ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ
ಕಾಗವಾಡ: ‘ಮಾಜಿ ಶಾಸಕ ಶ್ರೀಮಂತ ಪಾಟೀಲರನ್ನು ವಿಧಾನ ಸಭಾ ಚುನಾವಣೆಯಲ್ಲಿ ಜನ ತಿರಸ್ಕಾರ ಮಾಡಿದ ಮೇಲೆ ಹತಾಶೆಯಿಂದ ಯಾವುದೇ ಪುರಾವೆ ಇಲ್ಲದೆ ನನ್ನ ವಿರುದ್ಧ ಪ್ರತಿಭಟನೆ ಹಾಗೂ ಆರೋಪಗಳನ್ನು ಮಾಡುತ್ತಿದ್ದು, ಅದು ಸತ್ಯಕ್ಕೆ ದೂರವಾಗಿದೆ’ ಎಂದು ಶಾಸಕ ರಾಜು ಕಾಗೆ ಸ್ಪಷ್ಟನೆ ನೀಡಿದರು.
ಮಂಗಳವಾರ ಉಗಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಜಿ ಶಾಸಕ ಶ್ರೀಮಂತ ಪಾಟೀಲ ಕೆಲಸವಿಲ್ಲದೆ ಸುಮ್ಮನೆ ಹಣ ನೀಡಿ ಜನಗಳನ್ನು ಸೇರಿಸಿ ಕಾಗವಾಡದಲ್ಲಿ ಪ್ರತಿಭಟನೆ ಮಾಡಿರುವುದು ಹಾಸ್ಯಾಸ್ಪದ. ನಾನು ಗೂಂಡಾಗಿರಿ, ಭ್ರಷ್ಟಾಚಾರ ಮಾಡಿದ್ದು ಸಾಬೀತು ಮಾಡಲಿ ಅವತ್ತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತನೆ’ ಎಂದರು.
‘ಹಿಂದಿನ ತಮ್ಮ ಐದು ವರ್ಷದ ಆಡಳಿತದಲ್ಲಿ 20 ಜನ ಆಪ್ತ ಸಹಾಯಕರನ್ನು ಇಟ್ಟು ಭ್ರಷ್ಟಾಚಾರ ಮಾಡಿ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಎಷ್ಟು ಹಿಂಸೆ ನೀಡಿದ್ದಿರಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಒಂದು ವೇಳೆ ತಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ನಡೆದೆ ಇಲ್ಲ, ತಮ್ಮ ಸಕ್ಕರೆ ಕಾರ್ಖಾನೆ ತೂಕದಲ್ಲಿ ರೈತರಿಗೆ ಮೋಸ ಮಾಡಿಲ್ಲ ಎಂದು ನಿರೂಪಿಸಲಿ ಅಥವಾ ಬಹಿರಂಗ ಚರ್ಚೆಗೆ ಬರಲಿ ನಾನು ಅದಕ್ಕೂ ಸಿದ್ಧನಿದ್ದೆನೆ’ ಎಂದರು.
‘ಕೆಲಸ ಇಲ್ಲದ ನಾಲ್ಕು ಜನರನ್ನು ಸೇರಿಸಿ ಪ್ರತಿಭಟನೆ ಮಾಡುವುದು ಎಷ್ಟು ಸರಿ? ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಇಲ್ಲಿ ಬಂದು ಭ್ರಷ್ಟಾಚಾರ ಬಗ್ಗೆ ಮಾತನಾಡವ ಬದಲು ತಮ್ಮ ಕ್ಷೇತ್ರದಲ್ಲಿ ಆಗುತ್ತಿರುವುದರ ಬಗ್ಗೆ ಗಮನ ಹರಿಸಲಿ. ಅಲ್ಲಿನ ಉಪನೋಂದಣಿ ಕಚೇರಿಯಲ್ಲಿ ರಮೇಶ ಜಾರಕಿಹೊಳಿ ಅವರ ಚೀಟಿ ಇಲ್ಲದೆ ಯಾವುದೇ ಖರೀದಿ ನಡಯುವುದಿಲ್ಲ. ನನ್ನನ್ನು ಮಾಜಿ ಮಾಡುವ ಹಗಲುಗನಸು ಬಿಟ್ಟು ಬಿಡಲಿ. ಕಾಗವಾಡದಲ್ಲಿ ನಾನು ಇರುವವರಗೆ ಮಾಜಿ ಶಾಸಕನ್ನು ಹಾಲಿ ಆಗಲು ಬಿಡುವುದಿಲ್ಲ ಎಂದು ಗುಡುಗಿದರು.
‘ಇಂತಹ ರಾಜಕೀಯ ಬಿಟ್ಟು ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರಾಮಾಗಿ ಮನೆಯಲ್ಲಿ ಇರಬೇಕು. ನಾನು ಭ್ರಷ್ಟಾಚಾರ ಮಾಡಿದ್ದರೆ ನಾಲ್ಕು ಬಾರಿ ಶಾಸಕ ಮಾಡಿದ ಜನ ಐದನೇ ಬಾರಿ ಮತ್ತೆ ಶಾಸಕನ್ನಾಗಿ ಮಾಡಲು ಹುಚ್ಚರಲ್ಲ. ನಾನು ತಳ ಮಟ್ಟದ ಪಂಚಾಯಿತಿ ಸದಸ್ಯತ್ವದಿಂದ ರಾಜಕೀಯ ಮಾಡುತ್ತ ಬಂದಿದ್ದೇನೆ ನಿಮ್ಮ ಹಾಗೆ ನೇರವಾಗಿ ಶಾಸಕನಾಗಿಲ್ಲ’ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.