
ಗೋಕಾಕ: ನೂತನ ಗೋಕಾಕ ಜಿಲ್ಲೆ ರಚನೆ ಮಾಡುವಂತೆ ಆಗ್ರಹಿಸಿ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ಹಾಗೂ ವಕೀಲರ ಸಂಘದ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬುಧವಾರ ಮೆರವಣಿಗೆ ಆರಂಭಗೊಂಡು, ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಕಾರರು ಧರಣಿ ನಡೆಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರ– ಮುಖ್ಯಮಂತ್ರಿಯನ್ನೇ ಬದಲಾಯಿಸುವ ಸಾಮರ್ಥ್ಯವುಳ್ಳ ಜಾರಕಿಹೊಳಿ ಸಾವುಕಾರರು ಗೋಕಾಕ ಜಿಲ್ಲಾ ಕೇಂದ್ರ ರಚನೆಯಲ್ಲಿ ಸಕಾರಾತ್ಮಕ ಪಾತ್ರ ವಹಿಸಬೇಕು’ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಮಹಾಂತೇಶ ಕಡಾಡಿ ಮಾತನಾಡಿ, ‘ಗೋಕಾಕ ಜನತೆಯ ಬಹು ನಿರೀಕ್ಷಿತ ಜಿಲ್ಲಾ ಕೇಂದ್ರ ಸ್ಥಾನಮಾನದ ಕನಸು ಈಡೇರಿಸಲು ಜಾರಕಿಹೊಳಿ ಸಹೋದರರು ಇನ್ನಷ್ಟು ಪರಿಶ್ರಮ ಪಡಬೇಕು’ ಎಂದು ಒತ್ತಾಯಿಸಿದರು.
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ, ‘ಗೋಕಾಕ ನೂತನ ಜಿಲ್ಲಾ ಕೇಂದ್ರ ಕನಸು ಈಡೇರುವ ದಿನಗಳು ದೂರವಿಲ್ಲ’ ಪ್ರತಿಭಟನಕಾರರನ್ನು ಸಂತೈಸಿದರು.
ಹೋರಾಟದ ಮುಂದಾಳತ್ವ ವಹಿಸಿದ್ದ ಶೂನ್ಯ ಸಂಪಾದನಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಸರ್ಕಾರವು ಗೋಕಾಕ ಜಿಲ್ಲೆಗೆ ಆಗ್ರಹಿಸುತ್ತಿರುವ ಹೋರಾಟಗಾರರಿಗೆ ಈ ಬಾರಿ ನ್ಯಾಯ ಒದಗಿಸಲಿ’ ಎಂದು ಆಶಿಸಿದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಅನಿಲ ಜೈನ್ ಅವರಿಗೆ ಮನವಿ ಸಲ್ಲಿಸಲಾಯಿತು.
ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಹೋರಾಟದಲ್ಲಿ ಭಾಗವಾಗಿದ್ದರು.
ಘಟಪ್ರಭಾದ ಶಿಕ್ಷಣ ಪ್ರೇಮಿ ರಾಮಣ್ಣ ಹುಕ್ಕೇರಿ ಮಾತನಾಡಿದರು. ವಕೀಲ ಶಂಕರ ಗೋರೋಶಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.