ADVERTISEMENT

ಇವಿಎಂ, ವಿವಿಪ್ಯಾಟ್‌ ಯಂತ್ರಗಳ ಹಂಚಿಕೆ

ರಾಜಕೀಯ ಪಕ್ಷದ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 14:33 IST
Last Updated 20 ಮಾರ್ಚ್ 2019, 14:33 IST
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿದರು
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿದರು   

ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಮಾನ್ಯತೆ ಪಡೆದ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿ–ಪ್ಯಾಟ್ ಯಂತ್ರಗಳನ್ನು ಬುಧವಾರ ಹಂಚಿಕೆ ಮಾಡಲಾಯಿತು.

ಜಿಲ್ಲಾ ಚುನಾವಣಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ನೇತೃತ್ವದಲ್ಲಿ ನಡೆದ ಕಂಪ್ಯೂಟರೀಕೃತ ರ‍್ಯಾಂಡಮೈಜೇಷನ್ ಪ್ರಕ್ರಿಯೆಯಲ್ಲಿ ಜಿಲ್ಲೆಯ ಒಟ್ಟು 18 ವಿಧಾನಸಭಾ ಕ್ಷೇತ್ರಗಳವಾರು ಒಟ್ಟು 5,099 ಬ್ಯಾಲೆಟ್ ಯೂನಿಟ್‌ಗಳು, 5,099 ಕಂಟ್ರೋಲ್ ಯೂನಿಟ್‌ಗಳು ಮತ್ತು 5,321 ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಯಿತು. ಚುನಾವಣೆಗಾಗಿ ಜಿಲ್ಲೆಯಲ್ಲಿ ಒಟ್ಟು 4,434 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಈ ಮತಗಟ್ಟೆಗಳ ಸಂಖ್ಯೆಯ ಜತೆಗೆ 665 (ಶೇ.15) ಅಧಿಕ ಬ್ಯಾಲೆಟ್ ಯೂನಿಟ್ ಮತ್ತು 665 (ಶೇ.15) ಅಧಿಕ ಕಂಟ್ರೋಲ್ ಯೂನಿಟ್‌ಗಳನ್ನು ಹಾಗೂ ಇದೇ ರೀತಿ 4,434 ಮತಗಟ್ಟೆಗಳಿಗೆ 887 (ಶೇ.20) ಹೆಚ್ಚುವರಿ ಸೇರಿದಂತೆ ಒಟ್ಟಾರೆ 5321 ವಿವಿಪ್ಯಾಟ್‌ ಯಂತ್ರಗಳನ್ನು ಹೆಚ್ಚುವರಿಯಾಗಿ (ರಿಸರ್ವ್) ಹಂಚಿಕೆ ಮಾಡಲಾಯಿತು.

ADVERTISEMENT

‘ಮತಯಂತ್ರಗಳ ಹಂಚಿಕೆಯು ಸಂಪೂರ್ಣ ಕಂಪ್ಯೂಟರೀಕೃತವಾಗಿದ್ದು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಅತ್ಯಂತ ಪಾರದರ್ಶಕತೆಯಿಂದ ಹಂಚಿಕೆ ಮಾಡಲಾಗಿದೆ. ರ‍್ಯಾಂಡಮೈಜೇಷನ್ ಮೂಲಕ ಮತಯಂತ್ರ ಮತ್ತು ವಿವಿಪ್ಯಾಟ್‌ಗಳನ್ನು ಹಂಚಿಕೆ ಮಾಡಿದ ಬಳಿಕ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವ ಮತಯಂತ್ರಗಳು ಯಾವ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಿವೆ ಎಂಬ ಮಾಹಿತಿಯನ್ನು ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಯಿತು. ಚುನಾವಣೆಯನ್ನು ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಈ ವಿಧಾನಗಳನ್ನು ಅನುಸರಿಸಲಾಗಿದೆ’ ಎಂದು ಬೊಮ್ಮನಹಳ್ಳಿ ತಿಳಿಸಿದರು.

‘ಹಂಚಿಕೆ ಬಳಿಕ ಉಳಿದ 1,077 ಬ್ಯಾಲೆಟ್ ಯೂನಿಟ್, 24 ಕಂಟ್ರೋಲ್ ಯೂನಿಟ್ ಹಾಗೂ 10 ವಿವಿಪ್ಯಾಟ್‌ ಯಂತ್ರಗಳನ್ನು ಜಿಲ್ಲಾ ಚುನಾವಣಾಧಿಕಾರಿ ನಿಯಂತ್ರಣದಲ್ಲಿರುವ ಗೋದಾಮಿನಲ್ಲಿ ಭದ್ರವಾಗಿ ಇಡಲಾಗಿದೆ’ ಎಂದು ಮಾಹಿತಿ ನೀಡಿದರು.

ಚಿಕ್ಕೋಡಿ ಕ್ಷೇತ್ರದ ಚುನಾವಣಾಧಿಕಾರಿಯಾದ ಜಿಲ್ಲಾ ‍ಪಂಚಾಯ್ತಿ ಸಿಇಒ ಕೆ.ವಿ. ರಾಜೇಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ, ಸಹಾಯಕ ಚುನಾವಣಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.