
ಬೆಳಗಾವಿ: ‘ಆಧುನಿಕ ಜೀವನ ಕ್ರಮವು ಜನಪದ ಜೀವನದ ಸೊಗಡನ್ನು ನಾಶಮಾಡುತ್ತಿವೆ. ಕನ್ನಡ ಜಾನಪದ ಪರಿಷತ್ ಈ ರೀತಿಯ ಕಾರ್ಯಕ್ರಮಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ’ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಪ್ರೊ.ಕೆ.ಎಸ್.ಕೌಜಲಗಿ ಹೇಳಿದರು.
ಕನ್ನಡ ಜಾನಪದ ಪರಿಷತ್ ಹಾಗೂ ಪರಿಷತ್ತಿನ ಜಿಲ್ಲಾ ಘಟಕದ ಸಹಯೋಗದಲ್ಲಿ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ, ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ರಾಂತ ಪ್ರಾಚಾರ್ಯ ಯು.ಎನ್. ಸಂಗನಾಳಮಠ ಮಾತನಾಡಿ, ‘ಜನಪದ, ಜಾನಪದ ಜೀವನವು ಸಂಘಟನೆ, ಸಹಕಾರ ಮತ್ತು ಸಹಜೀವನವನ್ನು ಕಲಿಸುವ, ಅನುಭವಿಸುವ ವ್ಯವಸ್ಥೆಯನ್ನು ತಿಳಿಸುತ್ತದೆ’ ಎಂದರು.
ವಿಶ್ರಾಂತ ಪ್ರಾಚಾರ್ಯ ಬಿ.ಜಿ.ಧಾರವಾಡ ಮಾತನಾಡಿ, ‘ಜಾಗ್ರತಿ ಕಾರ್ಯಕ್ರಮಗಳು ಗ್ರಾಮೀಣ ಶಾಲಾ, ಕಾಲೇಜು ಮಟ್ಟದಿಂದ ನಗರ ಮಟ್ಟದ ವರೆಗೂ ಜರುಗಬೇಕು’ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಗುಂಡ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಿ.ಪಿ.ಲಮಾಣಿ ಸ್ವಾಗತಿಸಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಆರ್.ಪಿ.ಪಾಟೀಲ, ಆರ್.ಬಿ.ಬನಶಂಕರಿ, ಕಾಡಪ್ಪನವರ, ಸದಾನಂದ ಎಂ. ಬೆಂಗಳೂರು, ಸುಳಕೂಡೆ, ಅನ್ನಪೂರ್ಣೇಶ್ವರಿ ಹ್ಯುಮ್ಯಾನಿಟಿ ಫೌಂಡೇಶನ್ ಅಧ್ಯಕ್ಷ ಮಹಾಂತೇಶ್ ಕಡಲಗಿ ಹಾಗೂ ಕಲಾವಿದರು, ಸಾಹಿತಿಗಳು, ಪಾಲ್ಗೊಂಡರು.
ಪ್ರೇಮಾ ರಾಠೋಡ ಪ್ರಾರ್ಥಿಸಿದರು. ಪ್ರಾದ್ಯಾಪಕಿ ಅಶ್ವಿನಿ ಪಡಿಯಣ್ಣವರ ಕಾರ್ಯಕ್ರಮ ನಿರೂಪಿಸಿದರು. ಆರ್.ಬಿ. ಬನಶಂಕರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.