ADVERTISEMENT

‘ಮನಸ್ಸುಗಳ ಪರಿವರ್ತನೆಗೆ ಗಾಂಧೀಜಿ ಸ್ಫೂರ್ತಿ’

ಹಿಂಡಲಗಾ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್‌ ಟಿ.ಪಿ. ಶೇಷ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 11:55 IST
Last Updated 17 ಫೆಬ್ರುವರಿ 2019, 11:55 IST
ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆದ ನಾಟಕ ಪ್ರದರ್ಶನವನ್ನು ಮುಖ್ಯ ಸೂಪರಿಂಟೆಂಡೆಂಟ್ ಟಿ.ಪಿ. ಶೇಷ ಉದ್ಘಾಟಿಸಿದರು
ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ನಡೆದ ನಾಟಕ ಪ್ರದರ್ಶನವನ್ನು ಮುಖ್ಯ ಸೂಪರಿಂಟೆಂಡೆಂಟ್ ಟಿ.ಪಿ. ಶೇಷ ಉದ್ಘಾಟಿಸಿದರು   

ಬೆಳಗಾವಿ: ‘ಮನಸ್ಸು ಪರಿವರ್ತನೆಗೆ ಗಾಂಧೀಜಿ ಜೀವನ ಹಾಗೂ ಅವರ ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ’ ಎಂದು ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಟಿ.ಪಿ. ಶೇಷ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಭಾನುವಾರ ಕಾರಾಗೃಹದ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಪಾಪುಗಾಂಧಿ ಬಾಪು ಆದ ಕಥೆ’ ರಂಗರೂಪಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಜೀವನದಲ್ಲಿ ಸತ್ಯ, ಅಹಿಂಸೆ, ರೂಪಕ ವ್ಯಕ್ತಿಯಾದ ಗಾಂಧೀಜಿ ಸದಾ ನೆಲೆಸಿರಬೇಕು. ಅವರ ಜೀವನಗಾಥೆ ಅವಲೋಕಿಸಿ, ಅಭ್ಯಸಿಸಿ, ತತ್ವ– ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಅವರು ಸತ್ಯ, ಅಹಿಂಸೆಯ ತತ್ವ–ದಾರ್ಶನಿಕ ವ್ಯಕ್ತಿ. ಅವರನ್ನು ಇಡೀ ವಿಶ್ವವೇ ಪೂಜಿಸುತ್ತದೆ. ಅನುಸರಿಸುತ್ತದೆ. ಒಂದೇ ಒಂದು ಬಾರಿ 24ನೇ ಕಾಂಗ್ರೆಸ್‌ ಅಧೀವೇಶನದ ಅಧ್ಯಕ್ಷತೆಯನ್ನು ಒಂದು ಬಾರಿ ಅವರು ವಹಿಸಿದ್ದು ಬೆಳಗಾವಿಯ ಈ ಪುಣ್ಯ ಭೂಮಿಯಲ್ಲಿ ಮಾತ್ರ. ಇಂತಹ ಉತ್ತಮ ವ್ಯಕ್ತಿತ್ವ ಹೊಂದಿದ ಅವರು ನಾಡಿನಲ್ಲಿದ್ದರು ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಿ ಹೊರಹೊಮ್ಮುವ ಮೂಲಕ ಸದೃಢ ಸಮಾಜ, ದೇಶ ನಿರ್ಮಾಣಕ್ಕೆ ಮುಂದಾಗಬೇಕು’ ಎಂದರು.

ನಾಟಕಕಾರ ಡಿ.ಎಸ್. ಚೌಗುಲೆ ಮಾತನಾಡಿ, ‘ಗಾಂಧೀಜಿಯವರ ಜೀವನ ಮೌಲ್ಯಗಳು, ತತ್ವಗಳು ಅನೇಕ ಕೈದಿಗಳಲ್ಲಿ ಮನ ಪರಿವರ್ತನೆಗೆ ನಾಂದಿ ಹಾಡಿವೆ. ಅನೇಕ ಕೌಶಲಗಳನ್ನು ಹೊಂದಿರುವಂಥವರು ಆವೇಶದ ಸನ್ನಿವೇಶಕ್ಕೆ ಬಲಿಯಾಗಿ ಇಲ್ಲಿದ್ದೀರಿ. ತಮ್ಮಲ್ಲಿರುವಂಥ ಕೌಶಲಗಳನ್ನು ಕಾಪಾಡಿಕೊಳ್ಳಬೇಕು. ಶಿಕ್ಷೆ ಅವಧಿ ಮುಗಿದು ಹೊರಗಡೆ ಬಂದ ನಂತರ ಘನತೆಯ ಬದುಕು ಕಟ್ಟಿಕೊಳ್ಳಬೇಕು’ ಎಂದು ತಿಳಿಸಿದರು.

ಈ ರಂಗರೂಪಕ ತಂಡ ಜಿಲ್ಲೆಯಾದ್ಯಂತ 18 ದಿನಗಳು ಸಂಚರಿಸಿ 33 ಶಾಲಾ– ಕಾಲೇಜುಗಳಲ್ಲಿ ಪ್ರದರ್ಶನ ನೀಡಿತು. ಸಮಾರೋಪ ಹಿಂಡಲಗಾ ಕಾರಾಗೃಹದಲ್ಲಿ ನಡೆಯಿತು.

ಜೈಲರ್‌ಗಳಾದ ಎಸ್.ಐ. ಶಹಾಪುರಕರ, ಐ.ಎಸ್. ಹಿರೇಮಠ, ಎಸ್.ಬಿ. ಪಾಟೀಲ, ಎಂ.ಎಂ. ಹಿರೇಮಠ, ಶಿಕ್ಷಕ ಶಶಿಕಾಂತ ಯಾದಗುಡೆ, ಕಾರಾಗೃಹ ಸಿಬ್ಬಂದಿ, ರಂಗಪಯಣದ ಜಿಲ್ಲಾ ಸಂಚಾಲಕ ಕಲ್ಲಪ್ಪ ಪೂಜೇರಿ, ರಂಗಭೂಮಿ ಚಿಂತಕ ರಾಮಕೃಷ್ಣ ಮರಾಠೆ, ಕನ್ನಡ ಉಪನ್ಯಾಸಕ ಎಚ್.ಬಿ. ಕೋಲಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.