ADVERTISEMENT

ಬೆಳಗಾವಿ ಜಿಲ್ಲೆಯಲ್ಲೂ ಹೆದ್ದಾರಿ ಬಂದ್ ಮಾಡಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 10:57 IST
Last Updated 6 ಫೆಬ್ರುವರಿ 2021, 10:57 IST
ಮೂರು ಕೃಷಿ ಕಾಯ್ದೆಗಳ ವಾಪಸ್‌ಗೆ ಆಗ್ರಹಿಸಿ ರೈತರು ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಟೋಲ್‌ಗೇಟ್‌ನಲ್ಲಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಪ್ರಜಾವಾಣಿ ಚಿತ್ರ
ಮೂರು ಕೃಷಿ ಕಾಯ್ದೆಗಳ ವಾಪಸ್‌ಗೆ ಆಗ್ರಹಿಸಿ ರೈತರು ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಟೋಲ್‌ಗೇಟ್‌ನಲ್ಲಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಪ್ರಜಾವಾಣಿ ಚಿತ್ರ   

ಬೆಳಗಾವಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಚಳವಳಿ ಬೆಂಬಲಿಸಿ, ಜಿಲ್ಲೆಯಲ್ಲೂ ರೈತ ಸಂಘಟನೆಯವರು ವಿವಿಧೆಡೆ ಹೆದ್ದಾರಿ ತಡೆದು ಶನಿವಾರ ಪ್ರತಿಭಟಿಸಿದರು.

ತಾಲ್ಲೂಕಿನ ಹಿರೇಬಾಗೇವಾಡಿ ಟೋಲ್‌ಗೇಟ್‌ನಲ್ಲಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ನೇತೃತ್ವದಲ್ಲಿ 25 ರೈತರು ಒಂದು ತಾಸು ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದರು. ಬಾಯಿ ಬಡಿದುಕೊಂಡು, ರಸ್ತೆಯಲ್ಲಿ ಉರುಳುಸೇವೆ ಮಾಡಿದರು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಬೈಲಹೊಂಗಲ ತಾಲ್ಲೂಕು ಚಿಕ್ಕಬಾಗೇವಾಡಿಯಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ರೈತ ಮುಖಂಡ ಬಾಬಾಗೌಡ ಪಾಟೀಲ ನೇತೃತ್ವದಲ್ಲಿ ರೈತರು ಬೈಲಹೊಂಗಲ–ಬೆಳಗಾವಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ಚನ್ನಮ್ಮನ ಕಿತ್ತೂರು ತಾಲ್ಲೂಕಿನ ನಿಚ್ಚಣಕಿಯ ಮುಖಂಡ ಅಪ್ಪೇಶ ದಳವಾಯಿ ನೇತೃತ್ವದಲ್ಲಿ ಕಿತ್ತೂರು- ತಡಕೋಡ ರಸ್ತೆ ಬಂದ್ ಮಾಡಿದರು. ನಿಪ್ಪಾಣಿಯ ಸಂಭಾಜಿ ವೃತ್ತದಲ್ಲಿ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ಸವದತ್ತಿಯಲ್ಲಿ ಪ್ರತಿಭಟಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.