ADVERTISEMENT

ಬೆಳಗಾವಿ: 'ದೂಟಿ'ಗೆ ಹೋದ ಮಗ ಬೂದಿಯಾಗಿ ಬಂದಾಗ...

ಸಂತೋಷ ಈ.ಚಿನಗುಡಿ
Published 8 ಆಗಸ್ಟ್ 2024, 6:00 IST
Last Updated 8 ಆಗಸ್ಟ್ 2024, 6:00 IST
ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ
ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ   

ಬೆಳಗಾವಿ: ಯವ್ವ ದೂಟಿಗೆ (ಡ್ಯೂಟಿ) ಹೋಗಿ ಬರತೇನ್‌ ಎಂದು ಹೇಳಿ ಹೋದ ಮಗ ಎಂದೂ ಬಾರದ ಲೋಕಕ್ಕೆ ಹೋದ. ತುತ್ತಿನಚೀಲ ತುಂಬಿಸಿಕೊಳ್ಳಲು ಚಿಲ್ಲರೆ ಸಂಬಳಕ್ಕೆ ದುಡಿಯುತ್ತಿದ್ದ ಯುವಕ ಸುಟ್ಟು ಕರಕಲಾದ. ಯಾರೋ ಮಾಡಿದ ತಪ್ಪಿಗೆ ಹದಿಹರೆಯದವನ ಬದುಕೇ ಬೂದಿಯಾಯಿತು. ಕೋಟಿ ಕನಸುಗಳು ಕಮರಿಹೋದವು. ಹೆಗಲ ಮೇಲೆ ಆಡಿ ಬೆಳೆದ ಪುತ್ರನ ದೇಹವನ್ನು ತಂದೆ ಕೈಚೀಲದಲ್ಲಿ ಹಾಕಿಕೊಂಡು ಮನೆಯತ್ತ ಹೊರಟರು. ಎದೆಹಾಲುಣಿಸಿ ಎದೆಯೆತ್ತರಕ್ಕೆ ಬೆಳೆಸಿದ ಮಗ ಬೂದಿಯಾಗಿ ಬಂದದ್ದನ್ನು ಕಂಡು ತಾಯಿಜೀವ ಹೇಗೆ ಸಹಿಸಿಕೊಂಡಿತೋ ಏನೋ...

ತಾಲ್ಲೂಕಿನ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ದುರಂತದ ಚಿತ್ರಣವಿದು.

ಮಂಗಳವಾರ ರಾತ್ರಿ ಧಗಧಗಿಸುತ್ತಿದ್ದ ಕಾರ್ಖಾನೆಯಲ್ಲಿ ಮಗ ಸಿಕ್ಕಿಕೊಂಡಿದ್ದಾನೆ ಎಂಬ ಸುದ್ದಿ ಹೆತ್ತವರಿಗೆ ಬರಸಿಡಿಲಿನಂತೆ ಎರಗಿತು. ಸ್ಥಳಕ್ಕೆ ಬಂದ ತಂದೆ–ತಾಯಿ ‘ಯಪ್ಪಾ ಏನರ ಮಾಡಿ ಮಗನ ಉಳಸೋ ದೇವರೇ...’ ಎಂದು ಅಂಗಲಾಚಿದರು. ಹರೆಯದ ಮಗ ಬೆಂಕಿಯಲ್ಲಿ ಸಿಕ್ಕಿಕೊಂಡಿದ್ದನ್ನು ಕಂಡ ತಾಯಿ ಕರುಳು ಇನ್ನಿಲ್ಲದಂತೆ ಹಲುಬಿತು.

ADVERTISEMENT

ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಯುವಕನ ಬದುಕನ್ನೇ ಬಲಿ ಪಡೆದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಟಿಕ್ಸೊ ಟೇಪ್‌ಗಳನ್ನು ತಯಾರಿಸುತ್ತಿದ್ದ ಕಾರ್ಖಾನೆ ಸಂಪೂರ್ಣ ಸುಟ್ಟುಹೋಗಿದೆ. ಅದರೊಂದಿಗೆ ಹಲವರ ಕನಸುಗಳೂ ಹೊಗೆಯಾಗಿ ಹೋಗಿವೆ.

