ADVERTISEMENT

ಐದು ರಾಜ್ಯಗಳ ಚುನಾವಣೆ ಪಾಠ: ಸತೀಶ್‌ ಜಾರಕಿಹೊಳಿ

ಕೆಪಿಸಿಸಿ ಕಾರ್ಯಾಧ್ಯಕ, ಶಾಸಕ ಸತೀಶ್‌ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 11:22 IST
Last Updated 11 ಮಾರ್ಚ್ 2022, 11:22 IST
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿದರು
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿದರು   

ಬೆಳಗಾವಿ: ‘ಕಾಂಗ್ರೆಸ್ ಪಕ್ಷವು ಬದಲಾವಣೆಗೆ ತೆರೆದುಕೊಳ್ಳಲು ಹಾಗೂ ಹೆಚ್ಚು ಸಂಘಟಿತಗೊಳಿಸಲು ಈಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಒಂದು ಪಾಠವಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಅದು ಅವರ ಹಗಲು ಕನಸು. ಎಂದಿಗೂ ಕಾಂಗ್ರೆಸ್‌ ಮುಕ್ತವಾಗಿಸಲು ಸಾಧ್ಯವಿಲ್ಲ’ ಎಂದರು.

‘ಗೋವಾದಲ್ಲಿ ನಮ್ಮ ಮತ ಬ್ಯಾಂಕ್‌ ಶೇ 32ರಷ್ಟಿದ್ದು, ಅದರಲ್ಲಿ ಶೇ. 2ರಷ್ಟು ಮಾತ್ರ ಮತಗಳು ಮಾತ್ರ ಕಡಿಮೆ ಬಂದಿವೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಿ ರಾಜ್ಯದಲ್ಲಿ ಅಧಿಕಾರ ತರಲು ಶ್ರಮಿಸಲಾಗುವುದು’ ಎಂದರು.

ADVERTISEMENT

ಹೋಲಿಸಲು ಸಾಧ್ಯವಿಲ್ಲ:

‘ರಾಜ್ಯದಲ್ಲಿ ನಾವು ಪಕ್ಷದ ಮೇಲೆ ಚುನಾವಣೆ ಮಾಡುತ್ತೇವೆಯೇ ಹೊರತು ನಾಯಕತ್ವದ ಮೇಲಲ್ಲ. ಬೇರೆ ರಾಜ್ಯಗಳ ಫಲಿತಾಂಶ ನಮ್ಮ ರಾಜ್ಯಕ್ಕೆ ಹೋಲಿಸಲು ಸಾಧ್ಯವಿಲ್ಲ. ನಮ್ಮಲ್ಲಿ ವಿಭಿನ್ನವಾಗಿರುತ್ತದೆ’ ಎಂದು ಪ್ರತಿಪಾದಿಸಿದರು.

‘ಬಿಜೆಪಿಯವರು ಒಮ್ಮೆಯೇ ಮೇಲೆ ಬಂದಿಲ್ಲ. ಅವರೂ ಹಂತ ಹಂತವಾಗಿ ಅಧಿಕಾರಕ್ಕೆ ಬಂದಿದ್ದಾರೆ. ನಮಗೆ ಈಗ ಸೋಲಾಗಿರಬಹುದು ಜನರ ವಿಶ್ವಾಸ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿಯವರು ದೇಶದ ಜನರಿಗೆ ಸುಳ್ಳುಗಳನ್ನು ಹೇಳುತ್ತಾ ಅಧಿಕಾರಿಕ್ಕೆ ಬಂದಿದ್ದಾರೆ. ಆದರೆ, ನಮ್ಮ ಪಕ್ಷ ಸತ್ಯ ಹೇಳಿಕೊಂಡೇ ಮುಂದುವರಿಯಲಿದೆ’ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕೇಂದ್ರದ ಮಾಜಿ ಸಚಿವ ಸುದರ್ಶನ್ ನಾಚಿಅಪ್ಪಣ, ಮುಖಂಡರಾದ ಮೋತಿಲಾಲ್ ದೇವಾಂಗ, ಆರ್.ವಿ. ವೇಂಕಟೇಶ, ಪ್ರಭುನಾಥ ದ್ಯಾಮನ್ನವರ, ಸುರೇಶ ಹೆಗಡೆ, ಅಶೋಕ‌ಕುಮಾರ್, ಅಶೋಕ ಪಟ್ಟಣ,‌ ಫಿರೋಜ್‌ ಸೇಠ್‌, ವಿನಯ ನಾವಲಗಟ್ಟಿ, ರಾಜು ಶೇಠ್, ಸತೀಶ ಮೆಯರವಾಡಿ ಇದ್ದರು.

‘ಕಾರ್ಯಕರ್ತರು ಶ್ರಮಿಸಬೇಕು’

ಬೆಳಗಾವಿ: ‘ಮಾರ್ಚ್‌ 31ರೊಳಗೆ ₹ 50 ಲಕ್ಷ ಸದಸ್ಯತ್ವ ಗುರಿ ಮುಟ್ಟುವ ಅಗತ್ಯವಿದೆ. ಈ‌ ‌ನಿಟ್ಟನಲ್ಲಿ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ‘ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ನೋಂದಣಿ’ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸದಸ್ಯತ್ವ ನೋಂದಣಿ ಆಗಬೇಕು. ಜನರು ಕೆಲಸಗಳಿಗೆ ಹೋದರೂ ಕಾಯ್ದು ನೋಂದಣಿ ಮಾಡಿಸಬೇಕು. ಪಕ್ಷವನ್ನು ತಳಮಟ್ಟದಿಂದ ಕಟ್ಟಬೇಕಾಗಿದೆ. ನಮಗೆ ಇನ್ನೂ ಕಾಲಾವಕಾಶವಿದೆ. ಸ್ವಲ್ಪ ಶ್ರಮ ಪಟ್ಟರೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪಕ್ಷದ ಒಲವು, ಸಿದ್ಧಾಂತದ ಬಗ್ಗೆ ನಂಬಿಕೆ, ವಿಶ್ವಾಸ ಇರುವವರನ್ನು ನೋಂದಣಿ ಮಾಡಿ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬಬೇಕು. ಒಂದು ರಾಜಕೀಯ ಪಕ್ಷದ ಪ್ರಾಬಲ್ಯತೆ ಅದರ ಸದಸ್ಯರ ಸಂಖ್ಯೆಯಿಂದ ನಿರ್ಧರಿತವಾಗುತ್ತದೆ’ ಎಂದರು.

ಮತಗಳು ವಿಭಜನೆಯಾದ್ದರಿಂದ

ನೆರೆಯ ಗೋವಾದಲ್ಲಿ ಮತಗಳು ವಿಭಜನೆ ಆಗಿದ್ದರಿಂದ ನಮ್ಮ ಪಕ್ಷಕ್ಕೆ ತೊಂದರೆಯಾಯಿತೆ ಹೊರತು, ದೊಡ್ಡ ಮಟ್ಟದಲ್ಲೇನೂ ಸೋತಿಲ್ಲ. ಉತ್ತರಪ್ರದೇಶದಲ್ಲಿ ಹಾಗೆಯೇ ಆಗಿದೆ.

–ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.