ADVERTISEMENT

ಪಾಲಿಕೆಗೆ ಅನುದಾನ ಕೊರತೆ: ಹೊರೆಯಾದ ಇಂದಿರಾ ಕ್ಯಾಂಟೀನ್, ವೇತನ ಹೆಚ್ಚಳ

ಎಂ.ಮಹೇಶ
Published 14 ಅಕ್ಟೋಬರ್ 2018, 19:45 IST
Last Updated 14 ಅಕ್ಟೋಬರ್ 2018, 19:45 IST
ಬೆಳಗಾವಿ ನಗರಪಾಲಿಕೆ ಮುಖ್ಯ ಕಟ್ಟಡದ ನೋಟ
ಬೆಳಗಾವಿ ನಗರಪಾಲಿಕೆ ಮುಖ್ಯ ಕಟ್ಟಡದ ನೋಟ   

ಬೆಳಗಾವಿ: ನಗರಪಾಲಿಕೆಯು ಕೆಲವು ತಿಂಗಳುಗಳಿಂದ ಅನುದಾನದ ಕೊರತೆ ಎದುರಿಸುತ್ತಿದೆ.

ನಗರ ಸ್ಥಳೀಯ ಸಂಸ್ಥೆಯು ತನ್ನ ಸಂಪನ್ಮೂಲದಲ್ಲಿಯೇ ಆಡಳಿತಾತ್ಮಕ ಕೆಲಸಗಳನ್ನು ನೋಡಿಕೊಳ್ಳಬೇಕು ಎಂದು ಸರ್ಕಾರವು ಕಟ್ಟುನಿಟ್ಟಿನ ಆದೇಶ ಹೊರಡಿಸಿರುವುದೇ ಇದಕ್ಕೆ ಕಾರಣ.

ಈ ವಿಷಯವನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿದ ನಗರಪಾಲಿಕೆ ಆಯುಕ್ತ ಶಶಿಧರ ಕುರೇರ, ‘ಪಾಲಿಕೆಯಲ್ಲಿ 1,099 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವೇತನವನ್ನು ₹ 7ಸಾವಿರದಿಂದ ₹14ಸಾವಿರಕ್ಕೆ ಏರಿಸಲಾಗಿದೆ. ಪರಿಷ್ಕರಣೆಗೆ ಮುನ್ನ, ತಿಂಗಳಿಗೆ ಪೌರಕಾರ್ಮಿಕರ ವೇತನಕ್ಕಾಗಿ ₹ 1.20 ಕೋಟಿ ಬೇಕಾಗುತ್ತಿತ್ತು. ನಂತರ, ₹ 2.40 ಕೋಟಿ ಬೇಕಾಗುತ್ತಿದೆ. ಏಪ್ರಿಲ್‌, ಮೇ, ಜೂನ್‌ನಲ್ಲಿ ತೆರಿಗೆ ಸಂಗ್ರಹ ಉತ್ತಮ ಪ್ರಮಾಣದಲ್ಲಿರುತ್ತದೆ. ಆದ, ನಿಭಾಯಿಸಲಾಯಿತು. ಆದರೆ, ನಂತರ ತೊಂದರೆಯಾಗಿದೆ. ಇತರ ವೆಚ್ಚಗಳಿಗೂ ಅನುದಾನ ಹೊಂದಿಸಬೇಕಾಗಿರುವುದರಿಂದ ಕೊರತೆ ಉಂಟಾಗಿದೆ. 2 ತಿಂಗಳಿಂದ ಪೌರಕಾರ್ಮಿಕರಿಗೆ ವೇತನ ನೀಡುವುದಕ್ಕೂ ಸಾಧ್ಯವಾಗಿಲ್ಲ’ ಎಂದು ಮಾಹಿತಿ ನೀಡಿದರು.

