
ರಾಮದುರ್ಗ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಅವರು ಅಜಾತಶತ್ರು ವ್ಯಕ್ತಿಯಾಗಿರಲಿಲ್ಲ. ಎಷ್ಟು ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದರೋ ಅಷ್ಟೇ ಪ್ರಮಾಣದ ವಿರೋಧಿಗಳನ್ನು ಹೊಂದಿದ್ದರು. ಅಷ್ಟಾಗಿಯೂ ಗಾಂಧೀಜಿ ಮಹಾತ್ಮ ಎಂದು ಕರೆಯಿಸಿಕೊಂಡರು ಎಂದು ಪತ್ರಕರ್ತ ದಿನೇಶ ಅಮಿನ್‌ಮಟ್ಟು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಕರ ಸಂಘ ಮತ್ತು ಬರೋಡಾ ಬ್ಯಾಂಕಿನ ಸಹಯೋಗದಲ್ಲಿ ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಗುರುವಾರ ರಾಮದುರ್ಗ ತಾಲ್ಲೂಕಿನ ಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಹಿಂದೂ–ಮುಸ್ಲಿಮರ ಮಧ್ಯೆ ಸೌಹಾರ್ದತೆ ತರಬೇಕು ಎಂದು ಮಹಾತ್ಮಾ ಗಾಂಧೀಜಿ ಜೀವನಪೂರ್ತಿ ಹೋರಾಡಿದ್ದಾರೆ. ಆದರೆ ಸೌಹಾರ್ದತೆಯೇ ಅವರನ್ನು ಕೊಲೆ ಮಾಡಿತು. ಕೊಲೆ ಮಾಡಿದ ವ್ಯಕ್ತಿಯ ಗುಡಿ ನಿರ್ಮಾಣಕ್ಕೆ ಒಂದು ಗುಂಪು ಮುಂದಾಗಿದೆ. ಇದು ವಿಪಯಾರ್ಸದ ಸಂಗತಿ’ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಅಂಕಣಕಾರ ಸುಧೀಂದ್ರ ಕುಲಕರ್ಣಿ, ‘ವಿಶ್ವವೇ ಒಂದು ಕುಟುಂಬ ಎನ್ನುವ ಭಾವನೆಯಿಂದ ನೆರೆಹೊರೆ ದೇಶಗಳೊಂದಿಗೆ ಸೌಹಾರ್ದಯುತ ಜೀವನಕ್ಕೆ ರಾಷ್ಟ್ರಪೀತ ಮಹಾತ್ಮಾ ಗಾಂಧೀಜಿ ತತ್ವವನ್ನು ಅಳವಡಿಸಿಕೊಳ್ಳಲು ಭಾರತೀಯರಿಗೆ ಸಾಧ್ಯವಾಗಿಲ್ಲ’ ಎಂದು ಹೇಳಿದರು.
ವಿರಕ್ತಮಠ ಟ್ರಸ್ಟ್ ಅಧ್ಯಕ್ಷ ಪ್ರದೀಪ ಪಟ್ಟಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಎನ್.ಎಂ. ಬಿರಾದಾರ, ಬಸವರಾಜ ಐನಾಪೂರ, ಡಾ. ಸೈಯದ್‌ಅಲಿ ಅಲ್ಲಿಸಾಬನ್ನವರ, ಪರಶುರಾಮ್ ಯತ್ನಾಳ, ವೈ.ಬಿ.ಕುಲಗೋಡ, ಎಂ.ಎಸ್.ನಿಜಗುಲಿ, ಶಿವಾನಂದ ಜಾಮದಾರ ಮತ್ತು ಸುರೇಶ ಏಣಿ ಇದ್ದರು. ಬರೋಡಾ ಬ್ಯಾಂಕಿನ ವ್ಯವಸ್ಥಾಪಕ ಹನಮಂತ್ರಾಯ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.