ADVERTISEMENT

ರಾಮದುರ್ಗ: ಸಂತ್ರಸ್ತರಿಗೆ ತೂತಾದ ತಗಡು!

ಕಿಲಬನೂರು: ಶೆಡ್‌ ಹಾಕಿಕೊಳ್ಳಲಾಗದ ಸ್ಥಿತಿಯಲ್ಲಿ ಸಂತ್ರಸ್ತರು

ಚನ್ನಪ್ಪ ಮಾದರ
Published 30 ಸೆಪ್ಟೆಂಬರ್ 2019, 19:31 IST
Last Updated 30 ಸೆಪ್ಟೆಂಬರ್ 2019, 19:31 IST
ಕಿಲಬನೂರು ಗ್ರಾಮದಲ್ಲಿ ಪ್ರವಾಹದಿಂದ ಬಿದ್ದಿರುವ ಮನೆ ದುರಸ್ತಿ ಮಾಡಿಕೊಳ್ಳುತ್ತಿರುವ ಸಂತ್ರಸ್ತರು
ಕಿಲಬನೂರು ಗ್ರಾಮದಲ್ಲಿ ಪ್ರವಾಹದಿಂದ ಬಿದ್ದಿರುವ ಮನೆ ದುರಸ್ತಿ ಮಾಡಿಕೊಳ್ಳುತ್ತಿರುವ ಸಂತ್ರಸ್ತರು   

ರಾಮದುರ್ಗ (ಬೆಳಗಾವಿ ಜಿಲ್ಲೆ): ಮಲಪ್ರಭಾ ನದಿಯ ಪ್ರವಾಹದಿಂದ ಮನೆ ಕಳೆದುಕೊಂಡು ಪರಿಹಾರ ಕೇಂದ್ರಗಳಲ್ಲಿ ಇರುವವರು ಅಲ್ಲಿಂದ ತೆರಳಬೇಕು ಎಂದು ಅಧಿಕಾರಿಗಳು ಹೇಳಿರುವುದರಿಂದಾಗಿ ತಾಲ್ಲೂಕಿನ ಕಿಲಬನೂರಿನ ನಿರಾಶ್ರಿತರು ಮತ್ತಷ್ಟು ಆತಂಕದಲ್ಲಿ ಮುಳುಗಿದ್ದಾರೆ.

ನವೀಲುತೀರ್ಥ ಅಣೆಕಟ್ಟೆಯಿಂದ ಮೊದಲ ಬಾರಿಗೆ ಹೆಚ್ಚಿನ (1.20 ಲಕ್ಷ ಕ್ಯುಸೆಕ್‌) ನೀರು ಹರಿಸಿದ್ದರಿಂದ ಕಿಲಬನೂರು ಗ್ರಾಮ ಸಂಪೂರ್ಣ ಮುಳುಗಡೆಯಾಗಿತ್ತು. ಶೇ 90ರಷ್ಟು ಮನೆಗಳು ನೆಲಕಚ್ಚಿವೆ. ಜನರು ಉಟ್ಟ ಬಟ್ಟೆಯಲ್ಲಿ ಗ್ರಾಮದಿಂದ ತೆರಳಿ ಜೀವ ಉಳಿಸಿಕೊಂಡಿದ್ದರು. ತಾಲ್ಲೂಕು ಆಡಳಿತ ತೆರಿದಿದ್ದ ಪರಿಹಾರ ಕೇಂದ್ರದಲ್ಲಿ ಉಳಿದುಕೊಂಡಿದ್ದರು. ಒಟ್ಟು 270 ಕುಟುಂಬಗಳ ಪೈಕಿ ಇನ್ನೂ 70 ಕುಟುಂಬಗಳು ಪರಿಹಾರ ಕೇಂದ್ರದಲ್ಲಿಯೇ ಉಳಿದಿವೆ. ಈಗ, ಅಧಿಕಾರಿಗಳ ಸೂಚನೆ ಮೇರೆಗೆ ನಿರಾಶ್ರಿತರು ಜೀವ ಕೈಯಲ್ಲಿ ಹಿಡಿದುಕೊಂಡು ಮನೆಗಳಿಗೆ ಮರಳುತ್ತಿದ್ದಾರೆ.

ಕಂಗಾಲಾದ ನಿರಾಶ್ರಿತರು:ಗ್ರಾಮದಲ್ಲಿ ಸರಿಯಾದ ರಸ್ತೆಗಳಿಲ್ಲ. ಇರುವುದು ಸಂದಿಗಳು ಮಾತ್ರ. ಮುಂದಿನ ಮನೆಗಳು ಬಿದ್ದಿರುವುದಿರಿಂದ ಹಿಂದಿನ ಮನೆಗಳಿಗೆ ಹೋಗಲು ರಸ್ತೆಯೂ ಇಲ್ಲ. ಈ ಪರಿಸ್ಥಿತಿಯಲ್ಲೂ ತಗಡಿನ ಶೆಡ್‌ ಹಾಕಿಕೊಳ್ಳುವಂತೆ ಅಧಿಕಾರಿಗಳು ಹೇಳಿರುವುದು ನಿರಾಶ್ರಿತರನ್ನು ಕಂಗಾಲಾಗಿಸಿದೆ.

