ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರಿಗೆ ವಿತರಿಸಿದ್ದ ಬೆಳ್ಳಿನಾಣ್ಯಗಳು ನಕಲಿ

ಪ್ರಭುನಗರದ ಪರಾಜಿತ ಅಭ್ಯರ್ಥಿ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 13:58 IST
Last Updated 3 ಜನವರಿ 2021, 13:58 IST
ಖಾನಾಪುರ ತಾಲ್ಲೂಕಿನ ಪ್ರಭುನಗರ ಗ್ರಾಮದಲ್ಲಿ ಮತದಾರರಿಗೆ ವಿತರಿಸಲಾಗಿದೆ ಎನ್ನಲಾದ ಅಲ್ಲಮಪ್ರಭು ಭಾವಚಿತ್ರವುಳ್ಳ ನಾಣ್ಯ
ಖಾನಾಪುರ ತಾಲ್ಲೂಕಿನ ಪ್ರಭುನಗರ ಗ್ರಾಮದಲ್ಲಿ ಮತದಾರರಿಗೆ ವಿತರಿಸಲಾಗಿದೆ ಎನ್ನಲಾದ ಅಲ್ಲಮಪ್ರಭು ಭಾವಚಿತ್ರವುಳ್ಳ ನಾಣ್ಯ   

ಖಾನಾಪುರ (ಬೆಳಗಾವಿ): ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಮಗೇ ಮತ ನೀಡುವಂತೆ, ಮತದಾರರನ್ನು ಓಲೈಸಲು ನೀಡಿದ್ದ ಬೆಳ್ಳಿನಾಣ್ಯಗಳು ಬಣ್ಣಕಳೆದುಕೊಂಡಿವೆ ಎಂದು ಮತದಾರರು ದೂರಿದ್ದಾರೆ. ಬೆಳ್ಳಿನಾಣ್ಯ ನೀಡಿ ಜಯಗಳಿಸಿದರು ಎಂದು ಪರಾಜಿತ ಅಭ್ಯರ್ಥಿ ಸಂಗೀತಾ ರವಿ ನಾಯ್ಕ ಆರೋಪಿಸಿ, ಈ ಅಕ್ರಮವನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಭುನಗರ ಗ್ರಾಮದ ವಾರ್ಡ್ ನಂ.2ರ ಅಭ್ಯರ್ಥಿ ಶಾಂತವ್ವ ಹಣಮಂತ ನಾಯ್ಕ್ ಅವರು ಮತದಾರರಿಗೆ ಗ್ರಾಮದ ಆರಾಧ್ಯ ದೈವ ಅಲ್ಲಮಪ್ರಭುವಿನ ಭಾವಚಿತ್ರವುಳ್ಳ ಬೆಳ್ಳಿಯ ನಾಣ್ಯಗಳನ್ನು ವಿತರಿಸಿದ್ದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಸಾಮಾನ್ಯ ಮಹಿಳೆಯರಿಗೆ ಮೀಸಲಿದ್ದ ಕ್ಷೇತ್ರದಲ್ಲಿ ತಾವೂ ಸೇರಿದಂತೆ ಒಟ್ಟು ನಾಲ್ವರು ಮಹಿಳೆಯರು ಸ್ಪರ್ಧಿಸಿದ್ದು, ಚುನಾವಣೆಯ ಹಿಂದಿನ ರಾತ್ರಿ ಅಭ್ಯರ್ಥಿ ಶಾಂತವ್ವ ಪರವಾಗಿ ರಾಜು ಶ್ರೀಕಾಂತ ನಾಯ್ಕ ಎಂಬ ವ್ಯಕ್ತಿ ಈ ನಾಣ್ಯಗಳನ್ನು ವಿತರಿಸಿದ್ದರು. ಕೆಲ ಮತದಾರರು ಬೆಳ್ಳಿ ನಾಣ್ಯಗಳನ್ನು ಪರೀಕ್ಷಿಸಲು ಅಕ್ಕಸಾಲಿಗರ ಬಳಿ ತೆರಳಿದಾಗ ನಿಜಾಂಶ ಬಯಲಿಗೆ ಬಂದಿದೆ. ಬೆಳ್ಳಿ ಲೇಪನ ಇರುವ ನಾಣ್ಯಗಳನ್ನು ಮತದಾರರಿಗೆ ಹಂಚುವ ಮೂಲಕ ಅಕ್ರಮ ಮಾರ್ಗದಿಂದ ಜಯಗಳಿಸಿದ್ದಾರೆ. ಇದರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸಂಗೀತಾ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.