ADVERTISEMENT

ಬೆಳಗಾವಿ | ಪ್ರವಾಹ: ₹11.29 ಕೋಟಿ ನಷ್ಟ

2,981 ವಿದ್ಯುತ್‌ ಕಂಬ, 511 ವಿದ್ಯುತ್‌ ಪರಿವರ್ತಕಗಳಿಗೆ ಹಾನಿ

ಇಮಾಮ್‌ಹುಸೇನ್‌ ಗೂಡುನವರ
Published 22 ಆಗಸ್ಟ್ 2024, 4:15 IST
Last Updated 22 ಆಗಸ್ಟ್ 2024, 4:15 IST
ಸತತ ಮಳೆಯಿಂದ ಬೆಳಗಾವಿ ನಗರದಲ್ಲಿ ವಿದ್ಯುತ್‌ ಪರಿವರ್ತಕವೊಂದು ನೆಲಕ್ಕೆ ಉರುಳಿರುವುದು
ಸತತ ಮಳೆಯಿಂದ ಬೆಳಗಾವಿ ನಗರದಲ್ಲಿ ವಿದ್ಯುತ್‌ ಪರಿವರ್ತಕವೊಂದು ನೆಲಕ್ಕೆ ಉರುಳಿರುವುದು   

ಬೆಳಗಾವಿ: ಅತಿವೃಷ್ಟಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ(ಹೆಸ್ಕಾಂಗೆ) ಈ ಬಾರಿ ಮಳೆಗಾಲದಲ್ಲಿ ₹11.29 ಕೋಟಿ ನಷ್ಟವಾಗಿದೆ. ಹಾನಿಗೀಡಾದ ವಿದ್ಯುತ್‌ ಪರಿಕರಗಳ ದುರಸ್ತಿ ಕಾರ್ಯ ನಡೆದಿದೆ. 

2019ರಲ್ಲಿ ಭೀಕರ ಪ್ರವಾಹದಿಂದ ಹೆಸ್ಕಾಂ ತತ್ತರಿಸಿತ್ತು. ಆಗ ಬೆಳಗಾವಿ ಜಿಲ್ಲೆಯಲ್ಲಿ 17 ಸಾವಿರಕ್ಕೂ ಅಧಿಕ ವಿದ್ಯುತ್‌ ಕಂಬಗಳಿಗೆ ಹಾನಿಯಾಗಿತ್ತು. 5 ಸಾವಿರ ವಿದ್ಯುತ್‌ ಪರಿವರ್ತಕಗಳು ನೀರಲ್ಲಿ ಮುಳುಗಿದ್ದವು.

ಈ ಬಾರಿ ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಹಿರಣ್ಯಕೇಶಿ, ದೂಧಗಂಗಾ, ವೇದಗಂಗಾ, ಮಾರ್ಕಂಡೇಯ ನದಿಗಳು ಉಕ್ಕಿ ಹರಿದಿದ್ದರಿಂದ ಮತ್ತು ಸತತ ಮಳೆಯಾಗಿದ್ದರಿಂದ ವಿದ್ಯುತ್‌ ಪರಿಕರಗಳು ಮತ್ತೆ ಹಾನಿಗೀಡಾಗಿವೆ.

ADVERTISEMENT

ನದಿಪಾತ್ರದ ಕೃಷಿಭೂಮಿಯಲ್ಲಿ ನೀರು ಸರಿಯದಿರುವುದು, ಕೆಸರಿನ ಕಾರಣಕ್ಕೆ ಕೆಲವೆಡೆ ಪರಿಶೀಲನೆ ಮತ್ತು ದುರಸ್ತಿಗೆ ಅಡ್ಡಿಯಾಗಿದೆ. ಈ ಪ್ರಕ್ರಿಯೆ ಮುಗಿದರೆ ಹಾನಿಯ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

2,981 ಕಂಬಗಳಿಗೆ ಹಾನಿ: 

ಬೆಳಗಾವಿ ವೃತ್ತದಲ್ಲಿ 1,917, ಚಿಕ್ಕೋಡಿ ವೃತ್ತದಲ್ಲಿ 1,064 ಸೇರಿದಂತೆ ಜಿಲ್ಲೆಯಲ್ಲಿ 2,981 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಈ ಪೈಕಿ ಸವದತ್ತಿ(496), ರಾಯಬಾಗ(417), ನಿ‍‍ಪ್ಪಾಣಿ(361) ತಾಲ್ಲೂಕುಗಳಲ್ಲೇ ಹೆಚ್ಚಿನ ಹಾನಿ ಸಂಭವಿಸಿದೆ. ಈ ಪೈಕಿ 2,864 ವಿದ್ಯುತ್‌ ಕಂಬ ಹೊಸದಾಗಿ ಅಳವಡಿಸಲಾಗಿದ್ದು, 117 ಕಂಬಗಳ ಅಳವಡಿಕೆಯಷ್ಟೇ ಬಾಕಿ ಇದೆ.

