮತಿ ನೀಡಲಾಗಿದೆ. ಮಲತಾಯಿ ಧೋರಣೆ ತಾಳಿದ ರಾಜ್ಯ ಸರ್ಕಾರ ಈಗಲಾದರೂ ತಪ್ಪು ತಿದ್ದಿಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.

‘2023ರ ಫೆಬ್ರುವರಿಯಲ್ಲಿ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆ ಬೆಳಗಾವಿ ಜಿಲ್ಲೆಗೆ ಮಂಜೂರಾಗಿದ್ದು, ಕಟ್ಟಡದ ನಿರ್ಮಾಣಕ್ಕೆ ಸ್ಥಳ ಒದಗಿಸುವಲ್ಲಿ ರಾಜ್ಯ ಸರ್ಕಾರವು ಸುಮಾರು ಎರಡು ವರ್ಷಗಳ ಕಾಲ ವಿಳಂಬ ಮಾಡಿದೆ. ಕಾರಣ ಟೆಂಡರ್ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವು ಹಿಂತೆಗೆದುಕೊಂಡಿತ್ತು. ಆದರೆ, ಜಿಲ್ಲೆಯಲ್ಲಿರುವ ಸುಮಾರು 3.50 ಲಕ್ಷ ವಿಮಾ ಸೌಲಭ್ಯ ಹೊಂದಿರುವ ನೋಂದಾಯಿತ ಕಾರ್ಮಿಕರಿದ್ದಾರೆ. ಅವರ ಕುಟುಂಬದ ಸದಸ್ಯರು ಸೇರಿದಂತೆ 14 ಲಕ್ಷ ಜನರಿಗೆ ಇದರ ಲಾಭವಾಗಲಿದೆ. ಇದು ರದ್ದಾಗುವುದರಿಂದ ಜಿಲ್ಲೆಗೆ ಬಹಳ ಅನ್ಯಾಯವಾಗುತ್ತದೆ ಎಂದು ನಾವು ಸಂಬಂಧಿಸಿದ ಕೇಂದ್ರ ಸಚಿವರಲ್ಲಿ ವಿನಂತಿಸಿದ್ದೇವು. ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಂಡ ಕೇಂದ್ರ ಸಚಿವರು ಸುಸಜ್ಜಿತವಾದ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಯ ಮರು ಟೆಂಡರ್ ಕರೆದಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

‘ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ ಮಂಜೂರಾದ ಯೋಜನೆಗಳನ್ನು ಬಳಸಿಕೊಳ್ಳುವಲ್ಲಿ ಮೀನ– ವೇಷ ಮಾಡುತ್ತಿದೆ. ಜನರಿಗೆ ಉಪಯೋಗವಾದ ಈ ಆಸ್ಪತ್ರೆಯನ್ನು ಆದಷ್ಟು ಬೇಗ ನಿರ್ಮಿಸುವ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಹಲವಾರು ಬಾರಿ ರಾಜ್ಯ ಕಾರ್ಮಿಕ ಸಚಿವರನ್ನು ವಿನಂತಿಸಿದರೂ ನಿರಾಸಕ್ತಿ ತೋರಿದ್ದರು. ಈಗಲಾದರೂ ಜಿಲ್ಲೆಯ ಜನರ ಅನುಕೂಲಕ್ಕಾಗಿ  ಮುತುವರ್ಜಿ ವಹಿಸಬೇಕು. ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ತೀವ್ರವಾಗಿ ಕ್ರಮ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಇದರ ಬಗ್ಗೆ ವಿಶೇಷ ಗಮನ ಹರಿಸುವುದು ಅವಶ್ಯವಿದೆ’ ಎಂದು ಕಡಾಡಿ ಅವರು ತಿಳಿಸಿದ್ದಾರೆ.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ 5 ಎಕರೆ ಜಮೀನು ಒದಗಿಸಲು ಮುಂದೆ ಬಂದಿದ್ದು ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ ನೀಡಬೇಕು
ಈರಣ್ಣ ಕಡಾಡಿ ರಾಜ್ಯಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.