ಗಣೇಶ ಮೂರ್ತಿಗಳ ವಿಸರ್ಜನೆ
ಬೆಳಗಾವಿ: ಇಲ್ಲಿ ನಡೆದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯಲ್ಲಿ ‘ಜೈ ಜೈ ಮಹಾರಾಷ್ಟ್ರ ಮಾಝಾ’ ಎಂಬ ನಾಡಗೀತೆ ಹಚ್ಚಿ ಕುಣಿದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಗರದ ಪಾಟೀಲ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಮೂರ್ತಿ ಮುಂದೆ ಡಿ.ಜೆ ಹಚ್ಚಿ, ಈ ಗೀತೆಗೆ ಯುವಕರು ಹೆಜ್ಜೆಹಾಕಿದ್ದಾರೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯಾವಳಿ ಸೆರೆಹಿಡಿದು ಹರಿಬಿಟ್ಟಿದ್ದಾರೆ.
‘ಮೆರವಣಿಗೆ ಸಂದರ್ಭ ಮಹಾರಾಷ್ಟ್ರದ ಹಾಡು ಹಚ್ಚಿ ಕುಣಿದು ಉದ್ಧಟತನ ಪ್ರದರ್ಶಿಸಿದ್ದಾರೆ. ರಾಜಕೀಯ ಅಸ್ತಿತ್ವಕ್ಕಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಅಶಾಂತಿ ಸೃಷ್ಟಿಗೆ ಯತ್ನಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ಮಾಡಿದರೆ ಸಾಲದು. ಅವರನ್ನು ಗಡೀಪಾರು ಮಾಡಬೇಕು. ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.
‘ವಿಡಿಯೊ ಪರಿಶೀಲಿಸಲಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.