ಮೂರು ತಿಂಗಳ ಹಿಂದಷ್ಟೇ ಸೇರಿದ್ದ: ದುರದಂತದಲ್ಲಿ ಮೃತಪಟ್ಟ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (20) ಕೇವಲ ಮೂರು ತಿಂಗಳ ಹಿಂದಷ್ಟೇ ‘ಹೆಲ್ಪರ್‌’ ಕೆಲಸಕ್ಕೆ ಸೇರಿದ್ದ. ತಿಂಗಳಿಗೆ ₹12 ಸಾವಿರ ಮಾತ್ರ ಸಂಬಳ. ಎರಡು ಸಂಬಳ ಮಾತ್ರ ಪಡೆದಿದ್ದ. ಅಷ್ಟರೊಳಗೆ ಆತನ ಬದುಕೇ ಕಮರಿಹೋಗಿದೆ.

ವಯಸ್ಸಾದ ತಂದೆ-ತಾಯಿ, ಮೂವರು ಸಹೋದರಿಯರ ಪಾಲಿಗೆ ಯಲ್ಲಪ್ಪ ಆಧಾರವಾಗಿದ್ದ. ಒಬ್ಬನೇ ಪುತ್ರ. ದುಡಿದು ಬದುಕಬೇಕು, ಸಹೋದರಿಯರಿಗೆ ಮದುವೆ ಮಾಡಿ ಕೊಡಬೇಕು ಎಂಬ ಹಂಬಲ ಹೊಂದಿದ್ದ. ಆತ ಕಾರ್ಖಾನೆಯ ಲಿಫ್ಟ್‌ನಲ್ಲಿ ಇದ್ದಾಗಲೇ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ ಆಗಿ ಹೊತ್ತಿಕೊಂಡ ಬೆಂಕಿ ದುರಂತ ತಂದೊಡ್ಡಿತು. ಯಲ್ಲಪ್ಪ ಸಜೀವ ದಹನವಾದ.

ಮುಳುಗಡೆ ಸಂತ್ರಸ್ತರು: ಗುಂಡ್ಯಾಗೋಳ ಕುಟುಂಬದವರು ಮಾರ್ಕಂಡೇಯ ನದಿ ನೀರಿನಲ್ಲಿ ಮುಳುಗಡೆಯಾದ ಸಂತ್ರಸ್ತರು. ಬೆಳಗಾವಿಯಿಂದ 15 ಕಿ.ಮೀ ದೂರದಲ್ಲಿ ಕಲ್ಪಿಸಿದ ಪುನರ್ವಸತಿ ಪ್ರದೇಶದಲ್ಲಿ ಅವರು ವಾಸವಾಗಿದ್ದಾರೆ. ಎಲ್ಲೋ ಒಂದು ಕಡೆ ನೀರಿನಿಂದ ಬದುಕು ಮುಳುಗಿತ್ತು. ಇಲ್ಲಿ ಬೆಂಕಿ ನಾಶ ಮಾಡಿದೆ.

ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ಕಾರ್ಖಾನೆಯಲ್ಲಿ ಭಸ್ಮವಾದ ಯುವಕನ ದೇಹವನ್ನು ವಿಧಿವಿಜ್ಞಾನ ಪ್ರಯೋಗಲಾಯದ ಸಿಬ್ಬಂದಿ ಸ್ಥಳದಲ್ಲೇ ಪರಿಶೀಲಿಸಿದರು – ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಯಲ್ಲಪ್ಪನ ಕುಟುಂಬಕ್ಕೆ ದೊಡ್ಡ ಸಂಕಷ್ಟ ಬಂದಿದೆ. ಇದು ಅನ್ಯಾಯದ ಸಾವು. ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಕಾರ್ಮಿಕರ ಕುಟುಂಬಕ್ಕೆ ಧೈರ್ಯ ಕೊಡಬೇಕು
ಬಸವರಾಜ ಪೆಂಡಾರಿ, ಮೃತ ಯಲ್ಲಪ್ಪನ ಸಂಬಂಧಿ
ಇಂಥ ದುರಂತಗಳು ಮರಳದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು. ಪ್ರಕರಣದ ತನಿಖೆ ಆಗಬೇಕು. ಈ ಪ್ರದೇಶದಲ್ಲಿ ಸಾಕಷ್ಟು ಕಾರ್ಖಾನೆಗಳಿದ್ದು ತಪಾಸಣೆ ನಡೆಸಬೇಕು
ಚಿದಂಬರ ಪಾಟೀಲ, ನಾವಗೆ ನಿವಾಸಿ

