ADVERTISEMENT

ಯಲ್ಲಮ್ಮನ ಗುಡ್ಡಕ್ಕೆ ಗೋವಾ ಸಿಎಂ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 15:18 IST
Last Updated 2 ಸೆಪ್ಟೆಂಬರ್ 2021, 15:18 IST
ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಗುರುವಾರ ಭೇಟಿ ನೀಡಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಅವರಿಗೆ ಮುತ್ತಿಗೆ ಹಾಕಲು ಕಳಸಾ ಬಂಡೂರಿ ಹೋರಾಟಗಾರರು ಮುನವಳ್ಳಿಯಲ್ಲಿ ಕಾದಿದ್ದರು
ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಗುರುವಾರ ಭೇಟಿ ನೀಡಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಅವರಿಗೆ ಮುತ್ತಿಗೆ ಹಾಕಲು ಕಳಸಾ ಬಂಡೂರಿ ಹೋರಾಟಗಾರರು ಮುನವಳ್ಳಿಯಲ್ಲಿ ಕಾದಿದ್ದರು   

ಬೆಳಗಾವಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸವದತ್ತಿಯ ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಗುರುವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು.

ಕೋವಿಡ್–19 ಕಾರಣದಿಂದ ಭಕ್ತರಿಗೆ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಆದರೆ, ಗಣ್ಯವ್ಯಕ್ತಿಯಾದ್ದರಿಂದ ನೆರೆ ರಾಜ್ಯದ ಮುಖ್ಯಮಂತ್ರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಮೂಲಗಳು ತಿಳಿಸಿವೆ.

ಅವರ ಭೇಟಿ ವೇಳೆ, ದೇವಸ್ಥಾನದ ಆವರಣಕ್ಕೆ ಸ್ಥಳೀಯ ‌ಮಾಧ್ಯಮ ಪ್ರತಿನಿಧಿಗಳಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಸಾವಂತ್‌ ಅವರಿಗೆ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಸಾಥ್ ನೀಡಿದರು.

ADVERTISEMENT

ಮಹದಾಯಿ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ರೈತರು ಅಥವಾ ಕನ್ನಡ ಪರ ಸಂಘಟನೆ ಮುಖಂಡರು ಮುತ್ತಿಗೆ ಹಾಕುವ ಸಾಧ್ಯತೆ ಇದ್ದಿದ್ದರಿಂದ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಆ ಮುಖ್ಯಮಂತ್ರಿಯು ಯಲ್ಲಮ್ಮನಗುಡ್ಡಕ್ಕೆ ತೆರಳಿದ ವಿಷಯ ತಿಳಿದ ಕಳಸಾ ಬಂಡೂರಿ ಹೋರಾಟಗಾರರು ವಿನಯ ಕುಲಕರ್ಣಿ ನೇತೃತ್ವದಲ್ಲಿ ಮುತ್ತಿಗೆ ಹಾಕಲು ಮುನವಳ್ಳಿಯಲ್ಲಿ ಸೇರಿದ್ದರು. ಆದರೆ, ಸಾವಂತ್ ಅವರು ಸವದತ್ತಿ–ಇಮಾನಹೊಂಗಲ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿದರು. ಈ ವಿಷಯ ತಿಳಿದ ಹೋರಾಟಗಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸರ್ಕಾರವು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.