ADVERTISEMENT

ಬೆಳಗಾವಿ ನಗರದ 4 ಕಡೆ ಆಹಾರ ಸಂಸ್ಕರಣೆ ಘಟಕ ಸ್ಥಾಪನೆ: ಕಾರಜೋಳ ಭರವಸೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 10:55 IST
Last Updated 30 ಆಗಸ್ಟ್ 2021, 10:55 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಳಗಾವಿ: ‘ನಗರದ ಸುತ್ತಮತ್ತಲಿನ ನಾಲ್ಕು ಕಡೆಗಳಲ್ಲಿ ಆಹಾರ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಿ ಮಾದರಿ ನಗರವನ್ನಾಗಿ ಮಾಡಲಾಗುವುದು. ವಾಹನಗಳ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

‘ಪ್ರಸ್ತುತ 10 ವಾರ್ಡ್‌ಗಳಲ್ಲಿ 24x7 ನಿರಂತರ ಕುಡಿಯುವ ನೀರು ಪೂರೈಸಲಾಗುತ್ತಿದೆ. ಉಳಿದ 48 ವಾರ್ಡ್‌ಗಳಲ್ಲೂ ಇನ್ನೊಂದು ವರ್ಷದಲ್ಲಿ ದಿನದ 24 ಗಂಟೆಯೂ ನೀರು ಸರಬರಾಜು ಮಾಡಲಾಗುವುದು. ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇರಲಿಲ್ಲ. ಹೀಗಾಗಿ, ಅಧಿಕಾರಿಗಳು ಸ್ವಲ್ಪ ವ್ಯತ್ಯಾಸ ಮಾಡಿದ್ದರಿಂದ ಕೆಲವು ಕಾಮಗಾರಿಗಳು ನಡೆದಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೆ ಮೂಲಸೌಲಭ್ಯಗಳ ಸುಧಾರಣೆಗೆ ಕ್ರಮ ವಹಿಸಲಾಗುವುದು’ ಎಂದರು.

ADVERTISEMENT

ಹೊಸ ಕ್ಯಾಂಪಸ್ ನಿರ್ಮಾಣ:‘ಬೆಂಗಳೂರು ಬಿಟ್ಟರೆ ಮಹತ್ವ ಇರುವುದು ಬೆಳಗಾವಿಗೆ ಮಾತ್ರ. ಹೀಗಾಗಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ ತಾಲ್ಲೂಕಿನ ಹಿರೇಬಾಗೇವಾಡಿ ಬಳಿ ಜಾಗ ನೀಡಲಾಗಿದೆ. ₹ 130 ಕೋಟಿ ಅನುದಾನವನ್ನೂ ಕೊಡಲಾಗಿದೆ. ಪಾಲಿಕೆ ಚುನಾವಣೆ ಮುಗಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿ, ಹೊಸ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ಚಾಲನೆ ಕೊಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ರಿಂಗ್‌ ರೋಡ್ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು. ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

‘ಸಫಾಯಿ ಕರ್ಮಚಾರಿಗಳ ಮಕ್ಕಳಲ್ಲಿ ಯಾರಾದರೂ ವಾಹನ ಚಾಲನೆ ಪರವಾನಗಿ ಹೊಂದಿದ್ದರೆ, ಅವರಿಗೆ ಕಸ ಸಾಗಣೆಗಾಗಿ ವಾಹನಗಳನ್ನು ಸಹಾಯಧನದಲ್ಲಿ ನೀಡಲಾಗುವುದು. ಇದರಿಂದ ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿ ನಡೆಸಬಹುದಾಗಿದೆ. ಕೊಳೆಗೇರಿ ಪ್ರದೇಶಗಳಲ್ಲಿ ಇರುವ ಎಲ್ಲರಿಗೂ ಮನೆಗಳನ್ನು ಕಟ್ಟಿಕೊಡಲಾಗುವುದು. ಬುಡಾದಿಂದ ಕಣಬರ್ಗಿಯಲ್ಲಿ 2ಸಾವಿರ ನಿವೇಶನ ಅಭಿವೃದ್ಧಿಪಡಿಸಲು ಅನುಮೋದನೆ ಕೊಡಲಾಗಿದೆ. ಯುವಜನರಿಗೆ ಇಲ್ಲೇ ಉದ್ಯೋಗ ಸೃಷ್ಟಿಗೆ ಪ್ರಯತ್ನಿಸಲಾಗುವುದು. ಪಟ್ಟಣದಲ್ಲಿರುವ ರೈತರಿಗೂ ‘ಕೃಷಿ ಸಮ್ಮಾನ್’ ವಿಸ್ತರಿಸಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಯು, ಮಹಾನಗರಪಾಲಿಕೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಶ್ರೀರಕ್ಷೆ ಆಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.