ADVERTISEMENT

ನಗರದಲ್ಲಿ ತೆರವುಗೊಳ್ಳದ ಫ್ಲೆಕ್ಸ್‌ಗಳು!

ಸ್ಪೀಕರ್‌ ಸೂಚನೆಗೂ ದೊರೆಯದ ‘ಕಿಮ್ಮತ್ತು’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 15:48 IST
Last Updated 13 ಡಿಸೆಂಬರ್ 2018, 15:48 IST

ಬೆಳಗಾವಿ: ನಗರದಲ್ಲಿ ಹಾಕಿರುವ ಫ್ಲೆಕ್ಸ್‌ಗಳನ್ನು‌ ತೆರವು ಮಾಡಿಸಿ ಎಂದು ಸ್ಪೀಕರ್‌ ಕೆ.ಆರ್. ರಮೇಶ್ ಕುಮಾರ್ ಸದನದಲ್ಲಿ ಸೂಚಿಸಿದ್ದರು. ಆದರೆ, ಗುರುವಾರ ರಾತ್ರಿವರೆಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕಾರ್ಯ ನಡೆಯಲಿಲ್ಲ!

ವಿಧಾನಮಂಡಲ ಅಧಿವೇಶನಕ್ಕೆ ಬರುವ ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಸ್ವಾಗತ ಕೋರುವುದಕ್ಕಾಗಿ ಮುಖಂಡರು ಫ್ಲೆಕ್ಸ್‌ಗಳನ್ನು ಹಾಕಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಪುಣೆ–ಬೆಂಗಳೂರು ಹೆದ್ದಾರಿಯಲ್ಲಿ ಜೆಡಿಎಸ್ ಮುಖಂಡ, ಜಿಲ್ಲಾ ಪಂಚಾಯ್ತಿ ಸದಸ್ಯ ಶಂಕರ ಮಾಡಲಗಿ ಹಾಗೂ ಆ ಪಕ್ಷದ ಕೆಲವು ಮುಖಂಡರು ಬಹಳಷ್ಟು ಫ್ಲೆಕ್ಸ್‌ಗಳನ್ನು ಹಾಕಿಸಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಕಾಂಗ್ರೆಸ್‌ನಿಂದ ಸ್ವಾಗತ ಕೋರುವ ಫ್ಲೆಕ್ಸ್‌ಗಳನ್ನು ಅಲ್ಲಲ್ಲಿ ಹಾಕಲಾಗಿದೆ. ಇದರಲ್ಲಿ ಬಿಜೆಪಿ ಮುಖಂಡರು ಕೂಡ ಹಿಂದೆ ಬಿದ್ದಿಲ್ಲ. ಇದರಿಂದ ನಗರದ ಸಹಜ ಸೌಂದರ್ಯಕ್ಕೆ ಧಕ್ಕೆಯಾಗಿದೆ.

ಹಿಂದಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಟ್ಟುನಿಟ್ಟಿನ ಸೂಚನೆಯ ಹೊರತಾಗಿಯೂ, ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಅವುಗಳನ್ನು ತೆರವುಗೊಳಿಸುವ ಕುರಿತು ಗುರುವಾರ ಸದನದಲ್ಲಿ ಸಭಾಧ್ಯಕ್ಷರು ಕೂಡ ತಾಕೀತು ಮಾಡಿದ್ದರು. ಆದರೆ, ಬಹುತೇಕ ಕಡೆಗಳಲ್ಲಿ ಗುರುವಾರ ತಡರಾತ್ರಿವರೆಗೂ ಫ್ಲೆಕ್ಸ್‌ಗಳನ್ನು ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ.

ADVERTISEMENT

ನಗರದಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ ಎಂದು ಪಾಲಿಕೆ ಸಭೆಯಲ್ಲೂ ತಿಳಿಸಲಾಗಿತ್ತು. ಆದಾಗ್ಯೂ ‘ಫ್ಲೆಕ್ಸಾಸುರರು’ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳೂ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಶಶಿಧರ ಕುರೇರ, ‘ನಮಗೆ ಸ್ಪಷ್ಟ ಸೂಚನೆಗಳು ಬಂದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.