ADVERTISEMENT

ಕುಂಬಾರರ ಆದಾಯಕ್ಕೆ ‘ಮಣ್ಣು’ ಹಾಕಿದ ಅತಿವೃಷ್ಟಿ

ಮಣ್ಣಿನ ಉತ್ಪನ್ನಗಳಿಗೆ ಕುಸಿಯುತ್ತಿರುವ ಬೇಡಿಕೆ

ಸುಧಾಕರ ಎಸ್.ತಳವಾರ, ಬೆಂಗಳೂರು
Published 24 ಅಕ್ಟೋಬರ್ 2019, 19:30 IST
Last Updated 24 ಅಕ್ಟೋಬರ್ 2019, 19:30 IST
ಚಿಕ್ಕೋಡಿ ತಾಲ್ಲೂಕಿನ ಕೋಥಳಿ ಗ್ರಾಮದಲ್ಲಿ ಮಣ್ಣಿನ ಹಣತೆಗಳನ್ನು ಸುಡುವ ಭಟ್ಟಿಯಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರು ಹೊರಹಾಕಿದರು
ಚಿಕ್ಕೋಡಿ ತಾಲ್ಲೂಕಿನ ಕೋಥಳಿ ಗ್ರಾಮದಲ್ಲಿ ಮಣ್ಣಿನ ಹಣತೆಗಳನ್ನು ಸುಡುವ ಭಟ್ಟಿಯಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರು ಹೊರಹಾಕಿದರು   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಆಧುನಿಕತೆಯೊಂದಿಗೆ ಪೈಪೋಟಿ ನಡೆಸುತ್ತಾ ಪರಂಪರಾಗತವಾಗಿ ಬಂದಿರುವ ಕುಲಕಸಬು ಕುಂಬಾರಿಕೆಯನ್ನೇ ನೆಚ್ಚಿಕೊಂಡು ಬದುಕು ನಡೆಸುತ್ತಿರುವ ಕುಂಬಾರ ಕುಟುಂಬಗಳ ಬದುಕಿಗೂ ಅತಿವೃಷ್ಟಿ ಮಣ್ಣು ಹಾಕಿದೆ.

ತಾಲ್ಲೂಕಿನ ಕೋಥಳಿಯ 25ಕ್ಕೂ ಹೆಚ್ಚು ಕುಟುಂಬಗಳು ಕುಂಬಾರಿಕೆಯನ್ನೇ ನೆಚ್ಚಿಕೊಂಡಿವೆ. ಅದರಲ್ಲೂ ದೀಪಾವಳಿ ಹಬ್ಬ ಈ ಕುಟುಂಬಗಳಿಗೆ ಹೆಚ್ಚಿನ ಆದಾಯ ತಂದುಕೊಡುವ ಹಬ್ಬ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಶೈಲಿಯ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಹಾಕಿರುವುದರಿಂದ ಮಣ್ಣಿನ ಪಣತಿಗಳಿಗೆ ಬೇಡಿಕೆ ಕುಸಿದಿದೆ.

ಲಕ್ಷಾಂತರ ಹಣತೆಗಳನ್ನು ತಯಾರಿಸುತ್ತಿದ್ದ ಈ ಕುಟುಂಬಗಳು ಪ್ರಸಕ್ತ ವರ್ಷ ಬೇಡಿಕೆ ಕುಸಿದಿರುವುದರಿಂದ 25ಸಾವಿರದಷ್ಟು ಮಾತ್ರ ತಯಾರಿಸಿವೆ. ಆದರೆ, ‘ಕುಂಬಾರನಿಗೆ ವರುಷ: ದೊಣ್ಣೆಗೆ ನಿಮಿಷ’ ಎಂಬಂತೆ ತಿಂಗಳುಗಟ್ಟಲೆ ಕಷ್ಟ ಪಟ್ಟು ತಯಾರಿಸಿದ ಪಣತಿಗಳನ್ನು ಒಣಗಿಸಿ, ಭಟ್ಟಿಯಲ್ಲಿ ಸುಡಲೂ ಮಳೆ ಬಿಡುವು ನೀಡಲಿಲ್ಲ. ಹಾಗೋ, ಹೀಗೋ ಭಟ್ಟಿಗಳಿಗೆ ಆಸರೆ ಮಾಡಿ ಹಣತೆಗಳನ್ನು ಸುಡಲು ಯತ್ನಿಸಿದರೂ ಅರ್ಧಕ್ಕದರ್ಧ ಹಣತೆಗಳು ಹಾಳಾಗಿವೆ. ಇದರಿಂದ ಶ್ರಮವೇ ವ್ಯರ್ಥವಾಯಿತು ಎಂದು ಕುಂಬಾರರ ಕುಟುಂಬಗಳು ಗೋಳಾಡುತ್ತಿವೆ.

