ADVERTISEMENT

ಬೆಳಗಾವಿ | ಎರಡನೇ ದಿನವೂ ಮುಂದುವರಿದ ಮೆರವಣಿಗೆ

ಬಿಗಿ ಭದ್ರತೆ ಏರ್ಪಡಿಸಿದ ಪೊಲೀಸರು, ಹೆಚ್ಚಿನ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 1:55 IST
Last Updated 8 ಸೆಪ್ಟೆಂಬರ್ 2025, 1:55 IST
ಬೆಳಗಾವಿಯಲ್ಲಿ ಭಾನುವಾರವೂ ಗಣಪತಿ ಮೂರ್ತಿಗಳ ವಿಸರ್ಜನೆ ಮುಂದುವರಿಯಿತು  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯಲ್ಲಿ ಭಾನುವಾರವೂ ಗಣಪತಿ ಮೂರ್ತಿಗಳ ವಿಸರ್ಜನೆ ಮುಂದುವರಿಯಿತು  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಕುಂದಾನಗರಿಯಲ್ಲಿ ಎರಡನೇ ದಿನವಾದ ಭಾನುವಾರವೂ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಸಂಭ್ರಮದಿಂದ ನೆರವೇರಿತು.

ಪ್ರಜಾವಾಣಿ ವಾರ್ತೆ

ಇಲ್ಲಿನ ಹುತಾತ್ಮ ಚೌಕ್‌ನಲ್ಲಿ ಶನಿವಾರ ಸಂಜೆ 5.30ಕ್ಕೆ ಆರಂಭವಾದ ಮೆರವಣಿಗೆ ಸಾಂಪ್ರದಾಯಿಕ ಮಾರ್ಗದಲ್ಲೇ ಸಾಗಿತು. ಮೋಡ ಕವಿದ ವಾತಾವರಣ, ಆಗಾಗ ಮಳೆಹನಿಗಳ ಸಿಂಚನದ ಮಧ್ಯೆಯೂ, ಭಾನುವಾರ ರಾತ್ರಿಯವರೆಗೂ ಮುಂದುವರಿಯಿತು. ‘ಗಣಪತಿ ಬಪ್ಪಾ ಮೋರಯಾ...’ ಎಂಬ ಜೈಕಾರ ಮುಗಿಲು ಮುಟ್ಟಿತ್ತು.

ADVERTISEMENT

ಬೆಳಗಾವಿ ನಗರ ಮತ್ತು ಉಪನಗರ ವ್ಯಾಪ್ತಿಯಲ್ಲಿ 378 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಕಪಿಲೇಶ್ವರ ದೇವಸ್ಥಾನದ ಹೊಸ ಹೊಂಡ, ಹಳೆಯ ಹೊಂಡ, ಇಂದ್ರಪ್ರಸ್ಥ ನಗರದ ಜಕ್ಕೇರಿ ಹೊಂಡ, ಕಣಬರ್ಗಿ ಕೆರೆ, ಹಳೇ ಬೆಳಗಾವಿ ಕೆರೆ, ಕೋಟೆ ಕೆರೆ, ಅನಗೋಳದ ಲಾಲ್‌ ತಲಾವ್‌, ಮಜಗಾವಿ ಕೆರೆಯಲ್ಲಿ ಅವುಗಳನ್ನು ವಿಸರ್ಜಿಸಲಾಯಿತು.

ಹೊಂಡಗಳ ಸುತ್ತಲೂ 24 ಕ್ರೇನ್‌ಗಳನ್ನು ಇರಿಸಲಾಗಿತ್ತು. ಬೃಹತ್‌ ಮೂರ್ತಿಗಳನ್ನು ಎತ್ತಿ ನೀರಿನಲ್ಲಿ ಮುಳುಗಿಸಲಾಯಿತು. ಅದಕ್ಕೂ ಮುನ್ನ, ಅಲ್ಲಿಯೇ ಅರ್ಚಕರು ಮತ್ತು ಪುರೋಹಿತರು  ಧಾರ್ಮಿಕ ವಿಧಿವಿಧಾನ ಕೈಗೊಂಡರು.

ಜನಜಂಗುಳಿ: ಮೆರವಣಿಗೆ ಸಾಗುವ ಧರ್ಮವೀರ ಸಂಭಾಜಿ ವೃತ್ತದಲ್ಲಿ ಶನಿವಾರ ರಾತ್ರಿ ಜನಸಾಗರವೇ ನೆರೆದಿತ್ತು. ವೀಕ್ಷಕರ ಗ್ಯಾಲರಿ ಜನರಿಂದ ಕಿಕ್ಕಿರಿದು ತುಂಬಿತ್ತು. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟು, ಮೆರವಣಿಗೆ ಸುಗಮವಾಗಿ ಸಾಗುವಂತೆ ನೋಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಆಸಿಫ್‌ ಸೇಠ್‌, ಅಭಯ ಪಾಟೀಲ, ಮೇಯರ್‌ ಮಂಗೇಶ ಪವಾರ, ಉಪಮೇಯರ್‌ ವಾಣಿ ಜೋಶಿ ಮತ್ತಿತರರು ಮೆರವಣಿಗೆ ವೀಕ್ಷಿಸಿದರು. ಮಧ್ಯವರ್ತಿ ಸಾರ್ವಜನಿಕ ಗಣೇಶೋತ್ಸವ ಮಂಡಳಿ ವತಿಯಿಂದ ಶಹಾಪುರ, ಸಂಭಾಜಿ ವೃತ್ತ ಮತ್ತು ಮಹಾತ್ಮಫುಲೆ ರಸ್ತೆಯಲ್ಲಿ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.

