ADVERTISEMENT

ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹ; ಹೊಸದಾಗಿ ಸಾಲ ನೀಡಲು ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 12:05 IST
Last Updated 20 ಸೆಪ್ಟೆಂಬರ್ 2019, 12:05 IST
   

ಬೆಳಗಾವಿ: ‘ಹಿಂದೆಂದೂ ಕಂಡರಿಯದ ಪ್ರವಾಹದಿಂದ ಗ್ರಾಮೀಣ ಜನರ ಬದುಕು ಕೊಚ್ಚಿ ಹೋಗಿದೆ. ಹೀಗಾಗಿ, ರೈತರ ಎಲ್ಲ ಸಾಲವನ್ನೂ ಮನ್ನಾ ಮಾಡಬೇಕು. ಅವರು ಜೀವನ ಕಟ್ಟಿಕೊಳ್ಳಲು ಹೊಸ ಸಾಲ ನೀಡಬೇಕು’ ಎಂದು ರೈತ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡರು, ‘ಸಂತ್ರಸ್ತರಿಗೆ ಕೂಡಲೇ ಪರಿಹಾರ ವಿತರಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, ‘ಹಾನಿಯಾಗಿರುವ ಎಕರೆ ಕಬ್ಬಿಗೆ ₹ 1.50 ಲಕ್ಷ ಪರಿಹಾರ ಹಾಗೂ ಪ್ರತಿ ಜಾನುವಾರುಗೆ ₹80ಸಾವಿರ ಕೊಡಬೇಕು. ನೆರೆಯಿಂದ ನಮ್ಮ ಬದುಕೇ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ, ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಎತ್ತರದ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಡಬೇಕು. ಮೃತರ ಕುಟುಂಬಕ್ಕೆ ₹ 15 ಲಕ್ಷ ಪರಿಹಾರ ನೀಡಬೇಕು. ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ, ಹೊಸ ಸಾಲ ಕೊಡಬೇಕು. ಕಬ್ಬಿನ ಬಿಲ್ ಬಾಕಿ ಕೊಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ವೈಜ್ಞಾನಿಕ ಪರಿಹಾರ ನೀಡಿ:

ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆಯ ಅಧ್ಯಕ್ಷ ಸಿದಗೌಡ ಮೋದಗಿ ಮಾತನಾಡಿ, ‘ವಿಭಕ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ತೋಟಗಳಲ್ಲಿ ಕಟ್ಟಿರುವ ಮನೆಗಳು ಪ್ರವಾಹದಿಂದ ನಾಶವಾಗಿದ್ದು, ಅವುಗಳಿಗೆ ಪರಿಹಾರ ನೀಡುತ್ತಿಲ್ಲ’ ಎಂದು ದೂರಿದರು.

‘ಪ್ರವಾಹದಿಂದ ಹಾನಿಗೆ ಒಳಗಾಗಿರುವ ಉತ್ತರ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಋಣಮುಕ್ತ ಪರಿಹಾರ ಕಾಯ್ದೆ ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಿಸಬೇಕು. ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಿ, ತಕ್ಷಣವೇ ವೈಜ್ಞಾನಿಕವಾದ ಪರಿಹಾರ ಘೋಷಿಸಬೇಕು’ ಎಂದು ಒತ್ತಾಯಿಸಿದರು.

₹ 15 ಲಕ್ಷ ಕೊಡಿ:

ಮುಖಂಡ ಪ್ರಕಾಶ್ ನಾಯಕ್‌ ಮಾತನಾಡಿ, ‘ಸಂತ್ರಸ್ತರ ಕಷ್ಟಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಲಿಲ್ಲ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಶಿಫಾರಸು ಮಾಡಿ, ರಾಜ್ಯ ಸರ್ಕಾರವು ಹೆಚ್ಚಿನ ಪರಿಹಾರ ಕಲ್ಪಿಸಬೇಕಿತ್ತು. ಪ್ರತಿ ರೈತ ಕುಟುಂಬಕ್ಕೆ ಒಂದು ಹಸು ಅಥವಾ ಎಮ್ಮೆ ಕೊಟ್ಟು ವರಮಾನಕ್ಕೆ ದಾರಿ ಮಾಡಿಕೊಡಬೇಕು. ಮನೆ ನಿರ್ಮಾಣಕ್ಕೆ ಕನಿಷ್ಠ ₹ 15 ಲಕ್ಷ ಪರಿಹಾರ ನೀಡಬೇಕು. ಪ್ರವಾಹದಿಂದ ಹಾನಿಗೊಳದ ಜಮೀನುಗಳ ಸ್ವಚ್ಛತೆಗೆ ಆಯಾ ಕುಟುಂಬಗಳಿಗೆ ಮತ್ತು ಕೃಷಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ನೆರೆಯಿಂದ ಬಿದ್ದ ಮನೆ ಕಟ್ಟುವಾಗ ಸಾಮಗ್ರಿಗಳ ಖರೀದಿಗೆ ಜಿಎಸ್‌ಟಿ ವಿಧಿಸಬಾರದು. ಮರಳನ್ನು ಉಚಿತವಾಗಿ ಕೊಡಬೇಕು. ಮರಳು ಸಾಗಿಸಲು ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಜಯಶ್ರೀ ಗುರಣ್ಣವರ, ರಾಘವೇಂದ್ರ ನಾಯಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.