ADVERTISEMENT

ಡಿ. 7ರಂದು ಸುವರ್ಣ ಸೌಧ ಆವರಣದಲ್ಲಿ ರೈತರ ಪ್ರತಿಭಟನೆ 

ಹಸಿರು ಸೇನೆ ರಾಜ್ಯ ಘಟಕ ಅಧ್ಯಕ್ಷ ಚೂನಪ್ಪ ಪೂಜೇರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 14:21 IST
Last Updated 29 ನವೆಂಬರ್ 2023, 14:21 IST
ಮೂಡಲಗಿ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧಕ್ಷ ಚೂನ್ನಪ್ಪ ಪೂಜೇರಿ ಮಾತನಾಡಿದರು.
ಮೂಡಲಗಿ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧಕ್ಷ ಚೂನ್ನಪ್ಪ ಪೂಜೇರಿ ಮಾತನಾಡಿದರು.   

ಮೂಡಲಗಿ: ‘ಬರದಿಂದ ತತ್ತರಿಸಿದ ರೈತರಿಗೆ ಪರಿಹಾರ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ. 7ರಂದು ಸುವರ್ಣ ಸೌಧದ ಆವರಣದಲ್ಲಿ ಪ್ರತಿಭಟನೆ ಮಾಡಲಿದ್ದೇವೆ. ರಾಜ್ಯದ ವಿವಿಧ ಜಿಲ್ಲೆಗಳ ರೈತರು ಅಪಾರ ಸಂಖ್ಯೆಯಲ್ಲಿ ಸೇರಲಿದ್ದು, ಮೂಡಲಗಿ ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಚೂನ್ನಪ್ಪ ಪೂಜೇರಿ ಹೇಳಿದರು.

ಬುಧುವಾರ ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ಎಕರೆಗೆ ಕನಿಷ್ಠ ₹ 30 ಸಾವಿರ ಪರಿಹಾರ, ನಿರಂತರ 12 ಗಂಟೆಗಳ ಕಾಲ ವಿದ್ಯುತ್ ಪೂರೈಕೆ, ಪ್ರತಿ ಟನ್ ಕಬ್ಬಿಗೆ ₹ 5500 ಬೆಂಬಲ ಬೆಲೆ, 60 ವರ್ಷದ ವೃದ್ಧ ರೈತರಿಗೆ ₹ 5000 ಮಾಸಾಶನ, ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಜೊತೆಗೆ ಸಕ್ಕರೆ ಇಲಾಖೆ ಮತ್ತು ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಸೇವಕ್ ಸೇರಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು’ ಎಂದರು.

ರೈತ ಸಂಘಟನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ರಾಜು ಪವಾರ ಹಾಗೂ ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಅಂಗಡಿ ಮಾತನಾಡಿ, ‘ಸದನವು ಕೇವಲ ಹರಟೆ ಹೊಡೆಯುವ ಅಧಿವೇಶನವಾಗಬಾರದು. ಉತ್ತರ ಕರ್ನಾಟಕ ಅನೇಕ ಸಮಸ್ಯೆಗಳ ಬಗ್ಗೆ ಮತ್ತು ಅಭಿವೃದ್ಧಿ ಕುರಿತು ಚರ್ಚೆಯಾಗಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯುವಂತ ಚರ್ಚೆ ನಡೆಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಚಳಿಗಾಲದ ಅಧಿವೇಶನದಲ್ಲಿ ದುಂದು ವೆಚ್ಚ ನಿಲ್ಲಬೇಕು. ಅದಕ್ಕಾಗಿ ಅಧಿವೇಶನದಲ್ಲಿ ಭಾಗವಹಿಸುವ ಎಲ್ಲ ಸಚಿವರಿಗೆ, ಶಾಕರಿಗೆ ಮತ್ತು ಅಧಿಕಾರಿಗಳಿಗೆ ಬೆಳಗಾವಿ ಸುತ್ತಮುತ್ತಲಿರುವ ರೈತರ ಮನೆಗಳಲ್ಲಿ ವಾಸ್ತವಕ್ಕೆ ಅನುಕೂಲ ಮಾಡಿಕೊಡಲಾಗುವುದು. ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಸಚಿವ, ಶಾಸಕ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಸಸಾಲಟ್ಟಿ, ರವೀಂದ್ರ ನುಚ್ಚುಂಡಿ, ಪ್ರಕಾಶ ತೇರದಾಳ, ವಿವೇಕ ಸನದಿ, ರಮೇಶ ಪಾಲಭಾಂವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.