ಬಿಗಿ ಭದ್ರತೆ: ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂದು 4 ಸಾವಿರಕ್ಕೂ ಅಧಿಕ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಹಿರಿಯ ಪೊಲೀಸ್‌ ಅಧಿಕಾರಿಗಳು ಮೆರವಣಿಗೆ ಮಾರ್ಗದಲ್ಲೇ ಠಿಕಾಣಿ ಹೂಡಿದ್ದರು.

ಬೆಳಗಾವಿಯಲ್ಲಿ ಭಾನುವಾರವೂ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಮುಂದುವರಿಯಿತು  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಈ ಬಾರಿಯೂ ಸುದೀರ್ಘ ಮೆರವಣಿಗೆ 2023ರಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ 30 ತಾಸು 2024ರಲ್ಲಿ 33 ತಾಸು ನಡೆದಿತ್ತು. ಈ ಬಾರಿ ಭಾನುವಾರ ಸಂಜೆಯೊಳಗೆ ಮೆರವಣಿಗೆ ಮುಗಿಸಲು ಅಧಿಕಾರಿಗಳು ನಡೆಸಿದ ಪ್ರಯತ್ನ ಫಲ ಕೊಡಲಿಲ್ಲ. ಮೆರವಣಿಗೆ ಸಂಜೆ ಆರಂಭವಾದರೂ ವಿವಿಧ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ರಾತ್ರಿ 10ರ ಹೊತ್ತಿಗೆ ಮೂರ್ತಿಗಳನ್ನು ಮಂಟಪದಿಂದ ಹೊರತಂದರು. ಇದರಿಂದಾಗಿ ಮೆರವಣಿಗೆ ಮತ್ತೆ ತಡವಾಯಿತು.

ಕಳೆಗುಂದಿದ ಮೆರವಣಿಗೆ ಕಿವಿಗಡಚಿಕ್ಕುವಂಥ ಸಂಗೀತಕ್ಕೆ ನಗರದ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ತಡೆಯೊಡ್ಡಿದ ಕಾರಣ ಮೆರವಣಿಗೆ ತುಸು ಕಳೆಗುಂದಿದಂತೆ ಕಂಡುಬಂತು. ಶನಿವಾರ ಸಂಜೆಯಿಂದ ಟ್ರ್ಯಾಕ್ಟರ್‌ಗಳಲ್ಲಿ ಸಂಗೀತ ಪರಿಕರಗಳನ್ನು ಇಟ್ಟುಕೊಂಡು ಬಂದ ಕೆಲವರು ಮಿತಿ ನಿಗದಿಪಡಿಸಿದಷ್ಟೇ ಗೀತೆಗಳನ್ನು ಹಾಕಿದರು. ಯುವಕ– ಯುವತಿಯರು ಕುಣಿದು ಕುಪ್ಪಳಿಸಿದರು. ಮತ್ತೆ ಕೆಲವು ಮಂಡಳಗಳು ಸಾಂಪ್ರದಾಯಿಕ ಸಂಗೀತಕ್ಕೆ ಕಲಾವಿದರ ನೃತ್ಯಕ್ಕೆ ಮಾರುಹೋದವು. ಇದರಿಂದ ಮೆರವಣಿಗೆ ತುಸು ಕಳೆ ಪಡೆಯಿತು. ಶನಿವಾರ ರಾತ್ರಿ 11ರ ನಂತರ ಕೆಲವು ಮೂರ್ತಿಗಳ ಮಂಡಳದ ಯುವಕರು ಡಿ.ಜೆ ಸೌಂಡ್‌ ಸಿಸ್ಟಮ್‌ ಬಳಸಲು ಶುರು ಮಾಡಿದರು. ಕೆಲವೇ ಗಂಟೆಗಳಲ್ಲಿ ಪೊಲೀಸರು ಅದನ್ನೂ ಬಂದ್ ಮಾಡಿಸಿದರು. ಇದರಿಂದ ಮೂರ್ತಿಗಳ ಮುಂದೆ ಕುಣಿಯುವ ಉಮೇದಿನಲ್ಲಿ ಬಂದಿದ್ದ ಯುವಕ ಯುವತಿಯರು ನಿರಾಶರಾದರು. ರಸ್ತೆಯ ಬದಿಯಲ್ಲಿ ವೃತ್ತಗಳಲ್ಲಿ ಮೂರ್ತಿಯ ಜೆತೆಗೆ ಬೆರಳೆಣಿಕೆಯಷ್ಟು ಜನ ಮಾತ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.