ADVERTISEMENT

ಬೆಳಗಾವಿ: ರೈತರಿಗೆ ವರವಾದ ಕೃಷಿ ಯಂತ್ರ ಧಾರೆ

ಕಡಿಮೆ ಬಾಡಿಗೆಗೆ ಯಂತ್ರಗಳನ್ನು ನೀಡುವ ಯೋಜನೆಯಿಂದ ಲಾಭ

ಎಂ.ಮಹೇಶ
Published 20 ಆಗಸ್ಟ್ 2021, 19:30 IST
Last Updated 20 ಆಗಸ್ಟ್ 2021, 19:30 IST
ತೆಲಸಂಗ ಗ್ರಾಮದ ಕೃಷಿ ಯಂತ್ರ ಧಾರೆ ಕೇಂದ್ರದಲ್ಲಿನ ಯಂತ್ರಗಳು
ತೆಲಸಂಗ ಗ್ರಾಮದ ಕೃಷಿ ಯಂತ್ರ ಧಾರೆ ಕೇಂದ್ರದಲ್ಲಿನ ಯಂತ್ರಗಳು   

ಬೆಳಗಾವಿ: ರಾಜ್ಯ ಸರ್ಕಾರದಿಂದ ಆರಂಭಿಸಿರುವ ‘ಕೃಷಿ ಯಂತ್ರ ಧಾರೆ’ ಯೋಜನೆಯು ಜಿಲ್ಲೆಯ ರೈತರಿಗೆ ವರವಾಗಿ ಪರಿಣಮಿಸಿದೆ.

ಬೇಸಾಯಕ್ಕೆ ಬೇಕಾಗುವ ಯಂತ್ರಗಳನ್ನು ಕಡಿಮೆ ಬಾಡಿಗೆಗೆ ನೀಡುವ ಯೋಜನೆಯಿಂದ ಕೃಷಿಕರಿಗೆ ಅನುಕೂಲವಾಗಿದೆ.

ಜಿಲ್ಲೆಯಲ್ಲಿ 35 ಹೋಬಳಿಗಳಿದ್ದು, ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಗುಂಜಿ ಹೊರತುಪಡಿಸಿ ಉಳಿದೆ 33 ಹೋಬಳಿಗಳಲ್ಲೂ ಸರ್ಕಾರವು ಎನ್‌ಜಿಒ ಅಥವಾ ಸಂಸ್ಥೆಗಳ ಸಹಯೋಗದಲ್ಲಿ ಕೇಂದ್ರಗಳನ್ನು ತೆರೆದಿದೆ.

ADVERTISEMENT

ಎಲ್ಲ ರೀತಿಯ ಯಂತ್ರಗಳನ್ನು ಖಾಸಗಿಯವರಿಗಿಂತ ಕಡಿಮೆ ಬಾಡಿಗೆಗೆ ರೈತರು ಪಡೆದುಕೊಳ್ಳಬಹುದಾಗಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು 15, ವರ್ಷ ಅಸೋಸಿಯೇಟ್ಸ್‌ನವರು 8 ಮತ್ತು ವಿಎಸ್‌ಟಿ ಟಿಲ್ಲರ್ಸ್‌ ಟ್ರ್ಯಾಕ್ಟರ್ಸ್‌ನವರು 10 ಕೇಂದ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಒಪ್ಪಂದದಂತೆ, ಯಂತ್ರಗಳ ಖರೀದಿಗೆ ಸರ್ಕಾರದಿಂದ ಶೇ 75ರಷ್ಟು ಮತ್ತು ಗುತ್ತಿಗೆ ಪಡೆದ ಸಂಸ್ಥೆ ಶೇ 25ರಷ್ಟು ವೆಚ್ಚ ಮಾಡಿವೆ. ನಿರ್ವಹಣೆಯನ್ನು ಆಯಾ ಸಂಸ್ಥೆಗಳೇ ನೋಡಿಕೊಳ್ಳಬೇಕು. ಪ್ರತಿ ಕೇಂದ್ರದಲ್ಲೂ ಲಕ್ಷಾಂತರ ರೂಪಾಯಿ ಮೌಲ್ಯದ ಅತ್ಯಾಧುನಿಕ ಯಂತ್ರೋಪಕರಳು ಲಭ್ಯ ಇವೆ.

