ADVERTISEMENT

ಭಾರತದ ಜೀವನ ಪದ್ಧತಿ ವಿಶ್ವದಲ್ಲೇ ಶ್ರೇಷ್ಠ: ವಜುಭಾಯಿ ವಾಲಾ

ಸರಳ ಜೀವನ, ಉನ್ನತ ಚಿಂತನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 10:31 IST
Last Updated 6 ಜೂನ್ 2019, 10:31 IST
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಪಂಡಿತ್ ದೀನದಯಾಳ್ ಉಪಾದ್ಯಾಯ ಅಧ್ಯಯನ ಪೀಠವನ್ನು ರಾಜ್ಯಪಾಲ ವಜುಭಾಯಿ ಆರ್. ವಾಲಾ ಉದ್ಘಾಟಿಸಿದರು.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಪಂಡಿತ್ ದೀನದಯಾಳ್ ಉಪಾದ್ಯಾಯ ಅಧ್ಯಯನ ಪೀಠವನ್ನು ರಾಜ್ಯಪಾಲ ವಜುಭಾಯಿ ಆರ್. ವಾಲಾ ಉದ್ಘಾಟಿಸಿದರು.   

ಬೆಳಗಾವಿ: ‘ಭಾರತದ ಸಂಸ್ಕೃತಿ ಮತ್ತು ಜೀವನ ಪದ್ಧತಿ ವಿಶ್ವದಲ್ಲೇ ಶ್ರೇಷ್ಠವಾದುದು. ಸರಳ ಬದುಕು ಹಾಗೂ ಉನ್ನತ ಚಿಂತನೆ ನಮ್ಮ ಸಂಸ್ಕೃತಿಯ ತಳಹದಿಯಾಗಿದ್ದು, ಅದನ್ನು ಅಳವಡಿಸಿಕೊಳ್ಳಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ಇಲ್ಲಿನ ವಿಟಿಯು ಸಭಾಂಗಣದಲ್ಲಿ ಗುರುವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಯಂತ್ರೋಪಕರಣಗಳ ಬಳಕೆಯ ಬದಲು ಮಾನವ ಸಂಪನ್ಮೂಲದ ಮೂಲಕವೇ ಉತ್ಪಾದನೆ ಹೆಚ್ಚಿಸಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ಪರಿಹರಿಸಬಹುದು ಹಾಗೂ ದೇಶದ ಆರ್ಥಿಕ‌ ಸ್ಥಿತಿ ಉತ್ತಮಪಡಿಸಬಹುದು ಎನ್ನುವುದು ದೀನದಯಾಳರ ಚಿಂತನೆಯಾಗಿತ್ತು’ ಎಂದು ನೆನಪಿಸಿದರು.

ADVERTISEMENT

ವಿಶ್ವವೇ ಕುಟುಂಬವೆಂದು:‘ಭಾರತೀಯರ ಚಿಂತನೆಯು ತನಗಾಗಿ ಅಲ್ಲ; ಇಡೀ ವಿಶ್ವದ ಹಿತದೃಷ್ಟಿಯಿಂದ ಕೆಲಸ ಮಾಡುವ ಮನೋಭಾವವನ್ನು ಹೊಂದಿದೆ. ಜಗತ್ತಿನ ಎಲ್ಲರೂ ನನ್ನ ಪರಿವಾರ ಎನ್ನುವುದು ನಮ್ಮ ಸಂಸ್ಕೃತಿ. ಎಲ್ಲರೂ ಸುಖವಾಗಿರಲಿ ಎಂಬ ಆಶಯವನ್ನು ಈ ಸಂಸ್ಕೃತಿ ಒಳಗೊಂಡಿದೆ’ ಎಂದು ತಿಳಿಸಿದರು.

‘ದೀನದಯಾಳರ ವಿಚಾರ-ಚಿಂತನೆಗಳನ್ನು ಪ್ರಚಾರಪಡಿಸಲು ಅಧ್ಯಯನ ಪೀಠ ಸ್ಥಾಪಿಸಿರುವ ಆರ್‌ಸಿಯು ಅಭಿನಂದನಾರ್ಹ. ಇದು ವ್ಯವಹಾರಿಕ ವಿಷಯಗಳ ಅಧ್ಯಯನವಲ್ಲ; ಒಂದು ವಿಚಾರಧಾರೆಯನ್ನು ಪ್ರಚುರಪಡಿಸುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಕೈಜೋಡಿಸುವುದು ಈ ಪೀಠದ ಕೆಲಸವಾಗಿದೆ. ಇಲ್ಲಿನ ಬೋಧಕರು ಈ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು’ ಎಂದು ಸೂಚಿಸಿದರು.

