ADVERTISEMENT

ಹೆಸರು ಕಾಳು ಖರೀದಿ ಷರತ್ತು ಸಡಿಲಿಕೆಗೆ ಆಗ್ರಹಿಸಿ ರೈತರಿಂದ ಟ್ರ್ಯಾಕ್ಟರ್ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 2:43 IST
Last Updated 11 ನವೆಂಬರ್ 2025, 2:43 IST
ಬೈಲಹೊಂಗಲದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು
ಬೈಲಹೊಂಗಲದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಬೈಲಹೊಂಗಲ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಂಬಲ ಬೆಲೆ ಯೋಜನೆಯಡಿ ರೈತರು ಬೆಳೆದ ಹೆಸರು, ಉದ್ದು ಖರೀದಿಗೆ ಸರ್ಕಾರ ಹಾಗೂ ನೆಫೆಡ್ ಸಂಸ್ಥೆಯವರು ವಿಧಿಸಿರುವ ತೇವಾಂಶ ಮತ್ತು ಕಾಳಿನ ಗುಣಮಟ್ಟ ಮಾನದಂಡ ಸಡಿಲಿಕೆಗೆ ಆಗ್ರಹಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ಸಹಸ್ರಾರು ರೈತರು ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ದೊಡವಾಡ ಗ್ರಾಮದಿಂದ ದೊಡವಾಡ, ನನಗುಂಡಿಕೊಪ್ಪ, ಗುಡಿಕಟ್ಟಿ, ಬುಡರಕಟ್ಟಿ, ಕರೀಕಟ್ಟಿ, ಸಂಗ್ರೇಶಕೊಪ್ಪ, ಯಡಳ್ಳಿ, ಗೋವನಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳ ರೈತರು ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪಕ್ಕೆ ಬಂದಿಳಿದರು. ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಮೂರ್ತಿಗೆ ಹೂವು ಮಾಲೆ ಅರ್ಪಿಸಿ ಗೌರವ ಸಲ್ಲಿಸಿದರು.

ಬಳಿಕ ರಸ್ತೆ ಮಧ್ಯ ಕುಳಿತು ಡೊಳ್ಳು, ಹಲುಗೆ ಬಾರಿಸಿ ಹಸಿರು ಟವೆಲ್ ಕೈಯಲ್ಲಿ ಎತ್ತಿ ಹಿಡಿದು, ಬಾಯಿ ಬಡಿದುಕೊಂಡು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ರೈತರು ರಸ್ತೆ ಬಂದ್ ಮಾಡಿದ್ದರಿಂದ ಸರದಿ ಸಾಲಿನಲ್ಲಿ ಸಾಕಷ್ಟು ವಾಹನಗಳು ನಿಂತಿದ್ದವು. ಎಪಿಎಂಸಿ ಗಣೇಶ ದೇವಸ್ಥಾನ, ಇಂಚಲ ಕ್ರಾಸ್, ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಮುರಗೋಡ ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದರು. ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಡೊಳ್ಳು, ಭಜನೆ, ಹಲಗೆ ವಾದ್ಯಮೇಳದೊಂದಿಗೆ ಸರ್ಕಾರದ ವಿರುದ್ದ ದಿಕ್ಕಾರ ಕೂಗಿದರು.

ADVERTISEMENT

ರೈತ ಮುಖಂಡರಾದ ನಿಂಗಪ್ಪ ಚೌಡನ್ನವರ ಮಾತನಾಡಿ, ‘ದೊಡವಾಡ ಗ್ರಾಮದಲ್ಲಿನ ಖರೀದಿ ಕೇಂದ್ರಕ್ಕೆ ನೇಮಿಸಿರುವ ಅಧಿಕಾರಿಗಳು ಕಳಪೆ ಗುಣಮಟ್ಟದ ನೆಪವೊಡ್ಡಿ ಹೆಸರು ಹಾಗೂ ಉದ್ದು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ದೊಡವಾಡ ಹಾಗೂ ಸುತ್ತಲಿನ ಗ್ರಾಮಗಳ ಪಕ್ಕದಲ್ಲಿರುವ ಧಾರವಾಡ ಜಿಲ್ಲಾ ವ್ಯಾಪ್ತಿಯ ರೈತರಿಗೆ ಪ್ರತಿ ವರ್ಷ ಬೆಳೆಹಾನಿ ಪರಿಹಾರ, ಬೆಳೆ ವಿಮೆ ಮತ್ತು ಸರ್ಕಾರದ ಸೌಲಭ್ಯಗಳು ದೊರೆಯುತ್ತವೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿರುವ ನಮಗೆ ಯಾವುದೇ ಸೌಲಭ್ಯಗಳ ನೆರವಿಲ್ಲ. ನಮ್ಮ ಗ್ರಾಮಗಳನ್ನು ಕೂಡಲೇ ಧಾರವಾಡ ಜಿಲ್ಲೆಗೆ ಸೇರಿಸಿಬೇಕು’ ಎಂದು ಆಗ್ರಹಿಸಿದರು. 

ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸೂಕ್ತ ಪರಿಹಾರ ಘೋಷಿಸುವರೆಗೂ ಪ್ರತಿಭಟನಾ ಸ್ಥಳ ಬಿಟ್ಟು ಕದಲುವುದಿಲ್ಲ. ಎ.ಸಿ ಕಚೇರಿಗೆ ಬೀಗ ಜಡಿದು ಅಹೋರಾತ್ರಿ ಹೋರಾಟ ಮಾಡಲಾಗವುದು ಎಂದು ಎಚ್ಚರಿಸಿದರು.

ಶಂಕರ ಮಾಡಲಗಿ, ಸಂಗಯ್ಯ ದಾಬಿಮಠ, ಮಹಾಂತೇಶ ಕಮತ, ಶ್ರೀಶೈಲ ಚವಡನ್ನವವರ ಮಾತನಾಡಿದರು.

ಸ್ಥಳಕ್ಕೆ ತಹಶೀಲ್ದಾರ್ ಎಚ್.ಎನ್. ಶಿರಹಟ್ಟಿ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಎಂ.ಡಿ.ಚೆಬನೂರು, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಸುನೀಲ ಗುಡಬೋಲೆ ರೈತರ ಮನವೊಲಿಸಲು ಪ್ರಯತ್ನ ಮಾಡಿದರು. ರೈತರು ಹಠಬಿಡದೇ ಪ್ರತಿಭಟನೆ ಮುಂದುವರಿಸಿದರು. ನೂರಾರು ರೈತರು ಪಾಲ್ಗೊಂಡಿದ್ದರು.

ಬೈಲಹೊಂಗಲದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಸೋಮವಾರ ಬೃಹತ್ ಟ್ರ್ಯಾಕ್ಟರ್ ರ್ರ್ಯಾಲಿ ನಡೆಸಿದರು.
ಬೈಲಹೊಂಗಲದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬೈಲಹೊಂಗಲದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಸೋಮವಾರ ಬೃಹತ್ ಟ್ರ್ಯಾಕ್ಟರ್ ರ್ರ್ಯಾಲಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.