ADVERTISEMENT

‘ದೋಷವಿರುವುದು ಸಂವಿಧಾನದಲ್ಲಲ್ಲ; ಅನುಷ್ಠಾನದಲ್ಲಿ’

ನಿವೃತ್ತ ನ್ಯಾ.ನಾಗಮೋಹನ ದಾಸ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 16:18 IST
Last Updated 6 ಡಿಸೆಂಬರ್ 2018, 16:18 IST
ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ನಡೆದ ಮೌಢ್ಯವಿರೋಧಿ ಪರಿವರ್ತನಾ ದಿನ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನದಾಸ್ ಮಾತನಾಡಿದರು
ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ನಡೆದ ಮೌಢ್ಯವಿರೋಧಿ ಪರಿವರ್ತನಾ ದಿನ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನದಾಸ್ ಮಾತನಾಡಿದರು   

ಬೆಳಗಾವಿ: ‘ದೇಶದ ಹಲವು ಸಮಸ್ಯೆಗಳು ಮತ್ತು ಸವಾಲುಗಳಿಗೆ ಸಂವಿಧಾನ ಕಾರಣ ಎಂದು ಕೆಲವರು ವಾದಿಸುತ್ತಿದ್ದಾರೆ. ಅದು ಸುಳ್ಳು. ದೋಷವಿರುವುದು ಸಂವಿಧಾನದಲ್ಲಲ್ಲ; ಅದನ್ನು ಅನುಷ್ಠಾನಗೊಳಿಸುತ್ತಿರುವ ನಮ್ಮಲ್ಲಿ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ ದಾಸ್ ಪ್ರತಿ‍ಪಾದಿಸಿದರು.

‌ಡಾ.ಬಿ.ಆರ್. ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದ ಅಂಗವಾಗಿ ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಗುರುವಾರ ಆಯೋಜಿಸಿದ್ದ ಮೌಢ್ಯ ವಿರೋಧಿ ಪರಿವರ್ತನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ಅವರು, ನಿದ್ರಿಸುತ್ತಿದ್ದವರನ್ನು ಬಡಿದೆಬ್ಬಿಸಿದವರು ಹಾಗೂ ದನಿ ನೀಡಿದರು. ದುಡಿಯುವ ಜನರ ಹಿತಕ್ಕಾಗಿ ಕಾನೂನು ತಂದರು. ಮಹಿಳೆಯರ ಪರವಾಗಿ ಹೋರಾಡಿದರು. ಅವರನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯೇ?’ ಎಂದು ಕೇಳಿದರು.

ADVERTISEMENT

ಪಾಲಿಸಬೇಕು:‘ಅವರು ಜಾಗತಿಕ ನಾಯಕ. ಅವರನ್ನು ಗೌರವಿಸುವುದು ಎಂದರೆ ಅವರ ಬಗ್ಗೆ ಅಮಲು ಏರಿಸಿಕೊಳ್ಳುವುದಲ್ಲ; ಅವರ ವಿಚಾರಗಳ ಅರಿವು ಮೂಡಿಸುವುದು ಹಾಗೂ ಅವುಗಳನ್ನು ಪಾಲಿಸುವುದು. ಆಗ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ’ ಎಂದರು.

‘ನಿಜವಾದ ಭಾರತ ನಿರ್ಮಾಣವಾಗಿದೆ ಎಂದರೆ ಅದು ಸಂವಿಧಾನ ಬಂದ ಮೇಲೆಯೇ ಎನ್ನುವುದನ್ನು ಮರೆಯಬಾರದು. ಸಂವಿಧಾನ ರಚನೆಯಾಗಿ, ಜಾತಿ ವ್ಯವಸ್ಥೆ ದ್ವಂಸ ಮಾಡಿದ್ದರಿಂದಲೇ ಸಾಮಾನ್ಯರು ಕೂಡ ದೊಡ್ಡ ಹುದ್ದೆಗಳನ್ನು ಏರಬಹುದಾಗಿದೆ. ಚಹಾ ಮಾರುತ್ತಿದ್ದ ವ್ಯಕ್ತಿ ಪ್ರಧಾನಿಯಾಗಲು, ಮಧ್ಯಮ ವರ್ಗದ ನನ್ನಂಥವರು ನ್ಯಾಯಾಧೀಶರಾಗಲು ಸಾಧ್ಯವಾಗಿದೆ’ ಎಂದು ತಿಳಿಸಿದರು.