‘ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗಲೆಂದು ಯೋಜನೆ ಆರಂಭಿಸಲಾಗಿದೆ. ಪರಿಕರ ಇಲ್ಲದವರಿಗೆ, ಸಕಾಲದಲ್ಲಿ ಬಿತ್ತನೆ ಕಾರ್ಯ ನಡೆಸುವುದಕ್ಕಾಗಿ ಭೂಮಿ ಹದಗೊಳಿಸುವುದಕ್ಕೆ ಅಗತ್ಯವಾಗುವ ಯಂತ್ರಗಳನ್ನು ಪಡೆಯಬಹುದಾಗಿದೆ. ಎಲ್ಲರಿಗೂ ಯಂತ್ರಗಳು ಸಮೀಪದಲ್ಲೇ ಸಿಗುವಂತಾಗಬೇಕು ಎನ್ನುವುದು ಸರ್ಕಾರದ ಉದ್ದೇಶ. ಫೋನ್ ಕರೆ ಮಾಡಿದರೆ ಯಂತ್ರವನ್ನು ಜಮೀನಿಗೆ ಕಳುಹಿಸಲಾಗುತ್ತದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ.

₹ 75 ಲಕ್ಷ ಮೌಲ್ಯದ ಯಂತ್ರೋಪಕರಣ
ತೆಲಸಂಗ:
ಇಲ್ಲಿ ಕೃಷಿ ಯಂತ್ರ ಧಾರೆ 2015ರಲ್ಲಿ ಆರಂಭವಾಗಿದ್ದು, ಇಲ್ಲಿಯವರೆಗೆ 2,715 ರೈತರು ಉಪಯೋಗ ಪಡೆದಿದ್ದಾರೆ. ₹75 ಲಕ್ಷ ವೆಚ್ಚದ ಯತ್ರೋಪಕರಣಗಳಿವೆ. ₹ 10 ಕೋಟಿ ವ್ಯವಹಾರ ನಡೆದಿದೆ. ಖಾಸಗಿಯವರಿಗಿಂತ ಕಡಿಮೆ ಬಾಡಿಗೆ ಪಡೆಯಲಾಗುತ್ತದೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಕೃಷಿಕರು. ಋತುವಿನಲ್ಲಿ ರೈತರು ಹೆಸರು ನೋಂದಾಯಿಸಿ ಮೂರ್ನಾಲ್ಕು ದಿನಗಳು ಕಾಯಬೇಕಾದ ಸ್ಥಿತಿಯೂ ಇರುತ್ತದೆ. 2016ರ ನಂತರ ಹೊಸ ಯಂತ್ರಗಳ ಖರೀದಿಗೆ ಸರ್ಕಾರ ಹಣ ಒದಗಿಸಿಲ್ಲ ಎನ್ನುತ್ತವೆ ಮೂಲಗಳು.

ಸಾವಿರಾರು ಮಂದಿಗೆ ಅನುಕೂಲ
ಹಿರೇಬಾಗೇವಾಡಿ:
ಇಲ್ಲಿ 2015ರಿಂದ ಕೇಂದ್ರ ನಡೆಯುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಿರ್ವಹಿಸುತ್ತಿದೆ. ಈವರೆಗೆ 5,052 ರೈತರು ಅನುಕೂಲ ಪಡೆದಿದ್ದಾರೆ. 10 ಟ್ರ್ಯಾಕ್ಟರ್‌ಗಳು ಸೇರಿದಂತೆ ಹಲವು ಯಂತ್ರೋಪಕರಣಗಳಿವೆ. ಅವುಗಳ ಮೌಲ್ಯ ₹ 1 ಕೋಟಿ ಆಗುತ್ತದೆ. ಕೃಷಿಕರಿಗೆ ಆಧುನಿಕ ಯಂತ್ರೋಪಕರಣಗಳನ್ನು ಪರಿಚಯಿಸುವ ಜೊತೆಗೆ ಸಮಯಕ್ಕೆ ಸರಿಯಾಗಿ ಸೇವೆ ಸಿಗುತ್ತಿದೆ.

