ADVERTISEMENT

ಬೆಳಗಾವಿ ವಿವಿಧೆಡೆ ನಷ್ಟಕ್ಕೆ ಒಳಗಾದ ಬೆಳೆಗಾರರು;ಕೈಗೆ ಬಂದ ಕಬ್ಬು ‘ಬೆಂಕಿ’ ಪಾಲು!

ಜಿಲ್ಲೆಯ ವಿವಿಧೆಡೆ ನಷ್ಟಕ್ಕೆ ಒಳಗಾದ ಬೆಳೆಗಾರರು

ಎಂ.ಮಹೇಶ
Published 11 ಜನವರಿ 2019, 19:31 IST
Last Updated 11 ಜನವರಿ 2019, 19:31 IST
ಮೋಳೆ-ಕಾತ್ರಾಳ ನಡುವಿನ ಕಬ್ಬಿನ ಗದ್ದೆಯಲ್ಲಿ ಈಚೆಗೆ ಬೆಂಕಿ ಹೊತ್ತಿಕೊಂಡಿದ್ದ ದೃಶ್ಯ
ಮೋಳೆ-ಕಾತ್ರಾಳ ನಡುವಿನ ಕಬ್ಬಿನ ಗದ್ದೆಯಲ್ಲಿ ಈಚೆಗೆ ಬೆಂಕಿ ಹೊತ್ತಿಕೊಂಡಿದ್ದ ದೃಶ್ಯ   

ಬೆಳಗಾವಿ: ಚಳಿಗಾಲದಲ್ಲೂ ಜಿಲ್ಲೆಯ ವಿವಿಧೆಡೆ ಸಂಭವಿಸುತ್ತಿರುವ ಬೆಂಕಿ ಅವಘಡಗಳಿಂದಾಗಿ ನೂರಾರು ಎಕರೆ ಕಬ್ಬು ಸುಟ್ಟು ಹೋಗಿ, ರೈತರು ಅಪಾರ ಹಾನಿ ಅನುಭವಿಸುತ್ತಿದ್ದಾರೆ. ಸಮರ್ಪ‍ಕ ಪರಿಹಾರ ದೊರೆಯದೇ ಕಂಗಾಲಾಗಿದ್ದಾರೆ.

ಕಟಾವಿಗೆ ಬಂದ ಕಬ್ಬು ಬೆಂಕಿಗೆ ಆಹುತಿಯಾಗುವ ಘಟನೆಗಳು ಇತ್ತೀಚೆಗೆ ಸಾಮಾನ್ಯ ಎನ್ನುವಂತಾಗಿವೆ. ಒಂದಲ್ಲಾ ಒಂದು ಕಡೆ ಈ ಅನಾಹುತ ಸಂಭವಿಸುತ್ತಿರುವ ವರದಿಯಾಗುತ್ತಿದೆ. ಕಷ್ಟಪಟ್ಟು ಬೆಳೆದು ಕೈಗೆ ಬಂದ ಕಬ್ಬಿನ ಗದ್ದೆ, ಕೆಲವೆಡೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಅಥವಾ ಕಿಡಿಗೇಡಿಗಳ ಕೃತ್ಯದಿಂದಾಗಿ ಬೆಂಕಿ ಪಾಲಾಗುತ್ತಿದೆ. ಬೆಳೆಯಿಂದ ವರಮಾನದ ನಿರೀಕ್ಷೆಯಲ್ಲಿದ್ದ ಬೆಳೆಗಾರರು ತೊಂದರೆಗೆ ಒಳಗಾಗುವಂತಾಗಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಬರುವ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ, ಹಚ್ಚಿನ ಅನಾಹುತವಾಗುವುದನ್ನು ತಪ್ಪಿಸುತ್ತಾರಾದರೂ ಆಗಿರುವ ನಷ್ಟಕ್ಕೆ ಹೊಣೆ ಯಾರು ಎನ್ನುವಂತಾಗಿದೆ.

ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ‌

ADVERTISEMENT

ಕಂದಾಯ, ಹೆಸ್ಕಾಂ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ, ರೈತರಿಗೆ ನೀಡಲಾಗುವ ಅಷ್ಟೋ ಇಷ್ಟೋ ಪರಿಹಾರವೂ ಕೂಡ ಸಿಗದಂತಾಗಿದೆ. ಯಾವೊಂದು ಇಲಾಖೆಯ ಅಧಿಕಾರಿಗಳೂ ಜವಾಬ್ದಾರಿ ತೆಗೆದುಕೊಳ್ಳದಿರುವುದೇ ಇದಕ್ಕೆ ಕಾರಣ.

ಕಾಗವಾಡ, ಮೋಳೆ, ಅಥಣಿ, ಚಿಕ್ಕೋಡಿ, ನಿ‍ಪ್ಪಾಣಿ, ಬೆಳಗಾವಿ, ರಾಯಬಾಗ ತಾಲ್ಲೂಕುಗಳಲ್ಲಿ ಎರಡು ತಿಂಗಳಿಂದ 20ಕ್ಕೂ ಹೆಚ್ಚು ಬೆಂಕಿ ಅವಘಡ ಪ್ರಕರಣಗಳು ನಡೆದಿವೆ. ಬಹುತೇಕ ಕಡೆಗಳಲ್ಲಿ ಅದರಲ್ಲೂ ಅಥಣಿ ಹಾಗೂ ಕಾಗವಾಡ ತಾಲ್ಲೂಕುಗಳಲ್ಲಿ ಬಾಗಿರುವ ವಿದ್ಯುತ್‌ ಕಂಬಗಳು, ಕೆಳಮಟ್ಟಕ್ಕೆ ಬಂದಿರುವ (ಕೈಗೆಟಕುವಂತೆ) ತಂತಿಗಳಿಂದ ಶಾರ್ಟ್‌ಸರ್ಕೀಟ್‌ ಆಗಿ ಬೆಂಕಿ ಕಾಣಿಸಿಕೊಂಡಿದ್ದು ವರದಿಯಾಗಿದೆ. ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಉದಾಹರಣೆಗಳೂ ಇವೆ.

ಇಳುವರಿಯೂ ಸಿಗದು

ಪರಿಹಾರ ಕೊಡಿಸಲು ಅಧಿಕಾರಿಗಳು ಹಲವು ನಿಯಮಗಳನ್ನು ಹೇಳುತ್ತಿರುವುದು ಕಂಡುಬರುತ್ತಿದೆ. ಹೀಗೆ ಅರ್ಧಂಬರ್ಧ ಸುಟ್ಟು ಹೋಗಿ ಉಳಿದ ಕಬ್ಬಿನಿಂದ ಉತ್ತಮ ಇಳುವರಿಯನ್ನೂ ನಿರೀಕ್ಷಿಸಲಾಗದು. ಅಲ್ಲದೇ, ಕಾರ್ಖಾನೆಯವರು ಕೊಟ್ಟಷ್ಟು ಹಣವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯ ಬೆಳೆಗಾರರದಾಗಿದೆ.

ಶಾರ್ಟ್‌ಸರ್ಕೀಟ್ ಪ್ರಕರಣದಲ್ಲಿ, ಈ ರೈತರಿಗೆ ಹೆಸ್ಕಾಂನವರು ಪರಿಹಾರ ನೀಡಬೇಕು. ಅದಕ್ಕೂ ಮುನ್ನ ಸಮೀಕ್ಷೆ ನಡೆಸಲಾಗುತ್ತದೆ. ‘ಜಿಲ್ಲೆಯಲ್ಲಿ ಬಹುತೇಕ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಕಬ್ಬು ಬೆಂಕಿಗೆ ಆಹುತಿಯಾಗುವ ಘಟನೆಗಳು ಜಾಸ್ತಿ. ರೈತರಿಗೆ ಪರಿಹಾರ ಕೊಡಿಸುವ ಕೆಲಸವನ್ನು ಕೆಇಬಿಯವರೇ ಮಾಡಬೇಕು. ನಮಗೂ ಅದಕ್ಕೂ ಸಂಬಂಧವಿಲ್ಲ. ಎಷ್ಟು ಘಟನೆಗಳು ನಡೆದಿವೆ ಎನ್ನುವ ವರದಿಯೂ ನಮಗೆ ಬರುವುದಿಲ್ಲ. ಬಣವೆಗಳು ಸುಟ್ಟರೆ ಕನಿಷ್ಠ ₹ 2ಸಾವಿರದಿಂದ ಗರಿಷ್ಠ ₹ 10ಸಾವಿರದವರೆಗೆ ಪರಿಹಾರ ಕೊಡಲಾಗುತ್ತಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ಪ್ರತಿಕ್ರಿಯಿಸಿದರು.

