2025ರ ಜನವರಿ 21ರಂದು ‘ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ’ ಸಮಾವೇಶಕ್ಕೆ ಬೆಳಗಾವಿಯ ಸಿಪಿಇಡಿ ಮೈದಾನ ಸಾಕ್ಷಿಯಾಗಿತ್ತು
(ಸಂಗ್ರಹ ಚಿತ್ರ)
ಬೆಳಗಾವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನೆನಪಿಗಾಗಿ ವರ್ಷವಿಡೀ ಕಾರ್ಯಕ್ರಮ ನಡೆಸುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ, ನಿರೀಕ್ಷೆಯಂತೆ ಚಟುವಟಿಕೆಗಳು ನಡೆದಿಲ್ಲ.
ನಗರದಲ್ಲಿ 1924ರ ಡಿ.25, 26ರಂದು 39ನೇ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ಘಳಿಗೆಗೆ ಶತಮಾನ ತುಂಬಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2024ರ ಡಿಸೆಂಬರ್ 26, 27ರಂದು ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಿತ್ತು.
ಶತಮಾನದ ಹಿಂದೆ ಅಧಿವೇಶನ ನಡೆದ ಸ್ಥಳವಾದ ವೀರಸೌಧದಲ್ಲೇ ಡಿ.26ರಂದು ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ನಡೆದಿತ್ತು. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು. ನಗರದಲ್ಲಿ ವಿವಿಧ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಆದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಎರಡನೇ ದಿನದ ಕಾರ್ಯಕ್ರಮ ಮುಂದೂಡಿ, ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ಅದಾದ ನಂತರ, 2025ರ ಜ.21ರಂದು ‘ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ’ ಸಮಾವೇಶ ನಡೆಸಲಾಗಿತ್ತು. ಸುವರ್ಣ ವಿಧಾನಸೌಧ ಅಂಗಳದಲ್ಲಿ ಗಾಂಧಿ ಕಂಚಿನ ಪ್ರತಿಮೆ ಅನಾವರಣವಾಗಿತ್ತು.
‘ಎರಡು ದಿನವಷ್ಟೇ ಅಲ್ಲ, ವರ್ಷವಿಡೀ ‘ಗಾಂಧಿ ಭಾರತ’ ಕಾರ್ಯಕ್ರಮ ನಡೆಸುವುದಾಗಿ ಗಾಂಧಿ ಭಾರತ ಶತಮಾನೋತ್ಸವ ಸಮಿತಿ ಹೇಳಿತ್ತು. ಬೆಂಗಳೂರಿನಲ್ಲಿ ಸೆ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ನಡೆದಿದೆ. ಅದು ಹೊರತುಪಡಿಸಿದರೆ ನಿರೀಕ್ಷೆಯಂತೆ ಯಾವ ಚಟುವಟಿಕೆ ನಡೆದಿಲ್ಲ’ ಎಂಬುದು ಗಾಂಧೀಜಿ ಅನುಯಾಯಿಗಳ ಬೇಸರ.
‘ಶತಮಾನೋತ್ಸವ ವರ್ಷಾಚರಣೆ ಅವಧಿ ಮುಗಿಯಲು ಮೂರು ತಿಂಗಳಿಗಿಂತ ಕಡಿಮೆ ಸಮಯವವಿದೆ. ಅಷ್ಟರೊಳಗೆ ಒಂದಿಷ್ಟಾದರೂ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಬೇಕು. ಸಮಿತಿ ಯೋಜಿಸಿದ ಚಟುವಟಿಕೆಗಳಿಗೆ ವೇಗ ನೀಡಬೇಕು. ಬೆಳಗಾವಿಯಲ್ಲಿ ಗಾಂಧಿ ಹೆಸರು ಶಾಶ್ವತವಾಗಿ ಉಳಿಯುವಂಥ ಕಾಮಗಾರಿ ಕೈಗೊಳ್ಳಬೇಕು’ ಎಂಬ ಆಗ್ರಹ ಅವರದ್ದು.