‘ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹೆಚ್ಚು ಬೆಲೆ ಬಾಳುವ ಆಧುನಿಕ ಯಂತ್ರೋಪಕರಣಗಳನ್ನು ಖರೀದಿಸಲು ಆಗುವುದಿಲ್ಲ. ಅವನ್ನು ಕಡಿಮೆ ಬಾಡಿಗೆಗೆ ಕಲ್ಪಿಸುವ ಕೇಂದ್ರ ನಮಗೆ ವರದಾನವಾಗಿದೆ’ ಎಂದು ಪ್ರಗತಿಪರ ಕೃಷಿಕ ಈಶ್ವರ ಜಮಖಂಡಿ ಹೇಳಿದರು.

ಯಂತ್ರಗಳಿಗೆ ಮೊರೆ
ಚನ್ನಮ್ಮನ ಕಿತ್ತೂರು:
ಇಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಯಂತ್ರೋಪಕರಣ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ರೈತರ ಸ್ಪಂದನೆ ಹೆಚ್ಚು ಲಾಭ ತರುವಂತಿಲ್ಲ ಎಂದು ಸಂಸ್ಥೆಯ ಮೂಲಗಳು ತಿಳಿಸುತ್ತವೆ. ಕೃಷಿ ಕಾರ್ಯಗಳಿಗೆ ಎತ್ತುಗಳ ಬಳಕೆಯನ್ನು ರೈತ ತುಂಬಾ ಕಡಿಮೆ ಮಾಡಿದ್ದಾನೆ. ಟ್ರ್ಯಾಕ್ಟರ್ ಬಳಸುತ್ತಿದ್ದಾನೆ. ಸಣ್ಣ ರೈತರು ಊರಿನಲ್ಲಿರುವ ದೊಡ್ಡ ರೈತರ ಟ್ರ್ಯಾಕ್ಟರ್ ಬಾಡಿಗೆ ಪಡೆಯುತ್ತಾರೆ. ಊರಿನವರ ಬಳಿಯಾದರೆ ಹಣ ಕೊಡುವುದು ವಿಳಂಬವಾದರೂ ನಡೆಯುತ್ತದೆ. ಯಂತ್ರಧಾರೆ ಯೋಜನೆಯಲ್ಲಿ ರೈತರು ಮುಂಗಡವಾಗಿ ಇಂತಿಷ್ಟು ದುಡ್ಡು ಕಟ್ಟಬೇಕು. ಹೀಗಾಗಿ ರೈತರು ಹೆಚ್ಚು ಸ್ಪಂದಿಸುತ್ತಿಲ್ಲ ಎನ್ನಲಾಗುತ್ತಿದೆ.

ಜಾಗೃತಿ ಮೂಡಿಸಿಲ್ಲ
ಬೈಲಹೊಂಗಲ:
ಕೃಷಿ ಯಂತ್ರಧಾರೆ ಯೋಜನೆ ಮಾಹಿತಿ ತಾಲ್ಲೂಕಿನ ರೈತರಿಗೆಪೂರ್ಣ ಪ್ರಮಾಣದಲ್ಲಿ ತಲುಪಿಲ್ಲ. ‍ಪರಿಣಾಮ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ. ಅಧಿಕಾರಿಗಳ ನಿಷ್ಕಾಳಜಿ ಮತ್ತು ರೈತರಿಗೆ ಸರಿಯಾದ ಮಾಹಿತಿ ತಲುಪಿಸುವ ಕಾರ್ಯ ನಡೆದಿಲ್ಲದಿರುವುದು ಕಾರಣ ಎನ್ನಲಾಗುತ್ತಿದೆ. ಬೈಲಹೊಂಗಲ ಹೋಬಳಿಗೆ ಸಂಬಂಧಿಸಿದ ಕೇಂದ್ರ ಆನಿಗೋಳದಲ್ಲಿದೆ. ನೇಸರಗಿ, ಕಿತ್ತೂರು ಹೋಬಳಿಯಲ್ಲಿಯೂ ತೆರೆಯಲಾಗಿದೆ. ಅವುಗಳ ಮಹತ್ವ ತಿಳಿಸಲು ಕೃಷಿ ಇಲಾಖೆ ತಾಲ್ಲೂಕು ಅಧಿಕಾರಿಗಳು ವಿಫಲವಾಗಿದ್ದಾರೆ ಎಂಬ ಆರೋಪಗಳಿವೆ.

