ಗೋಕಾಕ: ಇಲ್ಲಿನ ಹಳೆ ದನಗಳ ಪೇಟೆ, ದಾಳಂಬ್ರಿ ತೋಟ, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗರ ಓಣಿ, ಕುಂಬಾರ ಓಣಿ, ಡೋಹರ ಗಲ್ಲಿಯ ನಿವಾಸಿಗಳಲ್ಲಿ ಮತ್ತೆ ಆತಂಕ ಎದುರಾಗಿದೆ. ಕಳೆದ ವರ್ಷ ಪ್ರವಾಹದಿಂದ ತತ್ತರಿಸಿದ ಅವರ ಬದುಕು ಈಗತಾನೆ ಸುಧಾರಿಸಿಕೊಳ್ಳುತ್ತಿತ್ತು. ಅಷ್ಟರೊಳಗೆ ಮತ್ತೆ ನದಿಗಳು ಉಕ್ಕೇರುತ್ತಿದ್ದು, ಪ್ರವಾಹ ಭೀತಿ ಮನೆ ಮಾಡಿದೆ. ಶಾಶ್ವತ ಸ್ಥಳಾಂತರ ಮಾಡಬೇಕು ಎಂಬ ಬೇಡಿಕೆಗೆ ಮಾತ್ರ ಸರ್ಕಾರ ಕಿವುಡಾಗಿದೆ.
ಮೂರು ದಿನಗಳಿಂದ ಧಾರಾಕಾರ ಮಳೆ ಮುಂದುವರಿದ ಕಾರಣ ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ಉಕ್ಕಿ ಹರಿಯುತ್ತಿವೆ. ಸೋಮವಾರ ರಾತ್ರಿಯವರೆಗೂ ಸಂಚಾರಕ್ಕೆ ಮುಕ್ತವಾಗಿದ್ದ ಶಿಂಗಳಾಪುರ ಸೇತುವೆ ಮಂಗಳವಾರ ಬೆಳಕಾಗುವಷ್ಟರಲ್ಲಿ ಕುರುಹು ಕೂಡ ಇಲ್ಲದ ರೀತಿ ಮುಳಿಗಡೆಯಾಗಿದೆ. ಎರಡೂ ನದಿಗಳ ನೀರಿನ ಪ್ರಮಾಣ ಎಷ್ಟು ವೇಗವಾಗಿ ಹೆಚ್ಚುತ್ತಿದೆ ಎಂಬುದಕ್ಕೆ ಇದು ಸಾಕ್ಷಿ.
‘ಮೂರು ತಲೆಮಾರುಗಳಿಂದ ನೂರಾರು ಕುಟುಂಬದವರು ಸಮಸ್ಯೆ ಎದುರಿಸುತ್ತಿದ್ದೇವೆ. ಶಾಶ್ವತ ಸ್ಥಳಾಂತರ ಮಾಡಿ ಎಂದು ಹೇಳುತ್ತಲೇ ಬಂದಿದ್ದೇವೆ. ಸರ್ಕಾರ ಉದ್ದೇಶಪೂರ್ವಕ ಮಾಡುತ್ತಿಲ್ಲ. ಸಂತ್ರಸ್ತರು ಬಯಸಿದರೆ ಬೇರೆ ಮನೆ ಕಟ್ಟಿಕೊಡಲಾಗುವುದು. ಆದರೆ, ಅವರು ಸ್ಪಂದಿಸುತ್ತಿಲ್ಲ ಎಂದು ಸಚಿವರು, ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ಸುಳ್ಳು. ನಮ್ಮನ್ನು ಸ್ಥಳಾಂತರಿಸಿ ಎಂದು ಪ್ರತಿ ವರ್ಷವೂ ನಾವು ಹೇಳುತ್ತಲೇ ಇದ್ದೇವೆ’ ಎಂದು ಈ ಪ್ರದೇಶದ ಜನ ಒಕ್ಕೊರಲಿನಿಂದ ಹೇಳಿಕೊಂಡಿದ್ದಾರೆ.
