ADVERTISEMENT

ಗಣೇಶ ಮೂರ್ತಿಗಳ ಎತ್ತರದ ಮೇಲೆ ನಿರ್ಬಂಧ; ಮೂರ್ತಿಕಾರರಿಗೆ ಸಂಕಟ

ಸಾರ್ವಜನಿಕ ಸ್ಥಳಗಳ ಮೂರ್ತಿ 4 ಅಡಿ ಮೀರದಂತೆ ಸರ್ಕಾರದ ಆದೇಶ

ಶ್ರೀಕಾಂತ ಕಲ್ಲಮ್ಮನವರ
Published 21 ಆಗಸ್ಟ್ 2020, 10:34 IST
Last Updated 21 ಆಗಸ್ಟ್ 2020, 10:34 IST
ಬೆಳಗಾವಿಯ ನಾರ್ವೇಕರ ಗಲ್ಲಿಯಲ್ಲಿ ಸಿದ್ಧವಾಗಿರುವ ಗಣೇಶ ಮೂರ್ತಿಗಳು.
ಬೆಳಗಾವಿಯ ನಾರ್ವೇಕರ ಗಲ್ಲಿಯಲ್ಲಿ ಸಿದ್ಧವಾಗಿರುವ ಗಣೇಶ ಮೂರ್ತಿಗಳು.   

ಬೆಳಗಾವಿ: ಕೋವಿಡ್‌ ಆತಂಕದ ನಡುವೆಯೂ ಸಂಪ್ರದಾಯ ಹಾಗೂ ಜನರ ಭಾವನೆಗಳಿಗೆ ಗೌರವ ನೀಡಿದ ರಾಜ್ಯ ಸರ್ಕಾರವು, ಗಣೇಶೋತ್ಸವಕ್ಕೆ ಅನುಮತಿಯೇನೊ ನೀಡಿದೆ. ಆದರೆ, ಅದು ವಿಧಿಸಿರುವ ಷರತ್ತುಗಳು ಹಬ್ಬದ ಸಂಭ್ರಮವನ್ನು ಕಿತ್ತುಕೊಂಡಿದೆ. ವಿಶೇಷವಾಗಿ, ಮೂರ್ತಿಕಾರರಿಗೆ ಸಂಕಟ ತಂದೊಡ್ಡಿದೆ.

ಮನೆಯಲ್ಲಿ 2 ಅಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರ ಮೀರದಂತೆ ಗಣೇಶ ವಿಗ್ರಹಗಳನ್ನು ಇರಿಸಬಹುದು ಎಂದು ಸರ್ಕಾರ ಷರತ್ತು ವಿಧಿಸಿದೆ. ಮನೆಯಲ್ಲಿ ಇರಿಸುವ ಮೂರ್ತಿಗಳನ್ನು ಸಾಮಾನ್ಯವಾಗಿ 1ರಿಂದ 2 ಅಡಿಯೊಳಗೆ ತಯಾರಿಸಿರುತ್ತಾರೆ. ಹೀಗಾಗಿ ತೊಂದರೆಯಾಗದು. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಇರಿಸುವ ಮೂರ್ತಿಗಳ ಎತ್ತರ ಸಾಮಾನ್ಯವಾಗಿ 5– 6 ಅಡಿಗಳಿಗಿಂತ ಹೆಚ್ಚಾಗಿರುತ್ತದೆ. ಅಂತಹ ಮೂರ್ತಿಗಳಿಗೆ ಈಗ ಸಂಚಕಾರ ಬಂದೊದಗಿದೆ.

