ಹುಕ್ಕೇರಿ: ವಿದ್ಯುತ್ ಸಂಘದ ಆವರಣದಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಪ್ರತಿಭಟನೆಸಹಕಾರ ವಲಯದಲ್ಲಿ ನಡೆಯುತ್ತಿರುವ ರಾಜ್ಯದ ಏಕೈಕ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವು ಇನ್ನೇನು ಚುನಾವಣೆಗೆ ತಯಾರಿ ನಡೆಸುವ ಹೊತ್ತಿನಲ್ಲಿ ಶುಕ್ರವಾರ ಅನೀರಿಕ್ಷಿತವಾಗಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದರು.
ವಿರೋಧ: ನಿರಂತರ ಜ್ಯೋತಿ ಅನುಷ್ಟಾನ ರಾಜ್ಯದೆಲ್ಲಡೆ ಸರ್ಕಾರದ ವೆಚ್ಚದಲ್ಲಿ ನಡೆಯುತ್ತಿದ್ದರೆ, ಇಲ್ಲಿ ಮಾತ್ರ ಇಚ್ಚಿತ ಗ್ರಾಹಕರಿಂದ ಶೇ.50 ರಷ್ಟು ಹಣ ವಸೂಲಿ ಮಾಡುತ್ತಿರುವುದನ್ನು ರೈತ ಸಂಘವು ಖಂಡಿಸುತ್ತದೆ ಮತ್ತು ಬೇರೆಡೆ ಇರುವಂತೆ ಉಚಿತವಾಗಿ ಸಂಪರ್ಕ ಕಲ್ಪಿಸುವಂತೆ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಪ್ರತಿಭಟನೆಯ ಮೂಲಕ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತು ಆಡಳಿತ ಮಂಡಳಿಗೆ ಒತ್ತಾಯಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಸಂಜು ಹಾವಣ್ಣವರ ಮಾತನಾಡಿ, ಕೆಲವೆಡೆ ಟಿಸಿಗೆ ಲೋಡ್ ಬಿದ್ದು ಸುಡುತ್ತಿವೆ. ಅಂತಹ ಸ್ಥಳದಲ್ಲಿ ಹೆಚ್ಚುವರಿ ಟಿ.ಸಿ. ಹಾಕಬೇಕು, ಜನಿನಿಬಿಡ ಸ್ಥಳದಲ್ಲಿನ ಟಿ.ಸಿ.ಸ್ಥಳಾಂತರಿಸಬೇಕು, ನಿರಂತರ ಜ್ಯೋತಿ ಸಂಪರ್ಕಕ್ಕೆ ಎರಡು ದಿನದಲ್ಲಿ ವರ್ಕ್ ಆರ್ಡರ್ ಕೊಡಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ನಾಗರಾಜ ಹಾದಿಮನಿ, ಕಾರ್ಯದರ್ಶಿ ಆನಂದ ಮಗದುಮ್ಮ, ಜಿಲ್ಲಾ ಕಾರ್ಯದರ್ಶಿ ಮಲ್ಲಪ್ಪ ಬೈಲನ್ನವರ ಮಾತನಾಡಿ ಸಂಘದ ಆಡಳಿತ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಆಗಮನಕ್ಕೆ ಒತ್ತಾಯ: ವ್ಯವಸ್ಥಾಪಕ ನಿರ್ದೇಶಕರು ನಮ್ಮ ಅಳಲು ಕೇಳಲು ಕಚೇರಿಗೆ ಬರಬೇಕೆಂದು ಒತ್ತಾಯಿಸಿದ ರೈತರು ಧರಣಿಯ ಪಟ್ಟು ಸಡಿಲಿಸಲಿಲ್ಲ. ವಿಷಯ ಗಂಭಿರತೆ ಪಡೆಯುತ್ತಿದ್ದಂತೆ ಆರ್.ಇ.ನೇಮಿನಾಥ ಖೆಮಲಾಪುರೆ ಅಧ್ಯಕ್ಷ ಜಯಗೌಡ ಪಾಟೀಲರಿಗೆ ವಿಷಯ ತಿಳಿಸಿದರು.
ಅಧ್ಯಕ್ಷ ಜಯಗೌಡ, ನಿರ್ದೇಶಕರಾದ ಶಶಿರಾಜ ಪಾಟೀಲ್, ಬಸಗೌಡ ಮಗೆನ್ನವರ ಸ್ಥಳಕ್ಕೆ ಆಗಮಿಸಿ ರೈತರ ಅಳಲು ಆಲಿಸಿದರು. ಜಯಗೌಡ ಪಾಟೀಲ್ ಮತ್ತು ಆರ್.ಇ. ನೇಮಿನಾಥ ಖೆಮಲಾಪುರೆ ಆಡಳಿತಾತ್ಮಕ ತೊಂದರೆ ವಿವರಿಸಿ, ಕಳೆದ ಎರಡು ತಿಂಗಳಲ್ಲಿ 80 ಹೊಸ ಟಿ.ಸಿ.ಅಳವಡಿಸಿದ್ದೇವೆ ಎಂದು ಹೇಳಿ, ನಿರಂತರ ಜ್ಯೋತಿ ಯೋಜನೆಗೆ ರೂ.45 ಕೋಟಿ ವೆಚ್ದದ ಪ್ರಸ್ತಾವಣೆಯನ್ನು ಸರ್ಕಾರಕ್ಕೆ ಕಳುಹಿಸಿದ್ದು, ಮಂಜೂರಿ ಆದ ತಕ್ಷಣವೇ ಕಾಮಗಾರಿ ಉಚಿತವಾಗಿ ಮಾಡಲಾಗುವುದು ಎಂದು ಸಮಜಾಯಿಸಿದರು.
ಹುಬ್ಬಳ್ಳಿಗೆ ಕೊಡಿ: ರೈತರಿಗೆ ಮಲತಾಯಿ ಧೋರಣೆ ಮಾಡುವುದನ್ನು ನಿಲ್ಲಿಸಿ. ಲೈನಮನ್ ಸೇವೆ ಸರಿಯಿಲ್ಲ. ಟಿಸಿ ಸುಟ್ಟರೆ ಬೇಗನೆ ರಿಪೇರಿ ಆಗ್ತಾ ಇಲ್ಲ ಎಂದು ವಿವಿಧ ಸಮಸ್ಯೆ ವಿವರಿಸಿ, ನಮ್ಮ 28 ಬೇಡಿಕೆಯನ್ನು ಈಡೇರಿಸಲು ಆಗದಿದ್ದರೆ, ಸಂಘವನ್ನು ಹುಬ್ಬಳ್ಳಿಗೆ (ಹೆಸ್ಕಾಂ) ಕೊಡಿ ಎಂದು ಮುಖಂಡರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿವಿಧ ಗ್ರಾಮಗಳ ರೈತ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಧರಣಿ ಸ್ಥಳದಲ್ಲೆ ಅಡುಗೆ?: ಮಧ್ಯಾಹ್ನ 12ಕ್ಕೆ ಪ್ರಾರಂಭಗೊಂಡ ಪ್ರತಿಭಟನೆ ಮೂರುವರೆ ತಾಸು ಆದರೂ ಮುಗಿಯದ ಹಿನ್ನಲೆನಲ್ಲಿ ರೈತರು ಧರಣಿ ಸ್ಥಳದಲ್ಲೆ, ಅನ್ನವನ್ನು ತಯಾರಿಸಿ ಊಟ ಮಾಡಿದರು. ಆಡಳಿತ ಮಂಡಳಿ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಮಾತನಾಡಿದರು. ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ಧರಣಿಯನ್ನು ರೈತರು ಹಿಂಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.