ADVERTISEMENT

ಬೆಳಗಾವಿ: ರಸ್ತೆ ಮೇಲೆ ಮಲಗಿ ರೈತರ ಆಕ್ರೋಶ

ಸ್ಥಳೀಯ ರೈತರಿಂದಲೇ ಗಜ್ಜರಿ ಖರೀದಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 14:11 IST
Last Updated 30 ಜನವರಿ 2024, 14:11 IST
ಬೆಳಗಾವಿಯ ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆ ಎದುರಿನ ರಸ್ತೆಯಲ್ಲಿ ಮಲಗಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು– ‍ಪ್ರಜಾವಾಣಿ ಚಿತ್ರ
ಬೆಳಗಾವಿಯ ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆ ಎದುರಿನ ರಸ್ತೆಯಲ್ಲಿ ಮಲಗಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು– ‍ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಇಲ್ಲಿನ ಜೈ ಕಿಸಾನ್ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಸ್ಥಳೀಯ ರೈತರ ಬದಲಿಗೆ, ಹೊರರಾಜ್ಯದ ದಲ್ಲಾಳಿ ಗಜ್ಜರಿ ಖರೀದಿಸಿ ಮೋಸ ಮಾಡಲಾಗುತ್ತಿದೆ’ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಾರುಕಟ್ಟೆ ಎದುರು ರಸ್ತೆಯಲ್ಲೇ ಮಲಗಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮಾರುಕಟ್ಟೆ ಆವರಣದಲ್ಲಿ ಗಜ್ಜರಿ ಸುರಿದ ಆಕ್ರೋಶ ವ್ಯಕ್ತಪಡಿಸಿದ ರೈತರು, ‘ಬೆಳಗಾವಿ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಜ್ಜರಿ ಬೆಳೆಯಲಾಗುತ್ತಿದೆ. ಆದರೆ, ಇಲ್ಲಿನ ವರ್ತಕರು ಮಾರಾಟಕ್ಕಾಗಿ ಹೊರರಾಜ್ಯದಿಂದ ಗಜ್ಜರಿ ತರಿಸುತ್ತಿರುವುದರಿಂದ ದರ ಕುಸಿಯುತ್ತಿದೆ. ಬೆಳೆಯೂ ಮಾರಾಟವಾಗದೆ ಸ್ಥಳೀಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಹಾಗಾಗಿ ಸ್ಥಳೀಯ ರೈತರಿಂದಲೇ ಗಜ್ಜರಿ ಖರೀದಿಸಬೇಕು’ ಎಂದು ಒತ್ತಾಯಿಸಿದರು.

‘ಇಲ್ಲಿ ವಿವಿಧ ತರಕಾರಿಗಳ ಖರೀದಿ ವೇಳೆ, ತೂಕದಲ್ಲಿ ಆಗುತ್ತಿರುವ ಮೋಸ ತಡೆಗಟ್ಟಬೇಕು. ಸಕಾಲಕ್ಕೆ ರೈತರಿಗೆ ಬಿಲ್‌ ಪಾವತಿಸಬೇಕು’ ಎಂದೂ ಆಗ್ರಹಿಸಿದರು.

ADVERTISEMENT

‘ನಿಮ್ಮ ಬೇಡಿಕೆಗೆ ಸ್ಪಂದಿಸುತ್ತೇವೆ’ ಎಂದು ಮಾರುಕಟ್ಟೆ ಆಡಳಿತ ಮಂಡಳಿಯವರು ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆ ಕೈಬಿಟ್ಟರು.

ಮುಖಂಡರಾದ ಪ್ರಕಾಶ ನಾಯ್ಕ, ರಾಜು ಮಾರ್ವೆ, ಭರಮಾ ನಂದಿಹಳ್ಳಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.