ದೀನದಯಾಳ್ ಅವರೊಂದಿಗಿನ ಒಡನಾಟ ನೆನೆದ ಅವರು, ‘ನಾಗರಿಕರಿಗೆ ಸ್ವಾಭಿಮಾನದ ಬದುಕು ಕಲ್ಪಿಸುವ ಮಾರ್ಗಗಳನ್ನು ಅವರು ತಿಳಿಸಿದ್ದರು. ಅವರ ವಿಚಾರಧಾರೆ, ಅರ್ಥನೀತಿ, ಉದ್ಯೋಗ ನೀತಿಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪೀಠ ಮಾಡಲಿ’ ಎಂದು ಆಶಿಸಿದರು.

ಧ್ಯೇಯವಾಗಿ ಅಳವಡಿಸಿಕೊಂಡಿದೆ:ಆಶಯ ನುಡಿಗಳನ್ನಾಡಿದ ನವದೆಹಲಿಯ ಪಂ.ದೀನದಯಾಳ್ ಶೋಧ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಅತುಲ್ ಜೈನ್, ‘ಅತ್ಯಂತ ಶಿಸ್ತಿನ ಜೀವನಶೈಲಿ ರೂಢಿಸಿಕೊಂಡಿದ್ದ ದೀನದಯಾಳರು ನಿಸರ್ಗದ ಶೋಷಣೆ ಕೈಬಿಟ್ಟು ಧರ್ಮಸಮ್ಮತ ಹಾಗೂ ನೈತಿಕತೆಯ ಮಾರ್ಗದಲ್ಲಿ ನಡೆಯುವ ಚಿಂತನೆಯನ್ನು ನಮ್ಮ ಮುಂದಿಟ್ಟಿದ್ದರು’ ಎಂದು ಸ್ಮರಿಸಿದರು.

‘ದಾರ್ಶನಿಕ, ಚಿಂತಕ, ರಾಜಕೀಯ ತಜ್ಞ, ಅತ್ಯುತ್ತಮ ಸಂಘಟಕರಾಗಿದ್ದ ಅವರು, ಭಾರತೀಯರ ದೃಷ್ಟಿಕೋನದ ಹಿನ್ನೆಲೆಯಲ್ಲಿ ರಾಜಕೀಯ ಚಿಂತನೆಯನ್ನು ಪಸರಿಸಿದರು. ನಿಸರ್ಗದ ರಕ್ಷಣೆಗೆ 50 ವರ್ಷಗಳ ಹಿಂದೆ ಪಂ.ದೀನದಯಾಳ್ ಪ್ರಸ್ತುತಪಡಿಸಿದ ವಿಷಯಗಳನ್ನೇ ಇದೀಗ ವಿಶ್ವಸಂಸ್ಥೆಯು ಧ್ಯೇಯಗಳನ್ನಾಗಿ ಅಳವಡಿಸಿಕೊಂಡು ಮುನ್ನಡೆದಿದೆ. ಆದರೆ ಎಲ್ಲಿಯೂ ಅವರನ್ನು ಸ್ಮರಿಸಿಕೊಂಡಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ತಂತ್ರಜ್ಞಾನದ ಅಳವಡಿಕೆ ಭರದಲ್ಲಿ ನಮ್ಮ ದೇಶದ ಸಾಂಸ್ಕೃತಿಕ ಆಶಯಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ಆರ್‌ಸಿಯು ಕುಲಸಚಿವರಾದ ಪ್ರೊ.ರಂಗರಾಜ ವನದುರ್ಗ ಉಪಸ್ಥಿತರಿದ್ದರು.

ಕುಲಪತಿ ಪ್ರೊ.ಶಿವಾನಂದ ಹೊಸಮನಿ ಸ್ವಾಗತಿಸಿದರು. ಕುಲಸಚಿವ ಪ್ರೊ.ಸಿದ್ದು ಆಲಗೂರ ಪರಿಚಯಿಸಿದರು. ಪೀಠದ ಸಂಯೋಜಕ ಡಾ.ಮಹಾಂತೇಶ ಕುರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.