ಗೋಕಾಕ ತಾಲ್ಲೂಕಿನಲ್ಲೇ ಅಧಿಕ:

ಬೆಳಗಾವಿ ವೃತ್ತದಲ್ಲಿ 382, ಚಿಕ್ಕೋಡಿ ವೃತ್ತದಲ್ಲಿ 129 ಸೇರಿ ಜಿಲ್ಲೆಯಲ್ಲಿ 511 ವಿದ್ಯುತ್‌ ಪರಿವರ್ತಕಗಳಿಗೆ ಅಧಿಕ ಹಾನಿಯಾಗಿದೆ. ಈ ಪೈಕಿ ಗೋಕಾಕ ತಾಲ್ಲೂಕುವೊಂದರಲ್ಲೇ 175 ವಿದ್ಯುತ್‌ ಪರಿವರ್ತಕ ಹಾನಿಗೀಡಾಗಿವೆ. ಹಿಡಕಲ್‌ ಜಲಾಶಯದಿಂದ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಈ ಅವಾಂತರ ಸೃಷ್ಟಿಯಾಗಿದೆ.

ಉಳಿದಂತೆ, ಮೂಡಲಗಿಯಲ್ಲಿ 80, ಬೆಳಗಾವಿಯಲ್ಲಿ 70, ಚಿಕ್ಕೋಡಿಯಲ್ಲಿ 66, ನಿಪ್ಪಾಣಿಯಲ್ಲಿ 53 ವಿದ್ಯುತ್‌ ಪರಿವರ್ತಕಕ್ಕೆ ಹಾನಿ ಉಂಟಾಗಿದೆ. 509 ಹೊಸ ವಿದ್ಯುತ್‌ ಪರಿವರ್ತಕಗಳ ಅಳವಡಿಕೆಯಾಗಿದ್ದು, ಇನ್ನೆರಡಷ್ಟೇ ಅಳವಡಿಸುವುದು ಬಾಕಿ ಉಳಿದಿದೆ.

ಬೆಳಗಾವಿ  ತಾಲ್ಲೂಕಿನಲ್ಲಿ 44.51 ಕಿ.ಮೀ., ಖಾನಾಪುರದಲ್ಲಿ 61.90 ಕಿ.ಮೀ., ಸವದತ್ತಿಯಲ್ಲಿ 1.06 ಕಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ 107.47 ಕಿ.ಮೀ. ವಿದ್ಯುತ್‌ ತಂತಿಗೆ ಹಾನಿಯಾಗಿದೆ.

25 ದೂರು ನಿವಾರಣೆ ಕೇಂದ್ರಗಳಿವೆ: 

‘ನೆರೆ ಸಂಕಷ್ಟ ಸಮಯದಲ್ಲಿ ಜನರಿಗೆ ತ್ವರಿತವಾಗಿ ಸ್ಪಂದಿಸುವ ದೃಷ್ಟಿಯಿಂದ 25 ದೂರು ನಿವಾರಣೆ ಕೇಂದ್ರ ತೆರೆದಿದ್ದೇವೆ. 24x7 ಮಾದರಿಯಲ್ಲಿ ಕಾರ್ಯಾಚರಣೆಗೆ 25 ವಾಹನ ಕಾಯ್ದಿರಿಸಿದ್ದೇವೆ. ಅಲ್ಲದೆ, ಹೊರಗುತ್ತಿಗೆ ಆಧಾರದಲ್ಲಿ 175 ಸಿಬ್ಬಂದಿ ನಿಯೋಜಿಸಿದ್ದೇವೆ’ ಎಂದು ಹೆಸ್ಕಾಂ ಬೆಳಗಾವಿ ಜಿಲ್ಲೆ ಅಧೀಕ್ಷಕ ಎಂಜಿನಿಯರ್‌ ಪ್ರವೀಣಕುಮಾರ ಚಿಕ್ಕಾಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಖಾನಾಪುರ ತಾಲ್ಲೂಕಿನ ಅರಣ್ಯದಲ್ಲಿ ಹಾನಿಗೀಡಾಗಿದ್ದ ವಿದ್ಯುತ್‌ ಕಂಬದ ದುರಸ್ತಿ ಕಾರ್ಯದಲ್ಲಿ ತೊಡಗಿದ ಹೆಸ್ಕಾಂ ಸಿಬ್ಬಂದಿ
ಮಳೆ ಪ್ರವಾಹದಿಂದ ವಿದ್ಯುತ್‌ ಪರಿಕರಗಳಿಗೆ ಆಗಿರುವ ಹಾನಿಯ ವಿವರವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ್ದೇವೆ. ನಮ್ಮ ಬಳಿ ಇರುವ ಅನುದಾನ ಬಳಸಿಕೊಂಡು ದುರಸ್ತಿ ಕಾರ್ಯ ನಡೆಸುತ್ತಿದ್ದೇವೆ
–ಪ್ರವೀಣಕುಮಾರ ಚಿಕ್ಕಾಡೆ ಅಧೀಕ್ಷಕ ಎಂಜಿನಿಯರ್‌ ಹೆಸ್ಕಾಂ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.