
ಸಂಕೇಶ್ವರ: ಕೆರೆಗಳನ್ನು ತುಂಬುವುದರಿಂದ ಭೂಮಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸೋಮವಾರ ಸಂಕೇಶ್ವರದ ಹಿರಣ್ಯಕೇಶಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಕೇಶ್ವರದ ಬಳಿ ಹರಿಯುವ ಹಿರಣ್ಯಕೇಶಿ ನದಿಯಿಂದ ಹುಕ್ಕೇರಿ ತಾಲೂಕಿನ 22 ಕೆರೆಗಳಿಗೆ ಹಾಗೂ ಚಿಕ್ಕೋಡಿ ತಾಲೂಕಿನ 11 ಕೆರೆಗಳಿಗೆ ಕಳೆದ 5 ವರ್ಷಗಳಿಂದ ನೀರು ತುಂಬಿಸಲಾಗುತ್ತಿದೆ. ಇದರಿಂದ ಭೂಮಿಯಲ್ಲಿ ನೀರಿನ ಮಟ್ಟವು ಹೆಚ್ದಾಗುತ್ತಿದೆ. ಈ ಹಿಂದೆ ಬೋರವೆಲ್‌ಗಳಿಗೆ ನೀರು ಬರಬೇಕಾದರೆ 800 ಅಡಿ ಕೊರೆಯಬೇಕಾಗಿತ್ತು. ಆದರೆ ಈಗ ಕೆರೆಗಳಿಗೆ ನೀರು ತುಂಬಿಸುತ್ತಿರುವುದರಿಂದ ಭೂಮಿಯಲ್ಲಿ ನೀರಿನ ಮಟ್ಟವು ಹೆಚ್ಚಳವಾಗಿದೆ. ಹೀಗಾಗಿ ಈಗ 300 ಅಡಿಗಳಿಗೆ ನೀರು ಸಿಗುತ್ತಿದೆ’ ಎಂದು ಅವರು ಹೇಳಿದರು.
ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ಹೊಸದಾಗಿ 4 ಕಡೆ ಬಾಂದಾರ ನಿರ್ಮಾಣಕ್ಕೆ ₹ 60 ಕೋಟಿ ಹಣ ಮಂಜೂರಾಗಿದೆ. ಇದರಿಂದ ವರ್ಷದ 12 ತಿಂಗಳೂ ನದಿಯಲ್ಲಿ ನೀರು ಲಭಿಸಲಿದ್ದು ಜನ, ಜಾನುವಾರು ಹಾಗೂ ಭೂಮಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಹಿರಿಯ ಸಹಕಾರಿ ಧುರೀಣರಾದ ಕೆ.ಬಿ. ಪಾಟೀಲ, ಗಜಾನನ ಕ್ವಳ್ಳಿ, ಸಂಜಯ ಶಿರಕೋಳಿ, ಅಮರ ನಲವಡೆ, ಶ್ರೀಕಾಂತ ಹತನೂರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.