400 ಕಾರ್ಮಿಕರು ಬೀದಿಪಾಲು

ಸ್ನೇಹಂ ಕಾರ್ಖಾನೆಯಲ್ಲಿ 400 ಕಾರ್ಮಿಕರು ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಖಾನೆ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಎಲ್ಲ ಕುಟುಂಬಗಳೂ ಈಗ ಚಿಂತೆಗೀಡಾಗಿವೆ. ಅಲ್ಲಿ ಮರಳಿ ಕೆಲಸ ಮಾಡುವಂಥ ಯಾವುದೇ ಅಂಶ ಉಳಿದಿಲ್ಲ. ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್ ಎಸ್ಪಿ ಭೀಮಾಶಂಕರ ಗುಳೇದ ನಗರ ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್ ಮಾರ್ಬನ್ಯಾಂಗ್‌ ಮಾಲಿನ್ಯ ನಿಯಂತ್ರಣ ಮಂಡಳಿ ಆರೋಗ್ಯ ಇಲಾಖೆ ಪರಿಸರ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಇಡೀ ಜಿಲ್ಲಾಡಳಿತ ಸ್ಥಳದಲ್ಲಿ ಸೇರಿ ಪರಿಸ್ಥಿತಿ ನಿಯಂತ್ರಿಸಿತು.

ಕಾರ್ಖಾನೆಯಲ್ಲಿ ದೊಡ್ಡ ಸಿಲಿಂಡರ್‌ಗಳು ಇರುವ ಕಾರಣ ಅವು ಸ್ಫೋಟಗೊಳ್ಳುವ ಆತಂಕ ಎದುರಾಗಿತ್ತು. ಆದರೆ ಸಿಲಿಂಡರ್‌ಗಳು ಸ್ಫೋಟವಾಗುವುದಿಲ್ಲ. ಜನ ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ ನಂತರ ಜನ ನಿರುಮ್ಮಳರಾದರು. ಮೂರು ಜಿಲ್ಲೆಗಳಿಂದ ಕರೆಸಿದ 250 ಅಗ್ನಿಶಾಮಕ ಸಿಬ್ಬಂದಿ 50 ಎನ್‌ಡಿಆರ್‌ಎಫ್‌ ಸಿಬ್ಬಂದಿ 200 ಪೊಲೀಸರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರು.

16 ತಾಸು ಉರಿದ ಕೆಂಡ

ಕಾರ್ಖಾನೆಯಲ್ಲಿ ಪ್ಲಾಸ್ಟಿಕ್‌ ಟೇಪ್‌ ಪೈಪ್‌ ಎಸಿ ಸೇರಿದಂತೆ ಅಗ್ನಿರೋಚಕ ವಸ್ತುಗಳು ಹೆಚ್ಚಾಗಿದ್ದವು. ಹೀಗಾಗಿ ಕ್ಷಣಾರ್ಧದಲ್ಲೇ ಬೆಂಕಿ ಕೆನ್ನಾಲಿಗೆ ಚಾಚಿತು. 16 ತಾಸು ಕಸರತ್ತು ಮಾಡಿದರೂ ನಂದಲೇ ಇಲ್ಲ. ಕೊನೆಗೆ ಜೆಸಿಬಿ ಯಂತ್ರಗಳನ್ನು ಬಳಸಿ ಕಟ್ಟಡದ ಗೋಡೆಗಳನ್ನು ಒಡೆಯಲಾಯಿತು. ಅದರ ಮೂಲಕ ನೀರು ಚಿಮ್ಮಿಸಿ ನಂದಿಸಲಾಯಿತು. ಕಟ್ಟಡ ನಾಲ್ಕೂ ಕಡೆ ಸರಿಯಾದ ಕಿಟಕಿ– ಬಾಗಿಲ ವ್ಯವಸ್ಥೆ ಇಲ್ಲದಿರುವುದೇ ಕಾರ್ಯಾಚರಣೆಗೆ ಅಡ್ಡಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.