ಕಡಿಮೆ ಪ್ರಮಾಣದಲ್ಲಿದೆ

‘ವಿದ್ಯುತ್‌ ಶಾರ್ಟ್‌ಸರ್ಕೀಟ್‌ ಪ್ರಕರಣದಿಂದಲೇ ಕಬ್ಬು ಸುಟ್ಟಿದ್ದ ಪಕ್ಷದಲ್ಲಿ ನಿಯಮಾನುಸಾರ ಪರಿಹಾರ ನೀಡಲಾಗುತ್ತದೆ. ಇದಕ್ಕಾಗಿ ಪಂಚನಾಮೆ ಮಾಡಲಾಗುತ್ತದೆ. ಉತಾರ, ಕಾರ್ಖಾನೆಗೆ ಪೂರೈಕೆಯಾದ ಕಬ್ಬಿನ ಪ್ರಮಾಣ ಮೊದಲಾದವುಗಳ ದಾಖಲೆ ಪರಿಶೀಲಿಸಿ ಪರಿಗಣಿಸಲಾಗುತ್ತದೆ’ ಎಂದು ಹೆಸ್ಕಾಂ ಚಿಕ್ಕೋಡಿ ವಿಭಾಗದ ಸೂಪರಿಂಟೆಂಡೆಂಟ್ ಎಂಜಿನಿಯರ್‌ ಶ್ರೀಕಾಂತ ಸಸಾಲಟ್ಟಿ ತಿಳಿಸಿದರು.

‘ಬೆಂಕಿ ಅವಘಡಗಳು ಸಂಭವಿಸಿದ ಕಬ್ಬು ಸುಟ್ಟು ಹೋದರೆ ಕೇವಲ ಶೇ 25ರಿಂದ ಶೇ 30ರಷ್ಟು ನಷ್ಟವನ್ನು ಮಾತ್ರ ಪರಿಹಾರವಾಗಿ ನೀಡಲಾಗುತ್ತದೆ. ಅದಕ್ಕೂ ಅಧಿಕಾರಿಗಳು ಶತಾಯಿಸುತ್ತಾರೆ. ಹೀಗಾಗಿ, ಬೇರೆ ಬೆಳೆಗಳ ಮಾದರಿಯಲ್ಲಿಯೇ ಕಬ್ಬಿಗೂ ಸರ್ಕಾರವೇ ವಿಮೆ ತುಂಬಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ರೈತ ಸಂಘಟನೆ ಅಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದರು.

ಸರ್ಕಾರ ಕ್ರಮ ವಹಿಸಲಿ

‘ತುಂಬಾ ಹಳೆಯದಾದ ತಂತಿಗಳು ಹಾಗೂ ಕಂಬಗಳನ್ನು ಬದಲಾಯಿಸಲು ಸರ್ಕಾರವು ಕ್ರಮ ಕೈಗೊಳ್ಳದಿರುವುದು. ಕಂಬದಿಂದ ಕಂಬಕ್ಕೆ ಹೆಚ್ಚಿನ ಅಂತರವಿರುವುದರಿಂದ ವಿದ್ಯುತ್ ತಂತಿಗಳು ಜೋತು ಬೀಳುತ್ತಿರುವುದು. ವಿದ್ಯುತ್‌ ಬಳಕೆಗೆ ಅನುಗುಣವಾಗಿ ಕೇಂದ್ರಗಳು ಇಲ್ಲದಿರುವುದು ಹಾಗೂ ಪರಿವರ್ತಕಗಳ ಮೇಲೆ ಲೋಡ್‌ ಹೆಚ್ಚುತ್ತಿರುವುದು ಅಪಾಯಗಳು ಸಂಭವಿಸಲು ಕಾರಣವಾಗಿವೆ. ಪ್ರತಿ ವರ್ಷ ನೂರಾರು ಎಕರೆ ಕಬ್ಬು ಬೆಳೆ ಬೆಂಕಿಗಾಹುತಿಯಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.