‘ನಾವು ಅಧಿಕಾರಕ್ಕೆ ‌ಬಂದಿದ್ದೇ ಸಂವಿಧಾನ ಬದಲಾಯಿಸಲು ಎಂದು ಕೇಂದ್ರ ಸಚಿವರೊಬ್ಬರು ಹೇಳುತ್ತಾರೆ. ಕೆಲವರು ಸುಡಬೇಕು ಎಂದಿದ್ದಾರೆ. ಆ ಯತ್ನವೂ ನಡೆದಿದೆ. ಸಂವಿಧಾನವನ್ನು ಸುಡಬೇಕು ಎನ್ನುವುದು ಅನಾಗರಿಕ ಪ್ರವೃತ್ತಿ. ಸಹಿಷ್ಣುತೆ ಬೇಕು. ಸಂವಿಧಾನವನ್ನು ಮೊದಲು ಓದಿ ಅರ್ಥ ಮಾಡಿಕೊಳ್ಳಬೇಕು‌’ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು. ‘ಸಂವಿಧಾನ ಉಳಿಸಿಕೊಳ್ಳುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ’ ಎಂದರು.

ಸಂವಿಧಾನ ಉಳಿಸಿಕೊಳ್ಳಬೇಕು:‘ಸಂವಿಧಾನವಿಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ. ಆಗ, ನಾವು ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಕಳೆದುಕೊಳ್ಳುತ್ತೇವೆ. ಮೂಲಭೂತವಾದ, ಕೋಮುವಾದ ರಾರಾಜಿಸುತ್ತದೆ. ಇದನ್ನು ತಪ್ಪಿಸಲು ಸಂವಿಧಾನ ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸಂವಿಧಾನವೆಂದರೆ ಕಾದಂಬರಿಯಲ್ಲ, ಕಥೆಯಲ್ಲ, ಕವನಸಂಕಲನವಲ್ಲ; ಅದೊಂದು ಸಾಮಾಜಿಕ ಕಾರ್ಯಕ್ರಮ. ಅದನ್ನು ಓದಿ ಅರ್ಥ ಮಾಡಿಕೊಂಡು ಮೂಲ ಆಶಯಗಳನ್ನು ಪಾಲಿಸಬೇಕು. ಆಗ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು’ ಎಂದರು.

‘ಮೌಢ್ಯಗಳಿಂದ ಹೊರಬರಬೇಕಾದರೆ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ಆಂದೋಲನ ಯಶಸ್ವಿಯಾಗಲಿ. ರಚನಾತ್ಮಕ ಕಾರ್ಯಕ್ರಮಗಳು ಯಶಸ್ವಿಯಾಗಲಿ’ ಎಂದು ಹೇಳಿದರು.

ಪುಸ್ತಕ ಬಿಡುಗಡೆ:ಮಹಾರಾಷ್ಟ್ರದ ಉಸ್ತರಿ ಮಠದ ವಿಶ್ವನಾಥ ಕೊರಣೇಶ್ವರ ಅಪ್ಪ ಸ್ವಾಮೀಜಿ, ಬಸವಕಲ್ಯಾಣ ಅನುಭವ ಮಂಟಪ ವಿಶ್ವ ಬಸವ ಧರ್ಮ ಟ್ರಸ್ಟ್‌ನ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ತತ್ವಗಳನ್ನು ಪಾಲಿಸಿದಾಗ ಮೌಢ್ಯಗಳಿಂದ ಹೊರಬಹುದಾಗಿದೆ’ ಎಂದು ತಿಳಿಸಿದರು.

ಸಂಕೇಶ್ವರದ ಕಲಾ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಏಕ್ತಾ ಕಾಡಪ್ಪ ಮಸಾನೆ ಮಾತನಾಡಿದರು. ಲೇಖಕ ಜಿ. ಪ್ರಶಾಂತ ನಾಯಕ ವಿರಚಿತ, ಮಾನವ ಬಂಧುತ್ವ ವೇದಿಕೆ ಪ್ರಕಾಶನ ಹೊರತಂದಿರುವ ‘ದಾರ್ಶನಿಕ ದಾರಿ’ ಪುಸ್ತಕ ಬಿಡುಗಡೆ ಮಾಡಲಾಯಿತು. ಕಲಾವಿದ ಬಾಬುರಾವ ನಡೋಣಿ ಹಾಗೂ ಕಲಾವಿದರ ಬಳಗದಿಂದ ಮೌಢ್ಯ ವಿರೋಧಿ ಕಲಾಕೃತಿಗಳ ರಚನೆ ನಡೆಯಿತು.

ಕನ್ನಡ ಪ್ರಾಧ್ಯಾಪಕಿ ಪ್ರೊ.ಮೀನಾಕ್ಷಿ ಬಾಳಿ, ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ, ವ್ಯವಸ್ಥಾಪಕ ರಾಮಕೃಷ್ಣ ಪಾನಬುಡೆ ಇದ್ದರು.

ದಾವಣಗೆರೆ ವಿಭಾಗೀಯ ಸಂಚಾಲಕ ಅನಂತ ನಾಯ್ಕ ನಿರೂಪಿಸಿದರು. ವಿಭಾಗೀಯ ಸಂಚಾಲಕ ಆರ್. ಜಯಕುಮಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.