ರೈತ ಸ್ನೇಹಿಯಾದ ಕೇಂದ್ರ
ಮೂಡಲಗಿ:
ಅರಭಾವಿ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಯಂತ್ರಧಾರೆ ಯೋಜನೆಯು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ನಡೆಯುತ್ತಿದ್ದು, ಸಣ್ಣ ರೈತರು ಸದುಪಯೋಗ ಪಡೆದಿದ್ದಾರೆ.

‘ಯೋಜನೆ ಪ್ರಾರಂಭವಾದ 2014–15ರಿಂದಲೂ ಧರ್ಮಸ್ಥಳ ಸಂಸ್ಥೆಯಿಂದ ಕೇಂದ್ರ ನಡೆಯುತ್ತಿದೆ. ಈವರೆಗೆ 8ಸಾವಿರ ರೈತರು ಸದುಪಯೋಗ ಪಡೆದಿದ್ದಾರೆ’ ಎಂದು ಪ್ರಬಂಧಕ ಶಿವಾನಂದ ಎಂ.ವೈ. ತಿಳಿಸಿದರು.

ಟ್ರ್ಯಾಕ್ಟರ್‌, ಪವರ್‌ ಟಿಲ್ಲರ್, ಬೆಳೆ ಕಟಾವು ಯಂತ್ರ, ಬಿತ್ತನೆ ಕೂರಿಗೆ, ಸದಕ ಕಟಾವು ಯಂತ್ರ, ಕಬ್ಬಿನ ರವದಿ ಪುಡಿ ಮಾಡುವ ಯಂತ್ರ, ರೋಟೋವೇಟರ್, ಬಹು ಬೆಳೆ ಒಕ್ಕಣೆ ಯಂತ್ರ ಹೀಗೆ... ಕೃಷಿ ಕೆಲಸಕ್ಕೆ ಅವಶ್ಯವಿರುವ ಎಲ್ಲ ಯಂತ್ರಗಳನ್ನು ಕಡಿಮೆ ಬಾಡಿಗೆಯಲ್ಲಿ ಸಿಗುವುದರಿಂದ ರೈತರು ಕೇಂದ್ರವನ್ನು ಅವಲಂಬಿಸಿದ್ದಾರೆ. ಕೆಲವೊಮ್ಮೆ ಕಾಯಬೇಕಾಗುತ್ತದೆ. ಕೇಂದ್ರವು ರೈತ ಸ್ನೇಹಿಯಾಗಿದೆ.

ಪ್ರಚಾರ ಮಾಡಬೇಕಿದೆ
ಸವದತ್ತಿ:
ಸವದತ್ತಿ, ಮುನವಳ್ಳಿ, ಯರಗಟ್ಟಿ, ಮುರಗೋಡ ಹೋಬಳಿಯಲ್ಲಿ ಕೇಂದ್ರವಿದೆ. ₹ 1 ಕೋಟಿ ಮೌಲ್ಯದ ಯಂತ್ರೋಪಕಣಗಳಿವೆ. ಆದರೆ, ಪ್ರಚಾರದ ಕೊರತೆ ಕಂಡುಬಂದಿದೆ. ಬಹುತೇಕರು ಖಾಸಗಿಯವರ ಮೊರೆ ಹೋಗುತ್ತಿದ್ದಾರೆ.

‘ಸವದತ್ತಿ ಹೋಬಳಿಯ 14,600 ರೈತರಲ್ಲಿ 124 ಮಂದಿ ಮಾತ್ರ ಉಪಯೋಗ ಪಡೆದಿದ್ದಾರೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್. ಮಹಾರಡ್ಡಿ ತಿಳಿಸಿದರು.

ಪ್ರತಿಕ್ರಿಯೆಗಳು
ನನ್ನ ಕೃಷಿ ಕೆಲಸಕ್ಕೆ ಬೇಕಾದ ರೋಟೋವೇಟರ್‌, ಕಬ್ಬಿನ ರವದಿ ಪುಡಿ ಮಾಡುವ ಯಂತ್ರಗಳಿಗಾಗಿ ಕೃಷಿ ಯಂತ್ರಧಾರೆ ಕೇಂದ್ರವನ್ನು ಐದು ವರ್ಷಗಳಿಂದ ಅವಲಂಬಿಸಿರುವೆ. ಕಡಿಮೆ ಬಾಡಿಗೆಯಲ್ಲಿ ಉತ್ತಮ ಸೇವೆ ಇದೆ ಸಿಗುತ್ತಿದೆ.
–ಬಾಳೇಶ ಬೋರಗಲ್‌, ಪ್ರಗತಿಪರ ರೈತ, ಬೀರನಗಡ್ಡಿ ಗ್ರಾಮ, ಮೂಡಲಗಿ ತಾ.

