ADVERTISEMENT

‘ಆರ್‌ಟಿಎಸ್‌ ಕಾರ್ಬೆಟೋಸಿನ್‌’ ಬಿಡುಗಡೆ ಇಂದು

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 16:16 IST
Last Updated 22 ಜುಲೈ 2021, 16:16 IST

ಬೆಳಗಾವಿ: ಪ್ರಸವನಂತರದ ರಕ್ತಸ್ರಾವ ತಡೆಗಟ್ಟಲು ಸಂಶೋಧಿಸಲಾಗಿರುವ ‘ಆರ್‌ಟಿಎಸ್‌ ಕಾರ್ಬೆಟೋಸಿನ್‌’ ಔಷಧಿಯ ಜಾಗತಿಕ ಬಿಡುಗಡೆ ಕಾರ್ಯಕ್ರಮವನ್ನು ಜುಲೈ 23ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಜೆಎನ್‌ಎಂಸಿ ಆವರಣದ ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕೆ.ಎಲ್.ಇ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಡೀಮ್ಡ್ ವಿಶ್ವವಿದ್ಯಾಲಯ, ಜವಾಹರಲಾಲ್‌ ನೆಹರೂ ವೈದ್ಯಕೀಯ ಮಹಾವಿದ್ಯಾಲಯ, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.

‘ಈ ಔಷಧಿಯನ್ನು ವಿಶ್ವದಲ್ಲೇ ಮೊದಲ ಬಾರಿಗೆ ಕೆಎಲ್‌ಇ ಪ್ರಭಾಕರ ಕೋರೆ ಚಾರಿಟಬಲ್‌ ಆಸ್ಪತ್ರೆಯಲ್ಲಿ ನೀಡಲಾಗುವುದು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು. ಸ್ತ್ರೀರೋಗ ತಜ್ಞರ ರಾಷ್ಟ್ರೀಯ ಸಂಸ್ಥೆ (ಎಫ್‌ಒಜಿಎಸ್‌ಐ) ಅಧ್ಯಕ್ಷೆ ಡಾ.ಶಾಂತಾ ಕುಮಾರಿ, ಬೆಂಗಳೂರಿನ ದಿವಾಕರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ.ಹೇಮಾ ದಿವಾಕರ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ.ಎನ್. ರಾಜಕುಮಾರ್, ಡಾ.ಶೀಲಾ ಮಾನೆ, ಡಾ.ವಿವೇಕ ಸಾವೊಜಿ ಭಾಗವಹಿಸಲಿದ್ದಾರೆ’ ಎಂದು ಜೆಎನ್‌ಎಂಸಿ ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಶಿವಪ್ರಸಾದ್ ಎಸ್.ಗೌಡರ ತಿಳಿಸಿದ್ದಾರೆ.

ADVERTISEMENT

‘ಜಗತ್ತಿನಾದ್ಯಂತ ಪ್ರಸವಾನಂತರದ ರಕ್ತಸ್ರಾವ (ಪಿಪಿಎಚ್) ತಾಯಂದಿರ ಸಾವಿಗೆ ಸಾಮಾನ್ಯ ಕಾರಣವಾಗಿದೆ. ಜಾಗತಿಕವಾಗಿ, ತಾಯಂದಿರ ಒಟ್ಟಾರೆ ಸಾವುಗಳಲ್ಲಿ ಶೇ 35ರಷ್ಟು ಪಿಪಿಎಚ್‌ಗೆ ಸಂಬಂಧಿಸಿದೆ. ಪ್ರಸವನಂತರದ ರಕ್ತಸ್ರಾವ ತಡೆಗಟ್ಟಲು ‘ಆಕ್ಸಿಟೋಸಿನ್’ ಪ್ರಮಾಣಿತ ಔಷಧಿಯಾಗಿ ಅತಿ ಹೆಚ್ಚು ಬಳಕೆಯಲ್ಲಿದೆ. ಆದರೆ, ಇದನ್ನು ಅತ್ಯಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಿಡಬೇಕು. ಇದಕ್ಕಾಗಿ ರೆಫ್ರಿಜರೇಟರ್‌ಗಳಲ್ಲಿ ಸಂಗ್ರಹಣೆ ಮತ್ತು ಸಾಗಣೆ ಅಗತ್ಯವಿರುತ್ತದೆ. ಇದನ್ನು ಗ್ರಾಮೀಣ ಭಾಗದಲ್ಲಿ ವ್ಯವಸ್ಥೆ ಮಾಡುವುದು ಕಷ್ಟ. ಈ ನಿಟ್ಟಿನಲ್ಲಿ ಕೋಣೆಯ ತಾಪಮಾನದಲ್ಲಿ ಸ್ಥಿರವಾಗಿರುವ ‘ಆರ್‌ಟಿಎಸ್ ಕಾರ್ಬೆಟೋಸಿನ್‌’ ಸಹಕಾರಿಯಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಅಧ್ಯಯನದ ಪ್ರಕಾರ, ಪ್ರಸವ ನಂತರದ ರಕ್ತಸ್ರಾವವನ್ನು ತಡೆಗಟ್ಟಲು ಆಕ್ಸಿಟೋಸಿನ್‌ಗೆ ಹೋಲಿಸಿದರೆ ಆರ್‌ಟಿಎಸ್ ಕಾರ್ಬೆಟೋಸಿನ್ ಕೂಡ ಪರಿಣಾಮ ಬೀರುತ್ತದೆ ಎಂದು ತೋರಿಸಿದೆ. ಈ ಶಾಖ ಸ್ಥಿರ ಸೂತ್ರೀಕರಣವು ಹೆರಿಗೆಯ ನಂತರ ಅತಿಯಾದ ರಕ್ತಸ್ರಾವ ತಡೆಗಟ್ಟಲು ಹೆಚ್ಚು ಉಪಯುಕ್ತವಾಗಿದೆ. ಈ ಪ್ರಯೋಗವನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಾಯೋಜಕತ್ವದಲ್ಲಿ ನಡೆಸಲಾಗಿದೆ. ಭಾರತೀಯ ಔಷಧ ನಿಯಂತ್ರಕರ ಕಚೇರಿ ಅನುಮೋದಿಸಿದೆ’ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.