ADVERTISEMENT

ಬೆಳಗಾವಿ: ಪ್ರವಾಹ ಸಾಧ್ಯತೆ, ಹೋದ ವರ್ಷಕ್ಕಿಂತ ಹೆಚ್ಚು ಆತಂಕ!

377 ಹಳ್ಳಿಗಳನ್ನು ಗುರುತಿಸಿದ ಜಿಲ್ಲಾಡಳಿತ

ಎಂ.ಮಹೇಶ
Published 13 ಜೂನ್ 2021, 19:30 IST
Last Updated 13 ಜೂನ್ 2021, 19:30 IST
ಚಿಕ್ಕೋಡಿ ತಾಲ್ಲೂಕಿನ ಯಡೂರಕ್ಕೆ ಬಂದಿರುವ ಎನ್‌ಡಿಆರ್‌ಎಫ್‌ ತಂಡ
ಚಿಕ್ಕೋಡಿ ತಾಲ್ಲೂಕಿನ ಯಡೂರಕ್ಕೆ ಬಂದಿರುವ ಎನ್‌ಡಿಆರ್‌ಎಫ್‌ ತಂಡ   

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್–19 ಸಂಕಷ್ಟದ ನಡುವೆಯೇ ಪ್ರವಾಹ ಪರಿಸ್ಥಿತಿಯೂ ಜನರನ್ನು ಬಾಧಿಸುವ ಸಾಧ್ಯತೆಯನ್ನು ಜಿಲ್ಲಾಡಳಿತ ಅಂದಾಜಿಸಿದೆ.

ಪ್ರವಾಹದಿಂದ 323 ಗ್ರಾಮಗಳ ಜನರಿಗೆ ತೊಂದರೆ ಆಗಬಹುದು ಎಂದು ಗುರುತಿಸಲಾಗಿತ್ತು. ಈ ಮುಂಗಾರಿನಲ್ಲಿ ಗ್ರಾಮಗಳ ಸಂಖ್ಯೆ ಹೆಚ್ಚಾಗಿದೆ. 377 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಬಹುದು ಎಂಬ ವರದಿ ಬಂದಿದೆ. ಇದು ಸಾವಿರಾರು ಕುಟುಂಬಗಳು ಅತಂತ್ರವಾಗುವ ಆತಂಕವನ್ನೂ ತಂದೊಡ್ಡಿದೆ.

2019ರಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಉಂಟಾಗಿದ್ದ ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ 423 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 872 ಹಳ್ಳಿಗಳು ಬಾಧಿತವಾಗಿದ್ದವು. ಅಲ್ಲಿನ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಸುರಕ್ಷಿತ ಹಾಗೂ ಎತ್ತರದ ಪ್ರದೇಶಗಳಲ್ಲಿರುವ ಶಾಲೆಗಳು, ಸಮುದಾಯ ಭವನಗಳು ಮೊದಲಾದ ಸರ್ಕಾರಿ ಕಟ್ಟಡಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿತ್ತು. ಮನೆಗಳು, ಬೆಳೆಗಳು ಮತ್ತು ಜಮೀನುಗಳನ್ನು ಅವರು ಕಳೆದುಕೊಂಡಿದ್ದರು.

ADVERTISEMENT

ಜಿಲ್ಲಾಡಳಿತದ ವರದಿಯ ಪ್ರಕಾರ, ಬಾಧಿತವಾಗಲಿರುವ ಹಳ್ಳಿಗಳ ಸಂಖ್ಯೆಯು ಹೋದ ವರ್ಷಕ್ಕಿಂತಲೂ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. 2019ರಲ್ಲಿನ ಪರಿಸ್ಥಿತಿಯ ಕರಾಳ ದಿನಗಳ ಭೀತಿ ಎದುರಾಗಿದೆ.

ತಳ್ಳಿ ಹಾಕುವಂತಿಲ್ಲ: ನೆರೆಯ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಲ್ಲಿನ ಕೊಯ್ನಾ ಮೊದಲಾದ ಜಲಾಶಯದಿಂದ ಹೊರಹರಿವು ಹೆಚ್ಚಾದರೆ, ಕೃಷ್ಣಾ ಹಾಗೂ ಉಪ ನದಿಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಇದರಿಂದ ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಅಥಣಿ ತಾಲ್ಲೂಕುಗಳಲ್ಲಿನ ನದಿ ತೀರದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುತ್ತವೆ. ಮಾರ್ಕಂಡೇಯ ಹಾಗೂ ಘಟಪ್ರಭಾ ನದಿಯಲ್ಲಿ ಮಹಾಪೂರ ಉಂಟಾದರೆ ಬೆಳಗಾವಿ, ಹುಕ್ಕೇರಿ, ಗೋಕಾಕ ತಾಲ್ಲೂಕುಗಳಲ್ಲಿನ ಜನರಿಗೆ ತೊಂದರೆ ಆಗಲಿದೆ.

