ADVERTISEMENT

ತಂದೆ ಅಗಲಿಕೆ ನೋವಲ್ಲೂ ಪ್ರಥಮ ಶ್ರೇಣಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 12:43 IST
Last Updated 11 ಆಗಸ್ಟ್ 2020, 12:43 IST
ಅಂಜಲಿ ಗುರವ
ಅಂಜಲಿ ಗುರವ   

ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಆರಂಭದ ದಿನವೇ ತಂದೆ ಕಳೆದುಕೊಂಡಿದ್ದ ಹುಕ್ಕೇರಿ ತಾಲ್ಲೂಕು ಯಮಕನಮರಡಿ ವಿದ್ಯಾವರ್ಧಕ ಸಂಘ ಪ್ರೌಢಶಾಲೆಯ ವಿದ್ಯಾರ್ಥಿನಿ ಅಂಜಲಿ ರಮೇಶ ಗುರವ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಗಮನ ಸೆಳೆದಿದ್ದಾರೆ.

ತಂದೆಯ ಅಗಲಿಕೆಯ ನೋವಲ್ಲೂ ಪರೀಕ್ಷೆ ಎದುರಿಸಿದ್ದ ಅವರು 561 (ಶೇ 89.76) ಅಂಕ ಪಡೆದಿದ್ದಾರೆ.

ತಂದೆ ರಮೇಶ ಅವರು ಅಂದು ಬೆಳಿಗ್ಗೆ ಜಮೀನಿನಲ್ಲಿ ವಿದ್ಯುತ್‌ ಅವಘಡದಿಂದ ಸಾವಿಗೀಡಾಗಿದ್ದರು. ಆದರೆ, ಈ ಸುದ್ದಿಯನ್ನು ಅಂಜಲಿಗೆ ತಿಳಿಸಿರಲಿಲ್ಲ. ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಷ್ಟೇ ಪೋಷಕರು ತಿಳಿಸಿದ್ದರು. ಆತಂಕದಲ್ಲೇ ಆಕೆ ಪರೀಕ್ಷೆಗೆ ಹೋಗಿದ್ದರು. ಪರೀಕ್ಷೆ ಮುಗಿಸಿಕೊಂಡು ಬಂದ ನಂತರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಬಳಿಕ ಶಿಕ್ಷಕರು ಹಾಗೂ ಸಹಪಾಠಿಗಳು ಮನೆಗೆ ಬಂದು, ತಂದೆಯ ಆಸೆಯಂತೆ ಉತ್ತಮ ಶ್ರೇಣಿಯಲ್ಲಿ ಪಾಸಾಗಬೇಕು ಎಂದು ಹೇಳಿ ಆಕೆಗೆ ಧೈರ್ಯ ತುಂಬಿದ್ದರು.

ADVERTISEMENT

ಮೊದಲ ದಿನ ಇಂಗ್ಲಿಷ್‌ ವಿಷಯದ ಪರೀಕ್ಷೆ ಇತ್ತು. ಅದರಲ್ಲಿ 89 ಅಂಕಗಳು ಬಂದಿವೆ. ಉಳಿದಂತೆ ಗಣಿತ–89, ಕನ್ನಡದಲ್ಲಿ 125ಕ್ಕೆ 125, ಹಿಂದಿ–98, ಸಮಾಜವಿಜ್ಞಾನ–89, ವಿಜ್ಞಾನದಲ್ಲಿ 75 ಅಂಕಗಳನ್ನು ಪಡೆದಿದ್ದಾರೆ.

‘ನೋವಲ್ಲೇ ಪರೀಕ್ಷೆ ಎದುರಿಸಿದ್ದೆ. ಪ್ರಥಮ ಶ್ರೇಣಿ ಬಂದಿದೆ. ಇದನ್ನು ತಂದೆಗೆ ಅರ್ಪಿಸುತ್ತೇನೆ. ಅವರನ್ನು ಕಳೆದುಕೊಳ್ಳದಿದ್ದರೆ ಇನ್ನೂ ಹೆಚ್ಚಿನ ಅಂಕ ಗಳಿಸುತ್ತಿದ್ದೆ. ಅಪ್ಪನ ಬಯಕೆಯಂತೆ ಮುಂದೆಯೂ ಚೆನ್ನಾಗಿ ಓದುತ್ತೇನೆ. ಪಿಯುಸಿಯಲ್ಲಿ ವಿಜ್ಞಾನ ಕೋರ್ಸ್‌ ಸೇರಿ ಎಂಬಿಬಿಎಸ್ ಮಾಡಬೇಕು ಎಂಬ ಗುರಿ ಇದೆ’ ಎಂದು ಅಂಜಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವರಿದ್ದಿದ್ದರೆ ಎಷ್ಟು ಖುಷಿ ಪಡುತ್ತಿದ್ದರೋ?’ ಎಂದು ತಾಯಿ ವಿದ್ಯಾ ಕಣ್ತುಂಬಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.