ADVERTISEMENT

ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು 10 ತಗಡು, 8 ಕಂಬಗಳನ್ನು ಸರ್ಕಾರ ನೀಡುತ್ತಿದೆ. ಆದರೆ, ಒಂದೇ ಮನೆಯಲ್ಲಿ 12ರಿಂದ 15 ಇದ್ದಾರೆ. ಸರ್ಕಾರ ಕೊಡುವ 10 ತಗಡುಗಳು ಸಾಕಾಗುವುದಿಲ್ಲ. ಅಲ್ಲಲ್ಲಿ ಕಿಂಡಿ ಬಿದ್ದಿರುವ ತಗಡುಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಒಂದು ಕಡೆ ಶೆಡ್‌ ನಿರ್ಮಿಸಿಕೊಳ್ಳುವುದೇ ಕಷ್ಟವಾಗಿದೆ. ಇನ್ನೊಂದೆಡೆ, ಬಿದ್ದಿರುವ ಮನೆ ಸ್ವಚ್ಛಗೊಳಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ. ಹೀಗಾಗಿ ತಗಡುಗಳನ್ನು ಪಡೆದಿದ್ದರೂ ಶೆಡ್‌ಗಳನ್ನು ಹಾಕಿಕೊಳ್ಳುವುದಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿ ಅವರಿದ್ದಾರೆ.

ಯಾವಾಗ ಬೀಳುತ್ತವೆಯೋ?:ಪಟ್ಟಣದ ಪರಿಹಾರ ಕೇಂದ್ರದಲ್ಲಿ 200 ಮಂದಿ ಆಶ್ರಯ ಪಡೆದಿದ್ದಾರೆ. ಮನೆಗಳಿಗೆ ಹೋಗುವ ಸ್ಥಿತಿಯಲ್ಲಿ ಅವರಿಲ್ಲ. ಮನೆಗಳು ಶಿಥಿಲಗೊಂಡಿವೆ. ಯಾವಾಗ ಬೀಳುತ್ತವೆ ಎಂಬ ಭೀತಿ ಇದೆ. ಹೀಗಾಗಿ, ಅವರು ಪರಿಹಾರ ಕೇಂದ್ರ ತೊರೆಯಲು ಸಾಧ್ಯವಿಲ್ಲ. ಹೀಗಾಗಿ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ. ಉಳ್ಳವರು ಮನೆ ನಿರ್ಮಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

‘ಕಿಲಬನೂರು ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಗೊಳಿಸಬೇಕು. ಶಾಶ್ವತ ನೆಲೆ ಕಲ್ಪಿಸಬೇಕು’ ಎಂಬುದು ಅಲ್ಲಿನವರ ಆಗ್ರಹವಾಗಿದೆ.

‘ಹೊಳಿ ಬಂದ್‌ ಹೋದ್‌ ಮ್ಯಾಲ್‌ ಪರಿಹಾರ ಕೇಂದ್ರದಾಗ ಎರಡ್‌ ತಿಂಗ್ಳು ನೆಮ್ಮದಿಯಿಂದ ಇದ್ವೀ. ಆದ್ರ್‌, ಅಧಿಕಾರಿಗಳು ಪರಿಹಾರ ಕೇಂದ್ರ ಖಾಲಿ ಮಾಡ್ರೀ ಎಂದು ಹೇಳಿದ ಮ್ಯಾಲ್‌ ತಲಿ ಮ್ಯಾಲ್‌ ಆಕಾಶ ಬಿದ್ದಂತಾಗಿದೆ. ದಿಕ್ಕ್‌ ತಿಳಿವಲ್ದಂಗಾಗಿ ಗಂಡಮಕ್ಳು ಕಂಗಾಲಾಗ್ಯಾರು. ಹಿಂಗಾದ್ರ್ ನಮ್‌ ಬಾಳೆ ಹ್ಯಾಂಗ್ ಅಂತ್ ಚಿಂತಿ ಕಾಡಾಕ್‌ ಹತ್ತೇತ್ರೀ’ ಎಂದು ಗ್ರಾಮದ ಯಲ್ಲವ್ವ ಬಸಪ್ಪ ದೊಡಮನಿ ಅಳಲು ತೋಡಿಕೊಂಡರು.

‘ಅಧಿಕಾರಿಗಳು ಕೊಟ್ಟಿರುವ ತಗಡು, ಕಂಬ ಸಾಕಾಗಗಿಂಲ್ಲ. ಸರ್ಕಾರ ಲಘೂನ್‌ ರೊಕ್ಕಾ ಕೊಡಬೇಕು. ಇಲ್ಲಂದ್ರ ಶೆಡ್‌ ಬಡದ್‌ ಕೊಡಬೇಕು. ಬಡವರಿಗೆ ಯಾರೂ ಕಾಳ್ಜಿ ಮಾಡಾಕತ್ತಿಲ್ಲರೀ’ ಎನ್ನುತ್ತಾರೆ ಯಲ್ಲಪ್ಪ ಮಹಾದೇವಪ್ಪ ವಜ್ರಮಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.