ಬೆಳಗಾವಿ: ಶಾಸಕ ಅಭಯ ಪಾಟೀಲ ಅಕ್ರಮ ಆಸ್ತಿ ಸಂಪಾದಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಈ ದೂರು ದಾಖಲಿಸಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಈ ವಿಷಯ ತಿಳಿಸಿದ ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ, ‘ಅಭಯ ಪಾಟೀಲ ಅವರ ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ನಾನು 2012ರಿಂದಲೂ ಹೋರಾಟ ಮಾಡುತ್ತಿದ್ದೇನೆ. ಲೋಕಾಯುಕ್ತ ಅಧಿಕಾರಿಗಳಿಗೆ ದಾಖಲೆ ಸಮೇತ ದೂರು ಕೂಡ ನೀಡಿದ್ದೆ. ಈ ಹಿಂದೆ ಹೈಕೋರ್ಟ್ ಮೊರೆಹೋಗಿದ್ದ ಅಭಯ ಪಾಟೀಲ, ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸದಂತೆ ಆದೇಶ ಪಡೆದಿದ್ದರು. ಆಗ ನಮಗೆ ಹಿನ್ನಡೆ ಆಗಿತ್ತು. ಆದರೂ ನಾನು ಸುಪ್ರೀಂಕೋರ್ಟ್‌ಗೆ ಹೋಗಿ ಪ್ರಕರಣ ದಾಖಲಿಸುವಂತೆ ಹೋರಾಟ ಮಾಡಿದ್ದೇನೆ’ ಎಂದರು.
‘ಅಭಯ ಪಾಟೀಲ ತಮ್ಮ ಹಾಗೂ ತಮ್ಮ ಕುಟುಂಬದವರ ಹೆಸರಿನಲ್ಲಿ ಮಿತಿಗಿಂತ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ. ನಾನು ದೂರು ನೀಡಿದ ನಂತರ ಮೂರು ಬಾರಿ ತನಿಖಾ ವರದಿಗಳು ಸಲ್ಲಿಕೆಯಾಗಿವೆ. ಆದರೂ ಆಗಿನ ಅಧಿಕಾರಿಗಳು ಎಫ್‌ಐಆರ್ ದಾಖಲಿಸಲಿಲ್ಲ. ಶಾಸಕ ಇದನ್ನು ತಡೆದರು. ಆದರೆ, ಈಚೆಗೆ ಸುಪ್ರೀಂಕೋರ್ಟ್ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳನ್ನೇ ಪ್ರಶ್ನೆ ಮಾಡಿದೆ. ಎಫ್‌ಐಆರ್ ದಾಖಲೆಗೆ ಏಕೆ ವಿಳಂಬ ಎಂದು ಕೇಳಿದೆ. ಲೋಕಾಯುಕ್ತ ಪರ ವಕೀಲರಿಗೆ ನಿರ್ದೇಶನ ಕೂಡ ನೀಡಿದೆ. ಹೀಗಾಗಿ, ಮೇ 21ರಂದು ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿರುವ ಬೆಳಗಾವಿ ಲೋಕಾಯುಕ್ತರು, ಅದನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ’ ಎಂದರು.
‘ಈಗಲಾದರೂ ಲೋಕಾಯುಕ್ತ ಅಧಿಕಾರಿಗಳು ನ್ಯಾಯಸಮ್ಮತ ಹೆಜ್ಜೆ ಇಡಬೇಕು. ಅಕ್ರಮ ಆಸ್ತಿಯ ಬಗ್ಗೆ ನಿಖರ ವರದಿ ನೀಡಬೇಕು’ ಎಂದೂ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.