ADVERTISEMENT

ಬೆಳಗಾವಿ | ‘ಸರ್ಕಾರದ ಮಾರ್ಗಸೂಚಿ ಪಾಲಿಸಿ ಗಣೇಶೋತ್ಸವ’

ಮಹಾಮಂಡಳಗಳ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 13:16 IST
Last Updated 30 ಜೂನ್ 2020, 13:16 IST

ಬೆಳಗಾವಿ: ಮಾರಕ ಕೊರೊನಾ ಸೋಂಕು ಹರಡುತ್ತಿರುವುದರಿಂದ ಈ ಬಾರಿ ಸಾರ್ವಜನಿಕ ಗಣೇಶೋತ್ಸವವನ್ನು ರದ್ದುಪಡಿಸುವ ಬದಲಿಗೆ ಸರ್ಕಾರ ನೀಡುವ ಮಾರ್ಗಸೂಚಿಗಳ ಪ್ರಕಾರ, ಸರಳವಾಗಿ ಆಯೋಜಿಸಲು ಇಲ್ಲಿನ ಸಮಾದೇವಿ ಮಂದಿರದಲ್ಲಿ ಮಂಗಳವಾರ ನಡೆದ ಮಹಾಮಂಡಳಗಳು, ಪೆಂಡಾಲ್ ಡೆಕೋರೇಟರ್ಸ್‌ ಹಾಗೂ ಮೂರ್ತಿಕಾರರ ಸಭೆಯಲ್ಲಿ ನಿರ್ಧರಿಸಲಾಯಿತು.

‘ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ, ಅದ್ಧೂರಿಯಾಗಿ ಹಬ್ಬ ಆಚರಿಸುವುದು ಬೇಡ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಾಂಪ್ರದಾಯಿಕವಾಗಿ ಉತ್ಸವ ಆಯೋಜಿಸಬೇಕು. ಉತ್ಸವ ರದ್ದು‍ಪಡಿಸಬೇಕು ಎನ್ನುವ ಸಲಹೆಗಳು ಕೇಳಿಬರುತ್ತಿವೆ. ಅದಕ್ಕೆ ಮನ್ನಣೆ ನೀಡಬಾರದು’ ಎಂದು ಹಲವರು ಒತ್ತಾಯಿಸಿದರು.

ಮುಖಂಡ ವಿಜಯ ಜಾಧವ್, ‘ಸರ್ಕಾರದ ಮಾರ್ಗಸೂಚಿ ಪ್ರಕಾರ ಗಣೇಶೋತ್ಸವ ನಡೆಸುವ ಸಂಬಂಧ ಬಹುಮತವಿದೆ. ಇದನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಮುಂದುವರಿಯೋಣ. ಸಂಪ್ರದಾಯವನ್ನು ಬಿಡುವುದಕ್ಕೆ ಆಗುವುದಿಲ್ಲ’ ಎಂದರು.

ADVERTISEMENT

ಮೂರ್ತಿಕಾರರ ಸಂಘದ ಅಧ್ಯಕ್ಷ ಮನೋಹರ ಪಾಟೀಲ, ‘ಮೂರ್ತಿಗಳನ್ನು ಸಿದ್ಧಪಡಿಸುವ ಕೆಲಸವನ್ನು ಮೂರ್ತಿಕಾರರು ಮಾಡುತ್ತಿದ್ದಾರೆ. ಆದರೆ, ಕೋವಿಡ್–19 ಸೃಷ್ಟಿಸಿರುವ ಸಂಕಷ್ಟದಿಂದ ಎಲ್ಲರಿಗೂ ತೊಂದರೆಯಾಗಿದೆ. ಎಲ್ಲರ ಅಭಿಪ್ರಾಯಕ್ಕೆ ನಾವೂ ಬದ್ಧವಿದ್ದೇವೆ’ ಎಂದು ಹೇಳಿದರು.

ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ, ‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ, ಎಲ್ಲರೂ ಮುಂಜಾಗ್ರತೆ ವಹಿಸುವುದು ಅತ್ಯಗತ್ಯವಾಗಿದೆ. ಸರಳವಾಗಿ ಗಣೇಶೋತ್ಸವ ಆಯೋಜಿಸಲು ಮುಂದಾಗುವುದು ಒಳ್ಳೆಯದು. ಜೊತೆಗೆ ಮಾಸ್ಕ್‌ ಧರಿಸುವುದು, ಹ್ಯಾಂಡ್‌ ಸ್ಯಾನಿಟೈಸರ್‌ ಬಳಸುವುದು ಹಾಗೂ ಅಂತರ ಕಾಪಾಡಿಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ತಿಳಿಸಿದರು.

ಮುಖಂಡರಾದ ಮಹೇಶ ದಳವಿ, ನಾರಾಯಣ ಚೌಗಲೆ, ಪ್ರವೀಣ ಹಾಗೂ ಹೇಮಂತ ಹಾವಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.