ADVERTISEMENT

‘ಜೀವ ಉಳಿಸಿದ ಗೆಳೆಯ’

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 10:24 IST
Last Updated 31 ಜುಲೈ 2021, 10:24 IST
ಸಂತೋಷ
ಸಂತೋಷ   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ‘ಕೋವಿಡ್ ಸಂಕಷ್ಟದ ಕಾಲದಲ್ಲಿ ಮನೆಯವರು, ಬಂಧು–ಬಳಗ, ಆಪ್ತರು, ಅಷ್ಟೇ ಏಕೆ ದೇವರೇ ಕೈಬಿಟ್ಟ ಎನ್ನುವಂತಹ ಪರಿಸ್ಥಿತಿಯಲ್ಲಿ ಥಟ್ಟನೆ ನೆನಪಾಗಿದ್ದೇ ನನ್ನ ಬಾಲ್ಯದ ಗೆಳೆಯ. ಶಿಕ್ಷಕ ಸಂತೋಷ ಹುಣಶೀಕಟ್ಟಿ ನೀಡಿದ ನೆರವು ಮರೆಯುವುದಕ್ಕೆ ಸಾಧ್ಯವಿಲ್ಲ’.

– ತನ್ನ ಗೆಳೆಯ ಸಂಕಷ್ಟದ ಸಂದರ್ಭದಲ್ಲಿ ನೆರವಾಗಿದ್ದನ್ನು ಇಲ್ಲಿನ ನಿವಾಸಿ ಭರತ ನೆನಪಿಸಿಕೊಂಡರು.

‘ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ನಾನು ವರದಿಯು ಪಾಸಿಟಿವ್ ಎಂದು ಬರುತ್ತಿದ್ದಂತೆಯೇ ಬಹಳಷ್ಟು ಕುಗ್ಗಿ ಹೋಗಿದ್ದೆ. ನನ್ನಿಂದಾದ ತಪ್ಪಿನಿಂದಾಗಿ ಮನೆಯ ಕೆಲವು ಸದಸ್ಯರು ಕೂಡ ಕೋವಿಡ್‌ಗೆ ಒಳಗಾದರು. ನಮ್ಮನೆಯ ಸುತ್ತಮುತ್ತಲ್ಲಿನಲ್ಲಿರುವ ಜನ ಎಲ್ಲರೂ ನಮ್ಮನ್ನು ಕೆಟ್ಟ ದೃಷ್ಟಿಯಿಂದ ಅಥವಾ ಭಯದಿಂದ ನೋಡಲು ಆರಂಭಿಸಿದರು.ಮನೆ ಎದುರಿಗೆ ಆಂಬುಲೆನ್ಸ್‌ ಬಂದು ನಮ್ಮನ್ನು ಆಸ್ಪತ್ರೆಗೆ ಕರೆದೊಯ್ದ ಮೇಲಂತೂ ಬಹಳ ಜುಗುಪ್ಸೆಗೆ ಒಳಗಾಗಿದ್ದೆ. ಆ ಸಮಯದಲ್ಲಿ ಆಪತ್ಬಾಂಧವನಂತೆ ಬಂದ ಸ್ನೇಹಿತ ನನಗೆ ಹೆಗಲಾದ’.

ADVERTISEMENT

‘ಕೋವಿಡ್‌ಗೆ ಒಳಗಾಗಿದ್ದ ನಾನು, ನನ್ನ ತಂದೆಯವರಿಗೆ ಚಿಕಿತ್ಸೆಗೆ ನೆರವಾಗುವುದರ ಮೂಲಕ ಆತ್ಮಸ್ಥೈರ್ಯ ತುಂಬಿ ಕೋವಿಡ್ ವಿರುದ್ಧ ಹೋರಾಡಲು ಆರೋಗ್ಯ ಸಂಜೀವಿನಿಯ ಮಾತುಗಳನ್ನಾಡಿದ. ಆತ್ಮಸ್ಥೈರ್ಯ ತುಂಬಿ ಬದುಕಲು ನೆರವಾದ. ಮನೆಯಲ್ಲಿದ್ದ ತಾಯಿ, ತಂಗಿ, ಸಹೋದರನಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡುವುದರ ಜೊತೆಗೆ ಅವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನೂ ಬಂಧುವಾಗಿ ಮಾಡಿದ. ನನ್ನ ಅನುಪಸ್ಥಿತಿಯಲ್ಲಿ ಕುಟುಂಬಕ್ಕೆ ಬೆಂಬಲವಾಗಿ ನಿಂತ’.

‘ನಮಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದುಕೊಂಡು, ಮನವಿ ಮಾಡಿಕೊಳ್ಳುತ್ತಿದ್ದ. ಸೂಕ್ತ ಚಿಕಿತ್ಸೆ ಒದಗಿಸುವಂತೆ ಹಾಗೂ ಕಾಳಜಿ ವಹಿಸುವಂತೆ ವಿನಂತಿಸುತ್ತಿದ್ದ. ವೈದ್ಯರ ಸಲಹೆಗಳನ್ನು ಪಾಲಿಸುವ ಜೊತೆಗೆ ಗೆಳೆಯ ತುಂಬಿದ ಧೈರ್ಯವೇ ನಾನು ಕೋವಿಡ್‌ನಿಂದ ಗುಣಮುಖವಾಗಲು ಸಾಧ್ಯವಾಯಿತು. ನನ್ನ ತಂದೆ ಅವರು ಕೂಡ ಗುಣಮುಖರಾದರು. ಆದರೆ, ವಯಸ್ಸಾಗಿದ್ದರಿಂದ ಚೇತರಿಸಿಕೊಳ್ಳಲಾಗದೆ ನಿಧನರಾದರು. ಆಕಾಶವೇ ನನ್ನ ಮೇಲೆ ಕಳಚಿಬಿದ್ದಂತಹ ಅನುಭವವಾಗಿ ಕುಸಿದು ಹೋಗಿದ್ದ ಸಂದರ್ಭದಲ್ಲಿ ಸ್ನೇಹಹಸ್ತ ಚಾಚಿದ ಸ್ನೇಹಿತ ಸಂತೋಷನ ಸಹಾಯ ದೊಡ್ಡದು. ಅವರೊಂದಿಗೆ ಮಹಾಂತೇಶ ಹಣಸಿ, ಸಂತೋಷ ವಾರಿ ಗೆಳೆಯರು ಕೂಡ ನೆರವಾದರು’.

(ನಿರೂಪಣೆ: ರವಿ ಎಂ. ಹುಲಕುಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.