ADVERTISEMENT

ಹಬ್ಬಗಳು ಭಾವೈಕ್ಯ ಬೆಳೆಸುವ ಕೊಂಡಿಯಾಗಿವೆ: ಮಹಾಂತೇಶ ಕವಟಗಿಮಠ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 6:56 IST
Last Updated 31 ಜುಲೈ 2025, 6:56 IST
ಬೆಳಗಾವಿಯ ಶಿವಬಸವ ನಗರದ ಕಾರಂಜಿಮಠದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯಲ್ಲಿ ಗುರುಸಿದ್ಧ ಸ್ವಾಮೀಜಿ ಮಾತನಾಡಿದರು
ಬೆಳಗಾವಿಯ ಶಿವಬಸವ ನಗರದ ಕಾರಂಜಿಮಠದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯಲ್ಲಿ ಗುರುಸಿದ್ಧ ಸ್ವಾಮೀಜಿ ಮಾತನಾಡಿದರು   

ಬೆಳಗಾವಿ: ‘ಭಾರತವು ಸಂಸ್ಕೃತಿ, ಆಚಾರ–ವಿಚಾರಗಳ ಬೀಡಾಗಿದೆ. ಶತಮಾನಗಳ ಪರಕೀಯರ ಆಳ್ವಿಕೆ ನಂತರವೂ, ಇಲ್ಲಿ ಮೂಲ ಸಂಸ್ಕೃತಿ ಉಳಿದಿದೆ. ಇದಕ್ಕೆ ಕಾರಣವಾದ ಹಬ್ಬಗಳು ಪರಸ್ಪರರಲ್ಲಿ ಭಾವೈಕ್ಯ ಬೆಳೆಸುವ ಕೊಂಡಿಯಾಗಿವೆ’ ಎಂದು ವಿಧಾನ ಪರಿಷತ್‌ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅಭಿಪ್ರಾಯಪಟ್ಟರು. 

ಇಲ್ಲಿನ ಶಿವಬಸವ ನಗರದ ಕಾರಂಜಿಮಠದಲ್ಲಿ ಹಮ್ಮಿಕೊಂಡಿದ್ದ 289ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಶ್ರಾವಣ ಮಾಸದ ಪ್ರಥಮ ಸೋಮವಾರದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತೀಯ ಸಂಸ್ಕೃತಿ ಹಾಗೂ ಹಬ್ಬಗಳ ಮಹತ್ವ’ ಕುರಿತು ಉಪನ್ಯಾಸ ನೀಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಮನೋಹರ ಮಠದ, ‘ತನ್ನ ಶ್ರೀಮಂತ ಸಂಸ್ಕೃತಿ ಮತ್ತು ವೈವಿಧ್ಯಮಯ ಹಬ್ಬಗಳಿಗೆ ಭಾರತ ಹೆಸರುವಾಸಿಯಾಗಿದೆ. ಇಲ್ಲಿನ ಹಬ್ಬಗಳು ಕೇವಲ ಆಚರಣೆಗಳಾಗಿ ಉಳಿದಿಲ್ಲ. ಬದಲಿಗೆ, ಸಮಾಜದ ಏಕತೆ, ಸಹೋದರತ್ವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿವೆ’ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ‘ಭಾರತೀಯ ಹಬ್ಬಗಳು ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳ ಮೇಲೆ ಅವಲಂಬನೆಯಾಗಿವೆ. ಭಗವಂತನ ಆರಾಧನೆ ಮತ್ತು ಆಧ್ಯಾತ್ಮಿಕ ಉನ್ನತಿಗೆ ಇವು ಅವಕಾಶ ನೀಡುತ್ತವೆ’ ಎಂದು ಹೇಳಿದರು.

ಕುಮಾರೇಶ್ವರ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು ವಚನ ಪ್ರಾರ್ಥನೆ ನೆರವೇರಿಸಿದರು. ಎ.ಕೆ.ಪಾಟೀಲ ನಿರೂಪಿಸಿದರು. ವಿ.ಕೆ. ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.