ಮಲಪ್ರಭಾ ನದಿ ಉಕ್ಕಿ ಹರಿದರೆ ಖಾನಾಪುರ, ಕಿತ್ತೂರು, ಬೈಲಹೊಂಗಲ, ಸವದತ್ತಿ ಹಾಗೂ ರಾಮದುರ್ಗ ತಾಲ್ಲೂಕುಗಳಲ್ಲಿ ಹಾನಿ ಉಂಟಾಲಿಗದೆ. ಬಳ್ಳಾರಿ ನಾಲೆಯು ತುಂಬಿ ಹರಿದರೆ ಬೆಳಗಾವಿ ನಗರದ ಹಲವು ಬಡಾವಣೆಗಳ ಜನರು ಪರಿತಪಿಸುವುದು ತಪ್ಪುವುದಿಲ್ಲ ಹಾಗೂ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಬೆಳೆ ಜಲಾವೃತವಾಗುವುದು ಸಾಮಾನ್ಯ ಎನ್ನುವಂತಾಗಿ ಹೋಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಳ್ಳಾರಿ ನಾಲೆಯಲ್ಲಿನ ತ್ಯಾಜ್ಯ ತೆರವುಗೊಳಿಸುವ ಕಾರ್ಯವೂ ಅಲ್ಲಲ್ಲಿ ನಡೆದಿಲ್ಲ. ಪರಿಣಾಮ, ಈ ಬಾರಿಯೂ ಬೆಳೆಗಳು ಜಲಾವೃತವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಕೋವಿಡ್ ಪರಿಸ್ಥಿತಿ ಇರುವುದರಿಂದ ನಿಯಮಾವಳಿ ಪಾಲಿಸಬೇಕಿರುವುದರಿಂದ, ತುರ್ತು ಸಂದರ್ಭಗಳಲ್ಲಿ ಜನರ ರಕ್ಷಣೆ ಹಾಗೂ ಪುನರ್ವಸತಿ ಸವಾಲಾಗಿದೆ.

ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಮಳೆ ಪ್ರಾರಂಭವಾಗಿದೆ. ಹೀಗಾಗಿ ಚಿಕ್ಕೋಡಿ ತಾಲ್ಲೂಕಿನ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳಿಗೆ ಕ್ರಮೇಣವಾಗಿ ನೀರಿನ ಹರಿವಿನಲ್ಲಿ ಏರಿಕೆಯಾಗುತ್ತಿದೆ. ಇದು ಪ್ರವಾಹದ ಮುನ್ಸೂಚನೆ ನೀಡುತ್ತಿದೆ.

‘500 ಕಾಳಜಿ ಕೇಂದ್ರ’
ಈ ಬಾರಿ ಕೂಡ ಕೋವಿಡ್ ಇರುವುದರಿಂದ ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯ ಕಾಳಜಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

‘ಮಹಾರಾಷ್ಟ್ರದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು. ಟಿಸಿ, ಕಂಡಕ್ಟರ್ (ವಿದ್ಯುತ್ ವಾಹಕ), ವಿದ್ಯುತ್ ಕಂಬಗಳು, ತಂತಿ ಮತ್ತಿತರ ಪರಿಕರಗಳ ದಾಸ್ತಾನು ಇಟ್ಟುಕೊಳ್ಳುವಂತೆ ಹೆಸ್ಕಾಂಗೆ ನಿರ್ದೇಶನ ನೀಡಲಾಗಿದೆ. ಬಾಧಿತಗೊಳ್ಳಬಹುದಾದ 377 ಗ್ರಾಮಗಳ ಜನರ ರಕ್ಷಣೆ ಮತ್ತು ತಾತ್ಕಾಲಿಕ ಪುನರ್ವಸತಿಗೆ 500 ಕಾಳಜಿ ಕೇಂದ್ರಗಳನ್ನು ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

‘ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವವರಿಗೆ ಊಟೋಪಹಾರ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜಾನುವಾರು ರಕ್ಷಣೆಗೂ ಕ್ರಮ ವಹಿಸಲಾಗಿದೆ. ಮೇವು ಮತ್ತು ಲಸಿಕೆ ದಾಸ್ತಾನು ಇಟ್ಟುಕೊಳ್ಳಲು ಸೂಚಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಸಚಿವ, ಜಿಲ್ಲಾಧಿಕಾರಿ ಏನಂತಾರೆ?
ಮಹಾರಾಷ್ಟ್ರದ ಜಲಾಶಯಗಳಲ್ಲಿ ಪ್ರಸ್ತುತ ಶೇ.30ರಷ್ಟು ನೀರು ಸಂಗ್ರಹ ಇರುವುದರಿಂದ ಪ್ರವಾಹ ಸ್ಥಿತಿ ಉದ್ಭವಿಸುವುದಿಲ್ಲ. ಆದಾಗ್ಯೂ ನಿಗಾ ವಹಿಸುವಂತೆ ಮತ್ತು ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ

*
ಕೃಷ್ಣಾ ಮತ್ತು ಉಪ ನದಿಗಳಲ್ಲಿ ಪ್ರವಾಹ ಸಾಧ್ಯತೆ ಹಿನ್ನೆಲೆಯಲ್ಲಿ 21 ಮಂದಿ ಒಳಗೊಂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ (ಎನ್‍ಡಿಆರ್‌ಎಫ್) ತಂಡವನ್ನು ಚಿಕ್ಕೋಡಿ ತಾಲ್ಲೂಕಿನ ಯಡೂರದಲ್ಲಿ ನಿಯೋಜಿಸಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
-ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.