ADVERTISEMENT

ಕ್ಯಾಂಟೀನ್‌ಗೆ ವೆಚ್ಚ

‘ಸರ್ಕಾರದ ಆದೇಶದ ಪ್ರಕಾರ, ಈ ತಿಂಗಳಿಂದ ಪೌರಕಾರ್ಮಿಕರಿಗೆ ನೇರವಾಗಿ ವೇತನ ಪಾವತಿಸಬೇಕಾಗಿದೆ. ಅನುದಾನ ಹೊಂದಿಸುವುದೇ ಹರಸಾಹಸವಾಗಿದೆ. ಇದರಿಂದಾಗಿ, ವೇತನ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ. ಇಲ್ಲಿವರೆಗೆ ಗುತ್ತಿಗೆದಾರರು ವೇತನ ಕೊಡುತ್ತಿದ್ದರು. ಅವರು ನಾವು ತಡವಾಗಿ ಕೊಟ್ಟರೂ ನಡೆಯುತ್ತಿತ್ತು. ಆದರೆ, ಇನ್ಮುಂದೆ ಹಾಗೆ ಮಾಡುವುದಕ್ಕೆ ಬರುವುದಿಲ್ಲ. ನಾವೇ ನೇರವಾಗಿ ಕೊಡಬೇಕು. ಪೌರಕಾರ್ಮಿಕರ ವೇತನಕ್ಕೆಂದು ವಿಶೇಷ ಅನುದಾನ ಸರ್ಕಾರದಿಂದ ದೊರೆಯುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಗರದಲ್ಲಿ 6 ಇಂದಿರಾ ಕ್ಯಾಂಟೀನ್‌ಗಳೂ ಕಾರ್ಯಾರಂಭ ಮಾಡಿವೆ. ಒಂದಕ್ಕೆ ತಿಂಗಳಿಗೆ ₹ 5 ಲಕ್ಷದಂತೆ ₹ 30 ಲಕ್ಷವನ್ನು ಪಾಲಿಕೆಯಿಂದಲೇ ಭರಿಸಬೇಕು. ಅದಕ್ಕೆಂದು ಸರ್ಕಾರದಿಂದ ಪ್ರತ್ಯೇಕವಾಗಿ ಅನುದಾನ ಕೊಡಲಾಗುತ್ತಿಲ್ಲ. ನಿತ್ಯದ ಕೆಲಸಗಳು, ಒಳಚರಂಡಿ ವ್ಯವಸ್ಥೆ, ಬೀದಿದೀಪಗಳ ನಿರ್ವಹಣೆ, ಹಬ್ಬಗಳು, ಜಯಂತಿಗಳಿಗೂ ನಮ್ಮ ಸಂಪನ್ಮೂಲದಿಂದಲೇ ಕೊಡಬೇಕು. ಎರಡು ವರ್ಷಗಳ ಹಿಂದೆ, ಕೆಲವು ತುರ್ತು ಕಾಮಗಾರಿಗಳನ್ನು ಕಾರ್ಯಾದೇಶ ಕೊಡದೇ ಮಾಡಿಸಲಾಗಿದೆ. ಅವುಗಳ ಬಿಲ್‌ಗಳನ್ನು ಗುತ್ತಿಗೆದಾರರು ಹಂತ ಹಂತವಾಗಿ ತರುತ್ತಿದ್ದಾರೆ. ಆ ಹಣ ಪಾವತಿಸುವುದಕ್ಕೂ ಅನುದಾನ ಸಾಲುತ್ತಿಲ್ಲ. ಈ ಎಲ್ಲ ವಿಷಯವನ್ನೂ ಸರ್ಕಾರದ ಗಮನಕ್ಕೆ ತರಲಾಗಿದೆ. ವಿಶೇಷ ಅನುದಾನ ನೀಡಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.

ಸುಧಾರಿಸುವವರೆಗೆ

‘ಸದ್ಯ ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಂಡಿರುವ ಪೌರಕಾರ್ಮಿಕರನ್ನು ಕಾಯಂ ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 580 ಮಂದಿ ಕಾಯಂ ಆಗಲಿದ್ದಾರೆ. ಈ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದೆ. ನಂತರ ಅವರಿಗೆ ಸರ್ಕಾರದಿಂದಲೇ ವೇತನ ದೊರೆಯುತ್ತದೆ. ಆಗ, ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸಬಹುದು. ತೆರಿಗೆ ಸಂಗ್ರಹಿಸುವುದಕ್ಕೆ ಆದ್ಯತೆ ನೀಡಲಾಗುವುದು. ಲಭ್ಯ ಅನುದಾನದಲ್ಲಿ ನಿರ್ವಹಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.