ಮೂರ್ತಿಕಾರರಿಗೆ ಸಂಕಟ

ADVERTISEMENT

ಬೆಳಗಾವಿ ನಗರದಲ್ಲಿ 400ಕ್ಕೂ ಹೆಚ್ಚು ಹಾಗೂ ಜಿಲ್ಲೆಯಾದ್ಯಂತ 2,000ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನನ್ನು ಕೂರಿಸಲಾಗುತ್ತದೆ. ಸರಾಸರಿ ಒಂದೊಂದು ಮೂರ್ತಿ ತಯಾರಿಸಲು ಕನಿಷ್ಠ ₹ 10 ಸಾವಿರಕ್ಕೂ ಹೆಚ್ಚು ಖರ್ಚಾಗಿರುತ್ತದೆ. ಒಟ್ಟು ಮೂರ್ತಿಗಳ ತಯಾರಿಕೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಲಾಗಿದೆ. ನಿರ್ಬಂಧವನ್ನು ಹಿಂದಕ್ಕೆ ಪಡೆಯದಿದ್ದರೆ ಮೂರ್ತಿಕಾರರು ತೀವ್ರ ಆರ್ಥಿಕ ತೊಂದರೆಗೆ ಒಳಗಾಗಲಿದ್ದಾರೆ.

ಹಬ್ಬ ಆರಂಭಗೊಳ್ಳಲು 3 ದಿನಗಳು ಬಾಕಿ ಉಳಿದಿರುವಾಗ ಸರ್ಕಾರವು ಮೂರ್ತಿಯ ಎತ್ತರದ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ. ಸಾಮಾನ್ಯವಾಗಿ ಮೂರ್ತಿಗಳ ತಯಾರಿ 3–4 ತಿಂಗಳ ಹಿಂದೆಯೇ ಆರಂಭಗೊಂಡಿದ್ದು, ಈಗ ಕೊನೆಯ ಹಂತಕ್ಕೆ ತಲುಪಿವೆ. ಇಂತಹ ಸಮಯದಲ್ಲಿ 4 ಅಡಿಯೊಳಗೆ ಎತ್ತರ ಇರಬೇಕೆಂದು ಷರತ್ತು ವಿಧಿಸಿದರೆ ಹೇಗೆ ಎಂದು ಮೂರ್ತಿಕಾರರು ಆತಂಕ ವ್ಯಕ್ತಪಡಿಸಿದ್ದಾರೆ.

‘ಗಣೇಶ ಮೂರ್ತಿ ಎಂದರೆ ಅವನದೊಂದೇ ಅಲ್ಲ, ಆ ಕಥೆಗೆ, ಆ ಪರಿಕಲ್ಪನೆಗೆ ಪೂರಕವಾಗಿ ಇತರ ಮೂರ್ತಿಗಳನ್ನು ಮಾಡಬೇಕಾಗುತ್ತದೆ. ಸಿಂಹಾಸನ ಏರಿದ ಗಣೇಶನನ್ನು ತಯಾರಿಸಬೇಕಾದರೆ, ಎತ್ತರದ ಪೀಠ, ಕಿರೀಟ ಎಲ್ಲವನ್ನೂ ಸೇರಿಸಿ ಮಾಡಬೇಕಾಗುತ್ತದೆ. ಕೊರೊನಾ ವೈರಾಣುವಿನಿಂದ ಜಗತ್ತನ್ನು ರಕ್ಷಿಸುವ ಪರಿಕಲ್ಪನೆಯಡಿ ಗಣೇಶ ಮೂರ್ತಿ ತಯಾರಿಸುವಾಗ ಸಹಜವಾಗಿ ಮೂರ್ತಿ ಎತ್ತರವಾಗುತ್ತದೆ. ಈಗ ಕೊನೆಯ ಕ್ಷಣದಲ್ಲಿ ಎತ್ತರದ ಮೇಲೆ ನಿರ್ಬಂಧ ಹೇರಿದರೆ ಹೇಗೆ? ಮುಂಚಿತವಾಗಿ ತಿಳಿಸಿದ್ದರೆ ಆ ಎತ್ತರಕ್ಕೆ ತಕ್ಕಂತೆ ಮಾಡುತ್ತಿದ್ದೇವು. ಈಗ ಮೂರ್ತಿ ತಯಾರಾಗಿದ್ದು ಇವುಗಳಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಸರ್ಕಾರ ದಯವಿಟ್ಟು ನಿರ್ಬಂಧವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಕೋರಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.