ಪ್ರತಿಕ್ರಿಯೆಗಾಗಿ ಗಾಂಧಿ ಭಾರತ ಶತಮಾನೋತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಎಚ್.ಕೆ.ಪಾಟೀಲ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದರೂ ಲಭ್ಯವಾಗಲಿಲ್ಲ.ಶತಮಾನೋತ್ಸವ ನೆನಪಿಗಾಗಿ ಬೆಳಗಾವಿಯ ಕೋಟೆ ಕೆರೆ ಅಭಿವೃದ್ಧಿಪಡಿಸಿ ಅದಕ್ಕೆ ಗಾಂಧಿ ಹೆಸರು ನಾಮಕರಣ ಮಾಡುವ ಚರ್ಚೆ ನಡೆದಿದೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕೊಟ್ಟಿದ್ದೇವೆ ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ ಬೆಳಗಾವಿ
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗೆ ತೋರಿದ್ದ ಉತ್ಸಾಹ ಈಗ ರಾಜ್ಯ ಸರ್ಕಾರದಲ್ಲಿ ಕಾಣುತ್ತಿಲ್ಲ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಬಿಟ್ಟರೆ ಗಾಂಧಿ ಹೆಸರು ಚಿರಸ್ಥಾಯಿ ಆಗಿ ಉಳಿಸುವಂತಹ ಕೆಲಸಗಳು ಆಗಿಲ್ಲ.ಸುಭಾಷ ಕುಲಕರ್ಣಿ ಸಾಮಾಜಿಕ ಕಾರ್ಯಕರ್ತ
ಶತಮಾನೋತ್ಸವ ನೆನಪಿಗಾಗಿ ಬೆಳಗಾವಿಯ ಕೋಟೆ ಕೆರೆ ಅಭಿವೃದ್ಧಿಪಡಿಸಿ ಅದಕ್ಕೆ ಗಾಂಧಿ ಹೆಸರು ನಾಮಕರಣ ಮಾಡುವ ಚರ್ಚೆ ನಡೆದಿದೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕೊಟ್ಟಿದ್ದೇವೆಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ ಬೆಳಗಾವಿ
ಸಿ.ಎಂ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಗ್ರಾಮ ಸ್ವರಾಜ್ ಪರಿಕಲ್ಪನೆಯಡಿ ನ.14ರಂದು ‘ಮಹಾ ಪಂಚಾಯತ್ ಸಮಾವೇಶ’ ಆಯೋಜಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಬೆಳಗಾವಿ ಬೆಂಗಳೂರು ಮೈಸೂರು ಕಲಬುರಗಿ ಮತ್ತು ಮಂಗಳೂರು ವಲಯಗಳಲ್ಲಿ ಗಾಂಧಿ ವಿಚಾರಧಾರೆ ಬಿಂಬಿಸುವ ಸ್ತಬ್ಧಚಿತ್ರ ಒಳಗೊಂಡ ಜ್ಯೋತಿಯಾತ್ರೆ ಆಯೋಜಿಸಬೇಕು. ಸಮಾವೇಶದ ದಿನ ಆ ಯಾತ್ರೆಗಳೆಲ್ಲ ಬಂದು ಸಂಗಮವಾಗಿ ಸಮಾರೋಪಗೊಳ್ಳಬೇಕು. ಇದಲ್ಲದೆ ರಾಜ್ಯದ 120 ಸ್ಥಳಗಳಲ್ಲಿ ಗಾಂಧಿ ಭೇಟಿ ನೀಡಿದ ನೆನಪಿಗಾಗಿ ನವೆಂಬರ್ ಅಂತ್ಯದೊಳಗೆ ಸ್ತಂಭ ನಿರ್ಮಿಸಬೇಕು. ಗಾಂಧೀಜಿ ಧ್ಯಾನಸ್ಥ ಭಂಗಿಯ ಭಾವಚಿತ್ರ ಹಾಗೂ ಅವರು ಹೇಳಿದ ಸಪ್ತ ಸಾಮಾಜಿಕ ಪಾತಕಗಳನ್ನು ಎಲ್ಲ ಶಾಲೆಗಳಲ್ಲಿ ಅಳವಡಿಸಬೇಕು. ರಂಗಾಯಣದ ವತಿಯಿಂದ ಮೂರು ನಾಟಕ ರಚಿಸಿ ರಾಜ್ಯದಾದ್ಯಂತ ಪ್ರದರ್ಶಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ. ಆದರೆ ಸಮಯದ ಲಭ್ಯತೆ ಕಡಿಮೆ ಇರುವುದರಿಂದ ನಿಗದಿತ ಅವಧಿಯಲ್ಲಿ ಇವು ಕಾರ್ಯಗತವಾಗಲಿವೆಯೇ ಎಂಬುದು ಗಾಂಧಿವಾದಿಗಳ ಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.