ADVERTISEMENT

ಗೋಕಾಕ | ಅವಘಡದಲ್ಲಿ ಸಾವು: ಯೋಧನ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2024, 16:07 IST
Last Updated 18 ಡಿಸೆಂಬರ್ 2024, 16:07 IST
ಮಹೇಶ ನಿಂಗಪ್ಪ ವಾಲಿ
ಮಹೇಶ ನಿಂಗಪ್ಪ ವಾಲಿ   

ಗೋಕಾಕ: ಜಮ್ಮು– ಕಾಶ್ಮೀರ ಕಣಿವೆಯ ಕಾರ್ಗಿಲ್ ಪ್ರದೇಶದಲ್ಲಿ ಸಂಭವಿಸಿದ ಅವಘಡದಲ್ಲಿ ತಲೆಮೇಲೆ ಕಲ್ಲುಬಂಡೆ ಉರುಳಿ ಪ್ರಾಣ ಕಳೆದುಕೊಂಡ, ತಾಲ್ಲೂಕಿನ ಈರನಟ್ಟಿ ಗ್ರಾಮದ ನಿವಾಸಿ, ಯೋಧ ಮಹೇಶ ನಿಂಗಪ್ಪ ವಾಲಿ (24) ಅವರ ಅಂತ್ಯಸಂಸ್ಕಾರ ಮಂಗಳವಾರ ನೆರವೇರಿತು.

ಮಹೇಶ ಅವರ ತಂದೆ ನಿಂಗಪ್ಪ ಕೂಡ ನಿವೃತ್ತ ಯೋಧರು. ಮಹೇಶ ಕೂಡ ತಮ್ಮ 18 ವರ್ಷ ತುಂಬುವಷ್ಟರಲ್ಲಿ ಮದ್ರಾಸ್ ಎಂಜಿನಿಯರಿಂಗ್ ರೆಜಿಮೆಂಟ್‍ನಲ್ಲಿ ನೌಕರಿ ಸೇರಿದ್ದರು. 6 ತಿಂಗಳ ಹಿಂದಷ್ಟೇ ಜಮ್ಮು– ಕಾಶ್ಮೀರ ಕಣಿವೆಯ ಕಾರ್ಗಿಲ್‌ಗೆ ವರ್ಗವಾಗಿದ್ದರು.

ಡಿ.14ರಂದು ಕಾರ್ಗಿಲ್ ದುರ್ಗಮ ಪ್ರದೇಶದಲ್ಲಿ ಬುಲ್ಡೋಜರ್‌ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಬಂಡೆಗಲ್ಲು ಅವರ ತಲೆ ಮೇಲೆ ಬಿದ್ದಿತ್ತು. ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ಬುಧವಾರ ಮೃತದೇಹ ಗ್ರಾಮಕ್ಕೆ ಬಂದ ನಂತರ ದುಃಖದ ವಾತಾವರಣ ಮಡುಗಟ್ಟಿತ್ತು.

ADVERTISEMENT

ಅಂಕಲಗಿ ಪಟ್ಟಣದಿಂದ 6 ಕಿ.ಮೀ. ದೂರದಲ್ಲಿರುವ ಈರನಟ್ಟಿ ಗ್ರಾಮದವರೆಗೆ ಮೆರವಣಿಗೆ ಮಾಡಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಶಾಲಾ– ಕಾಲೇಜು ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಕಂಬನಿ ಮಿಡಿದರು.

ತಹಶೀಲ್ದಾರ್ ಮೋಹನ ಭಸ್ಮೆ, ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.