ADVERTISEMENT

‘ಪ್ರತಿ ವರ್ಷ ಕೋಥಳಿಯ ಕುಂಬಾರ ಕುಟುಂಬಗಳು 2ರಿಂದ 3 ಲಕ್ಷದಷ್ಟು ಹಣತೆಗಳನ್ನು ತಯಾರಿಸಿ ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೇ, ನೆರೆಯ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ, ತಾಸಗಾಂವ, ಜಯಸಿಂಗಪುರ ಮೊದಲಾದೆಡೆ ಸರಬರಾಜು ಮಾಡುತ್ತಿದ್ದವು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಹಣತೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಪ್ರಸಕ್ತ ವರ್ಷ ಕೇವಲ 20ಸಾವಿರದಷ್ಟು ಹಣತೆಗಳನ್ನು ಮಾತ್ರ ತಯಾರಿಸಲಾಗಿತ್ತು. ಅದರಲ್ಲೂ ಅತಿವೃಷ್ಟಿಯಿಂದ ನೂರಾರು ಹಣತೆಗಳು ಹಾಳಾಗಿದ್ದರಿಂದ ಹೆಚ್ಚಿನ ಆದಾಯ ದೊರಕಲಿಲ್ಲ. ಮಣ್ಣಿನ ಉತ್ಪನ್ನಗಳನ್ನು ಸುಡಲು ಬಳಸುವ ಭಟ್ಟಿಗಳಿಗೆ ಶೆಡ್ ನಿರ್ಮಿಸಿಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ರಾಜು ಕುಂಬಾರ ಅಸಹಾಯಕತೆ ವ್ಯಕ್ತಪಡಿಸಿದರು.

‘100 ಹಣತೆಗಳನ್ನು ತಯಾರಿಸಲು 110 ವೆಚ್ಚ ತಗಲುತ್ತದೆ. ಮಾರುಕಟ್ಟೆಯಲ್ಲಿ 100 ಹಣತೆಗಳಿಗೆ ₹ 140ರಿಂದ ₹ 150 ದೊರೆಯುತ್ತದೆ. ಸಂಕ್ರಾಂತಿಗೆ ಕುಡಿಕೆ, ದಸರೆ ಮತ್ತು ದೀಪಾವಳಿಗೆ ಹಣತೆ ತಯಾರಿಸಿ ಮಾರುತ್ತೇವೆ. ಆದರೆ, ಸಂಕ್ರಾಂತಿಗೂ ಕುಡಿಕೆಗಳ ಬೇಡಿಕೆ ಕುಸಿಯುವ ಆತಂಕ ಎದುರಾಗಿದೆ. ಆಧುನಿಕತೆಗೆ ಮಾರು ಹೋಗುತ್ತಿರುವ ಜನರು ಸಾಂಪ್ರದಾಯಿಕತೆಯಿಂದ ವಿಮುಖರಾಗುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕವಾದ ಮಣ್ಣಿನಿಂದ ತಯಾರಿಸಿದ ಪಣತಿಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ದೇಸಿ ಕಸುಬು ಕುಂಬಾರಿಕೆಯನ್ನೇ ನೆಚ್ಚಿಕೊಂಡು ಬದುಕು ನಡೆಸುವುದು ಕಷ್ಟಕರವಾಗುತ್ತಿದೆ. ತಮ್ಮ ಮಕ್ಕಳೂ ಕುಲಕಸುಬನ್ನೇ ನಂಬಿ ಕಷ್ಟದಲ್ಲಿ ಕೈ ತೊಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಶಿಕ್ಷಣ ನೀಡುತ್ತಿದ್ದೇವೆ’ ಎಂದು ಅವರು ಹೇಳುತ್ತಾರೆ.

‘ಕುಂಬಾರಿಕೆ ಕಸುಬು ಅವನತಿಯತ್ತ ಸಾಗುತ್ತಿದೆ. ಈ ವೃತ್ತಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಖಾನಾಪುರದಲ್ಲಿ ದೇಶದ ಏಕೈಕ ಕುಂಬಾರಿಕೆ ತರಬೇತಿ ಕೇಂದ್ರವಿದೆ. ಆದರೆ, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಕುಂಬಾರ ಕುಟುಂಬಗಳಿಗೆ ಈ ಕೇಂದ್ರದಿಂದ ಯಾವುದೇ ರೀತಿಯ ಸೌಕರ್ಯಗಳು ದೊರಕಿಲ್ಲ. ಸರ್ಕಾರವು ಗ್ರಾಮೀಣ ಭಾಗದ ಕುಂಬಾರ ಕುಟುಂಬಗಳಿಗೆ ತರಬೇತಿ ನೀಡಿ ದೇಸಿ ಕಸುಬು ಕಾಪಾಡಿಕೊಂಡು ಹೋಗಲು ಅವಕಾಶ ಕಲ್ಪಿಸಬೇಕು’ ಎಂದು ಕರ್ನಾಟಕ ಪ್ರದೇಶ ಕುಂಬಾರರ ಸಂಘದ ಉಪಾಧ್ಯಕ್ಷ ಬಾಳಾಸಾಹೇಬ್ ಕುಂಬಾರ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.