ADVERTISEMENT

ಫಸಲ್ ಬಿಮಾ: 1,277 ಪ್ರಸ್ತಾವ ತಿರಸ್ಕೃತ!

​ಪ್ರಜಾವಾಣಿ ವಾರ್ತೆ
Published 25 ಮೇ 2021, 16:20 IST
Last Updated 25 ಮೇ 2021, 16:20 IST

ಬೆಳಗಾವಿ: ಜಿಲ್ಲೆಯಲ್ಲಿ 2018- 19ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ತಿರಸ್ಕೃತಗೊಂಡ ಅರ್ಜಿಗಳಿಗೆ ಸಂಬಂಧಿಸಿದಂತೆ ಕೃಷಿಕರು ಆಕ್ಷೇಪಣೆ ಸಲ್ಲಿಸಬಹುದು’ ಎಂದು ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರೈತರ ಬೆಳೆ ವಿಮೆಗೆ ನೋಂದಣಿಯಾದ ಪ್ರಸ್ತಾವಗಳನ್ನು ಬೆಳೆ ಸಮೀಕ್ಷೆಯ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿ, ಸರ್ಕಾರದಿಂದ ಅನುಮೋದನೆಯಾದ ವಿನಾಯಿತಿಗಳನ್ನು ಅಳವಡಿಸಿ ತಾಳೆ ಅದವುಗಳನ್ನು ತಂತ್ರಾಂಶದಲ್ಲಿ ವಿಮಾ ಪರಿಹಾರಕ್ಕಾಗಿ ಲೆಕ್ಕ ಹಾಕಲಾಗಿದೆ. ತಾಳೆ ಆಗಲಾರದ ಪ್ರಸ್ತಾವಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಪರಿಶೀಲಿಸಲು ‘ಸಂರಕ್ಷಣೆ ತಂತ್ರಾಂಶ’ದ ಮೂಲಕ ಕಳುಹಿಸಲಾಗಿತ್ತು’.

‘ಅಧಿಕಾರಿಗಳು ಬಳಿಕ ಸಂಬಂಧಿಸಿದ ವಿಮಾ ಸಂಸ್ಥೆಯವರು ಪ್ರಸ್ತಾವಗಳನ್ನು ಪರಿಶೀಲಿಸಿದ್ದಾರೆ. ವಿಮಾ ಸಂಸ್ಥೆಯಿಂದ ತಿರಸ್ಕೃತವಾದ ಒಟ್ಟು 1,277 (ಕೃಷಿ 1169 ಮತ್ತು ತೋಟಗಾರಿಕೆ 108) ಪ್ರಸ್ತಾವಗಳನ್ನು ಕೃಷಿ, ತೋಟಗಾರಿಕೆ ಇಲಾಖೆಯ ತಾಲೂಕು ಮಟ್ಟದ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಹಾಕಲಾಗಿದೆ. ಆ ರೈತರ ಮೊಬೈಲ್ ಫೋನ್ ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಆಕ್ಷೇಪಣೆ ಇದ್ದಲ್ಲಿ, ಮರುಪರಿಶೀಲನೆ ಮನವಿಯನ್ನು ಜೂನ್ 11ರೊಳಗೆ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ಸಹಾಯಕ ಕೃಷಿ/ತೋಟಗಾರಿಕೆ ನಿರ್ದೇಶಕರ ಕಚೇರಿಗಳಿಗೆ ಸಲ್ಲಿಸಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.