ADVERTISEMENT

ಕೃಷ್ಣಾ ನದಿಗೆ 3.57 ಲಕ್ಷ ಕ್ಯುಸೆಕ್‌ ನೀರು; ಜನರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 11:46 IST
Last Updated 25 ಜುಲೈ 2021, 11:46 IST
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಜಲಾವೃತಗೊಂಡಿರುವ ದರೂರ ಗ್ರಾಮದ ಜನರು ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ/ ಪ್ರಜಾವಾಣಿ ಚಿತ್ರ
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಜಲಾವೃತಗೊಂಡಿರುವ ದರೂರ ಗ್ರಾಮದ ಜನರು ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ/ ಪ್ರಜಾವಾಣಿ ಚಿತ್ರ   

ಬೆಳಗಾವಿ: ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ, ಅಲ್ಲಿಂದ ಕೃಷ್ಣಾ ನದಿಗೆ ಬರುತ್ತಿರುವ ನೀರಿನ ಪ್ರಮಾಣ ಭಾನುವಾರ ಹೆಚ್ಚಾಗಿರುವುದರಿಂದಾಗಿ ಚಿಕ್ಕೋಡಿ ಮತ್ತು ಅಥಣಿ ತಾಲ್ಲೂಕಿನ ಹಲವು ಹಳ್ಳಿಗಳು ಜಲಾವೃತಗೊಂಡಿವೆ. ಮುಂಜಾಗ್ರತಾ ಕ್ರಮವಾಗಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು.

ನೆರೆ ರಾಜ್ಯದ ರಾಜಾಪುರ ಬ್ಯಾರೇಜ್‌ನಿಂದ 3,02,348 ಮತ್ತು ದೂಧ್‌ಗಂಗಾ ನದಿಯಿಂದ 54,738 ಸೇರಿ ಒಟ್ಟು 3,57,086 ಕ್ಯುಸೆಕ್‌ ನೀರು ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣೆಗೆ ಬಂದು ಸೇರುತ್ತಿದೆ. ಇದರಿಂದಾಗಿ ನದಿ ತೀರದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ಚಿಕ್ಕೋಡಿ ತಾಲ್ಲೂಕಿನ ಮಾಂಜರಿ, ಯಡೂರ, ಚಂದೂರ, ಯಡೂರವಾಡಿ, ಇಂಗಳಿ ಗ್ರಾಮಗಳನ್ನು ನೀರು ಆವರಿಸಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಕಾಳಜಿ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಲಾಗಿದೆ.

ಅಥಣಿ ತಾಲ್ಲೂಕಿನಲ್ಲಿ ಜತ್ತ-ಜಾಂಜೋಟಿ ಹೆದ್ದಾರಿಯ ಸೇತುವೆ ಮೇಲೆ ನೀರು ಹರಿಯುತ್ತಿದೆ. ಜನರು ಅಪಾಯವನ್ನೂ ಲೆಕ್ಕಿಸದೆ ಅದರಲ್ಲೇ ಸಂಚರಿಸುತ್ತಿದ್ದಾರೆ. ಆ ತಾಲ್ಲೂಕಿನ ದರೂರ, ಸಪ್ತಸಾಗರ, ತೀರ್ಥ, ನದಿಇಂಗಳಗಾವ ಸೇರಿದಂತೆ 12 ತೋಟದ ವಸತಿಗಳು ಮತ್ತು ಗ್ರಾಮಗಳಲ್ಲಿ ಮುಳುಗಡೆ ಭೀತಿ ಎದುರಾಗಿದೆ. ಈಗಾಗಲೇ ಜಮೀನುಗಳು ಮುಳುಗಿವೆ. ಹಿಗಾಗಿ, ಮುಂಜಾಗ್ರತಾ ಕ್ರಮವಾಗಿ ಜನರು ಮತ್ತು ಜಾನುವಾರುಗಳನ್ನು ಸಮೀಪದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು. ಸತ್ತಿ, ರಡ್ಡೇರಹಟ್ಟಿ, ಹುಲಗಬಾಳಿ, ಶೇಗುಣಸಿ ಸೇರಿದಂತೆ 22 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜನರನ್ನು ಅಲ್ಲಿಗೆ ಸ್ಥಳಾಂತರಿಸುವ ಕಾರ್ಯ ನಡೆದಿದೆ. ಈ ಹಳ್ಳಿಗಳು 2019ರಲ್ಲೂ ನೆರೆ ಬಾಧಿತವಾಗಿದ್ದವು.

ADVERTISEMENT

ಹಿರಣ್ಯಕೇಶಿ ನದಿ ಪ್ರವಾಹದಿಂದ ಸಂಕೇಶ್ವರ ‍ಪಟ್ಟಣದ ವಿವಿಧ ಗಲ್ಲಿಗಳು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳು ಜಲಾವೃತ ಸ್ಥಿತಿಯಲ್ಲೇ ಇವೆ. ಘಟಪ್ರಭಾ ಉಕ್ಕಿ ಹರಿಯುತ್ತಿರುವುದರಿಂದ ಗೋಕಾಕ, ಘಟಪ್ರಭಾ ಪಟ್ಟಣಗಳು ದ್ವೀಪಗಳಂತಾಗಿವೆ. ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಬಳಿ ವೇದಗಂಗಾ ನದಿಯಿಂದ ಮುಳುಗಡೆಯಾಗಿರುವ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಮೂರು ದಿನಗಳಾದರೂ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಮಹಾರಾಷ್ಟ್ರದ ಕಾಗಲ್‌ ಬಳಿಯೂ ರಸ್ತೆ ಮುಳುಗಿದೆ. ಪರಿಣಾಮ, ಕರ್ನಾಟಕ–ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿದೆ. ಅಲ್ಲಿಂದ ಇಲ್ಲಿಗೆ ಮತ್ತು ಇಲ್ಲಿಂದ ಅಲ್ಲಿಗೆ ತೆರಳಬೇಕಿದ್ದ ಗೂಡ್ಸ್‌ ಮೊದಲಾದ ಲಾರಿಗಳು ಸೇವಾ ರಸ್ತೆಗಳಲ್ಲಿ ಸಾಲು ಸಾಲಾಗಿ ನಿಂತಿವೆ. ಅವುಗಳ ಚಾಲಕರು ಮತ್ತು ನಿರ್ವಾಹಕರು ಊಟಕ್ಕೂ ಪರದಾಡುವಂತಾಗಿದೆ.

ಬೆಳಗಾವಿ ನಗರದಲ್ಲಿ ಭಾನುವಾರ ಆಗಾಗ ಸಾಧಾರಣ ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.