ಬೆಳಗಾವಿ: ‘ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಣೆ ಮಾಡುವುದನ್ನು ಕಟ್ಟುನಿಟ್ಟಾಗಿ ತಡೆಯಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಸಲ್ಲಿಸಲಾಗಿದೆ. ಪರಿಣಾಮಕಾರಿ ಜಾರಿಗೆ ಅನುದಾನ ಕೋರಲಾಗಿದೆ’ ಎಂದು ಅಬಕಾರಿ ಇಲಾಖೆ ಆಯುಕ್ತ ಆರ್.ವೆಂಕಟೇಶಕುಮಾರ್ ತಿಳಿಸಿದ್ದಾರೆ.
ಆಗಸ್ಟ್ 24ರಂದು ‘ಪ್ರಜಾವಾಣಿ’ಯ ‘ಒಳನೋಟ’ ಅಂಕಣದಲ್ಲಿ ಪ್ರಕಟವಾದ ವರದಿಗೆ ಸ್ಪಂದನೆ ನೀಡಿರುವ ಅವರು, ‘ಈ ಕ್ರಿಯಾ ಯೋಜನೆಯ ಪ್ರಕಾರ ಅಬಕಾರಿ ಇಲಾಖೆ, ಪೊಲೀಸ್, ಸಾರಿಗೆ, ವಾಣಿಜ್ಯ ತೆರಿಗೆ, ಕಂದಾಯ ಇಲಾಖೆಯ ವಿಭಾಗೀಯ ಆಯುಕ್ತರೂ ಸೇರಿ ಸಮಿತಿ ರಚಿಸಲಾಗಿದೆ. ನೆರೆ– ಹೊರೆಯ ರಾಜ್ಯಗಳ ಅಧಿಕಾರಿಗಳ ಸಮನ್ವಯದೊಂದಿಗೆ ಈ ಕ್ರಿಯಾ ಯೋಜನೆ ಅನುಷ್ಠಾನ ಮಾಡಲಾಗುವುದು. ಮದ್ಯ ಹಾಗೂ ಸ್ಪಿರಿಟ್ ಅಕ್ರಮ ಸಾಗಣೆ ತಡೆಗೆ ಶಕ್ತಿ ಮೀರಿ ಯತ್ನಿಸಲಾಗುವುದು’ ಎಂದು ತಿಳಿಸಿದ್ದಾರೆ.
‘ಕ್ರಿಯಾ ಯೋಜನೆ ಅನುಷ್ಠಾನಕ್ಕೆ ಬೇಕಾಗುವ ಹೆಚ್ಚುವರಿ ಸಿಬ್ಬಂದಿ ಹಾಗೂ ಅನುದಾನದ ವಿವರ ಸಲ್ಲಿಸುವಂತೆ ಸೂಚಿಸಲಾಗಿದೆ. ಇದಕ್ಕೆ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಶೀಘ್ರವೇ ಪರಿಶೀಲಿಸಿ ವರದಿ ಸಲ್ಲಿಸಲಾಗುವುದು’ ಎಂದು ವಿವರಿಸಿದ್ದಾರೆ.
‘ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 799 ಪ್ರಕರಣ ದಾಖಲಿಸಿದ್ದು 1.06 ಲಕ್ಷ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಬೆಳಗಾವಿ, ಉತ್ತರ ಕನ್ನಡ, ಹಾಸ, ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು ಜಿಲ್ಲೆಗಳಲ್ಲಿ 530 ಪ್ರಕರಣ ದಾಖಲಿಸಿ, 52,798 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
‘ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಾಲ್ಕು ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, 24X7 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕರ್ನಾಟಕದಿಂದ ಗೋವಾಗೆ ಅಕ್ರಮವಾಗಿ ಸರಬರಾಜು ಆಗುವ 18.19 ಲಕ್ಷ ಲೀಟರ್ ಸ್ಪಿರಿಟ್ ಕೂಡ ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.