
ಬೈಲಹೊಂಗಲ: ‘ರೈತ ದೇವರ ಸಮಾನ. ದೇಶಕ್ಕೆ ಅನ್ನ ಹಾಕುವ ರೈತರ ಮಕ್ಕಳಿಗೆ ಹೆಣ್ಣು ಕೊಡಬೇಕು. ಇದಕ್ಕೆ ಸರ್ಕಾರ ಮತ್ತು ನಾಡಿನ ಜನತೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು’ ಎಂದು ಪ್ರಗತಿಪರ ರೈತ ಸಿದ್ದಪ್ಪ ಬಿದರಿ ಹೇಳಿದರು.
ಪಟ್ಟಣದ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ನಾಡಿನ ಸಮಸ್ತ ರೈತರು, ಈಶಪ್ರಭು ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಕೃಷಿಕ ಸಮಾಜ, ಕೃಷಿಕ ಪರಿಕರ ಮಾರಾಟಗಾರರ ಸಂಘ, ಗ್ರಾಮೀಣ ಜಾಗೃತ ನಾಗರಿಕ ವೇದಿಕೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಕೆಎಲ್ಇ ಸಂಸ್ಥೆಯ ಕೆ.ವಿ.ಕೆ.ಮತ್ತಿಕೊಪ್ಪ, ರೋಟರಿ ಕ್ಲಬ್ ಆಶ್ರಯದಲ್ಲಿ ಬುಧವಾರ ಆರಂಭಗೊಂಡ ಕೃಷಿಮೇಳ ಹಾಗೂ ಜಾನುವಾರ ಜಾತ್ರೆ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘35ರಿಂದ 40 ವರ್ಷ ಆದರೂ ರೈತರ ಮಕ್ಕಳಿಗೆ ಮದುವೆ ಭಾಗ್ಯವಿಲ್ಲ. ಕನ್ಯಾ ಕೊಡಲು ಸರ್ಕಾರಿ ನೌಕರಿ ಕೇಳುತ್ತಿದ್ದಾರೆ. ರೈತರ ಮಕ್ಕಳಿಗೆ ಹೆಣ್ಣು ಕೊಡಿ ಎಂದು ಎಲ್ಲರೂ ಜಾಗೃತಿ ಮೂಡಿಸಬೇಕು’ ಎಂದರು.
ಶಾಸಕ ಮಹಾಂತೇಶ ಕೌಜಲಗಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ತೆಗೆಯುವ ಕೆಲಸ ಮಾಡಲು ಕೃಷಿಮೇಳ ಸಹಕಾರಿಯಾಗುತ್ತದೆ. ಪ್ರಸ್ತುತ ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ’ ಎಂದ ಅವರು, ಈ ಮೇಳದ ಯಶಸ್ವಿಗೆ ಶ್ರಮಿಸುತ್ತಿರುವ ಕೃಷಿ ಮೇಳ ಸಂಘಟಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿದರು. ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಇಂಚಲ ಪೂರ್ಣಾನಂದ ಭಾರತಿ ಸ್ವಾಮೀಜಿ, ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯ ಪ್ರಭಾ ಅಕ್ಕ, ನಿಡಸೋಸಿ ನಿಜಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದೇವಿ ಆರಾಧಕ ಡಾ.ಮಹಾಂತೇಶ ಶಾಸ್ತ್ರೀಗಳು ಆರಾದ್ರಿಮಠ ಪೂಜೆ ನೆರವೇರಿಸಿದರು.
ಕೃಷಿಮೇಳ ಅಧ್ಯಕ್ಷ ಶಿವರಂಜನ ಬೋಳಣ್ಣವರ, ಜಾನುವಾರು ಜಾತ್ರೆ ಅಧ್ಯಕ್ಷ ಮಡಿವಾಳಪ್ಪ ಹೋಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ.ಕೋಳೇಕರ ಭಾಗವಹಿಸಿದ್ದರು. ಮಹೇಶ ಬೆಲ್ಲದ, ಬಸವರಾಜ ಜನ್ಮಟ್ಟಿ, ಸಿ.ಆರ್.ಪಾಟೀಲ ಎಪಿಎಂಸಿ ಕಾರ್ಯದರ್ಶಿ ಎಸ್.ಎಸ್.ಅರಳಿಕಟ್ಟಿ, ಮಹಾಂತೇಶ ಮತ್ತಿಕೊಪ್ಪ, ಶಂಕರ ಮಾಡಲಗಿ, ಮುಖಂಡರಾದ ಬಿ.ಬಿ.ಗಣಾಚಾರಿ, ಸಿ.ಕೆ.ಮೆಕ್ಕೇದ, ಶ್ರೀಶೈಲ ಯಡಳ್ಳಿ, ಮಹಾಂತೇಶ ಜಿಗಜಿನ್ನಿ, ವಿಠ್ಠಲ ದಾಸೋಗ, ವಿರೂಪಾಕ್ಷ ಕೋರಿಮಠ, ಪ್ರಮೋದಕುಮಾರ ವಕ್ಕುಂದಮಠ, ಸೋಮನಾಥ ಸೊಪ್ಪಿಮಠ, ರಾಜು ಸೊಗಲ, ಮುರಗೇಶ ಗುಂಡ್ಲೂರ, ಸುರೇಶ ಯರಗಟ್ಟಿ, ಶೇಖಪ್ಪ ಜತ್ತಿ, ಅಶೋಕ ಮತ್ತಿಕೊಪ್ಪ, ಸುನೀಲ ಗೋಡಬೊಲೆ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಪಶು ಇಲಾಖೆ ಅಧಿಕಾರಿ ವಿರೂಪಾಕ್ಷ ಅಡ್ಡಣಗಿ, ಮಹಾಬಳೇಶ್ವರ ಬೋಳಣ್ಣವರ ಇದ್ದರು.
ಆರಾಧ್ಯಾ ಯಡಳ್ಳಿ, ಕೃಪಾ ಪತ್ತಾರ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಕೆ.ಜಿ.ಗಡಾದ ರೈತಗೀತೆ ಹಾಡಿದರು. ಮಹಾಂತೇಶ ತುರಮರಿ, ಬಸವರಾಜ ಭರಮಣ್ಣವರ ನಿರೂಪಿಸಿದರು. ಇದಕ್ಕೂ ಮೊದಲು ಶ್ರೀಗಳು, ಗಣ್ಯಮಾನ್ಯರು, ಕಮಿಟಿಯವರು ಗೋ ಪೂಜೆ ಸಲ್ಲಿಸಿದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗಣಾಚಾರಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.