*

ಸರ್ಕಾರದ ಕೃಷಿ ಯಂತ್ರಧಾರೆಯ ಯೋಜನೆಯಿಂದ ರೈತರು ಬಂಡವಾಳ ತೊಡಗಿಸದೆ ಕಡಿಮೆ ಬಾಡಿಗೆಯಲ್ಲಿ ಆಧುನಿಕ ಯಂತ್ರಗಳ ಸೌಲಭ್ಯ ಪಡೆಯುವಂತಾಗಿದೆ.
–ಎಂ.ಎಂ. ನದಾಫ, ಸಹಾಯಕ ಕೃಷಿ ನಿರ್ದೇಶಕ, ಗೋಕಾಕ–ಮೂಡಲಗಿ

*

ಕೃಷಿ ಯಂತ್ರಧಾರೆ ಯೋಜನೆಯು ರೈತರ ಸೇವೆಯಾಗಿದೆಯೇ ಹೊರತು ಲಾಭಕ್ಕಾಗಿ ಅಲ್ಲ. ಪ್ರತಿ ವರ್ಷ ಅರಭಾವಿ ಕೇಂದ್ರದಲ್ಲಿ ₹20ರಿಂದ ₹ 25 ಲಕ್ಷದಷ್ಟು ಬಾಡಿಗೆ ಆಕರಣೆಯಾಗುತ್ತಿದೆ.
–ಶಿವಾನಂದ ಎಂ.ವೈ., ಪ್ರಬಂಧಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಯಂತ್ರಧಾರೆ ಕೇಂದ್ರ, ಅರಭಾವಿ

*

ಸೇವೆಯೇ ಧ್ಯೇಯವಾಗಿರುವ ಕೃಷಿ ಯಂತ್ರಧಾರೆ ಕೇಂದ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಂಡರೆ ಅನುಕೂಲವಾಗುತ್ತದೆ.
–ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

*

ರೈತರ ಬಳಿ ಇಲ್ಲದ ಬಹಳಷ್ಟು ಕೃಷಿ ಯಂತ್ರಗಳು ಕೇಂದ್ರದಲ್ಲಿವೆ. ಹೀಗಾಗಿ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ಇನ್ನಷ್ಟು ರೈತರು ಹೆಚ್ಚೆಚ್ಚು ಪ್ರಯೋಜನ ಪಡೆದುಕೊಳ್ಳಬೇಕು.
–ಯಂಕಪ್ಪ ಉಪ್ಪಾರ, ಕೃಷಿ ಅಧಿಕಾರಿ, ತೆಲಸಂಗ

*

ಕೇಂದ್ರದಿಂದ ಯಾವುದೇ ಲಾಭವನ್ನು ನಿರೀಕ್ಷಿಸದೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಸೂಕ್ತ ಸಮಯದಲ್ಲಿ ಒದಗಿಸುತ್ತಿದ್ದೇವೆ. ಬಹಳಷ್ಟು ರೈತರು ಸದುಪಯೋಗ ಪಡೆದಿದ್ದಾರೆ.
– ಪ್ರದೀಪ ಎಂ.ರಾಯ್ಕರ, ವ್ಯವಸ್ಥಾಪಕ, ಹಿರೇಬಾಗೇವಾಡಿ ಕೇಂದ್ರ
______

(ಪ್ರಜಾವಾಣಿ ತಂಡ: ರವಿ ಎಂ. ಹುಲಕುಂದ, ಪ್ರದೀಪ ಮೇಲಿನಮನಿ, ಬಸವರಾಜ ಶಿರಸಂಗಿ, ಶಿವಕುಮಾರ ಪಾಟೀಲ, ಬಾಲಶೇಖರ ಬಂದಿ, ಜಗದೀಶ ಖೊಬ್ರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.