ಪ್ರತಿ ವರ್ಷವೂ ಪ್ರವಾಹ ಬರುತ್ತದೆ, ಮನೆಗಳು ಬೀಳುತ್ತವೆ, ಪ್ರತಿವರ್ಷವೂ ಕಟ್ಟಿಕೊಳ್ಳಬೇಕು. ಪ್ರತಿ ವರ್ಷವೂ ಹೊಲಗಳಿಗೆ ನೀರು ನುಗ್ಗಿ ಅಪಾರ ಬೆಳೆ ಕೊಳೆಯುತ್ತದೆ. ಸರ್ಕಾರ ಚಿಲ್ಲರೆ ಪರಿಹಾರ ನೀಡುತ್ತದೆ. ಇದಕ್ಕೆ ಕೊನೆ ಯಾವಾಗ ಎಂದು ಪ್ರಶ್ನಿಸುತ್ತಾರೆ ಇಲ್ಲಿನ ಜನ.
‘2024ರ ಆಗಸ್ಟ್‌ನಲ್ಲಿ ಕೂಡ ಇದೇ ಪರಿಸ್ಥಿತಿ ಉಂಟಾಗಿತ್ತು. ರಾತೋರಾತ್ರಿ ಮನೆಗಳನ್ನು ಖಾಲಿ ಮಾಡಿ ಎಂದು ಆದೇಶ ಬಂತು. ಶಾಲೆಗಳಲ್ಲಿ ತೆರೆದಿದ್ದ ಕಾಳಜಿ ಕೇಂದ್ರಕ್ಕೆ ಹೋದೆವು. ಆಗ ನಾನು ಎಸ್‌ಎಸ್‌ಎಲ್‌ಸಿ ಓದುತ್ತಿದ್ದೆ. ನನ್ನಂಥ 160 ವಿದ್ಯಾರ್ಥಿಗಳಿದ್ದರು. ಸುಮಾರು 42 ದಿನ ಕಾಳಜಿ ಕೇಂದ್ರದಲ್ಲೇ ಕಳೆದೆವು. ಅಲ್ಲಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಓದುವುದಕ್ಕೆ ಅಡಚಣೆ ಆಯಿತು. ಈಗ ಮತ್ತೆ ಅದೇ ದಿನಗಳು ಮರಳಿವೆ’ ಎಂದು ನೊಂದು ಹೇಳಿಕೊಂಡರು ವಿದ್ಯಾರ್ಥಿನಿ ಶಬಾನಾ.
ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳಿಂದ ಲೋಳಸೂರ ಸೇತುವೆಯಲ್ಲಿ 43 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. 53 ಸಾವಿರ ಕ್ಯೂಸೆಕ್ ನೀರು ಬಂದರೆ ಪ್ರವಾಹ ಬರುತ್ತದೆ .ಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ
‘ಕಾಳಜಿ ಕೇಂದ್ರ ತೆರೆಯುವುದು ತಾತ್ಕಾಲಿಕ ಕಾಳಜಿ. ಅಲ್ಲಿಗೆ ಹೋಗಿ ಮರಳಿ ಮನೆಗೆ ಬಂದಾಗ ಮನೆಗಳು ವಾಸಕ್ಕೆ ಯೋಗ್ಯವಲ್ಲದ ರೀತಿ ಹಾಳಾಗಿರುತ್ತವೆ. ಯಾವಾಗ ಬೀಳುತ್ತವೆಯೋ ಎಂಬ ಭಯದಲ್ಲೇ ಬದುಕಬೇಕು. ಕಾಳು– ಕಡಿ, ಬಟ್ಟೆ–ಬರೆ, ಪುಸ್ತಕಗಳು, ದಾಖಲೆಗಳು ಏನೆಲ್ಲವನ್ನ ಜತನ ಮಾಡಬೇಕು ಎಂದು ಸರ್ಕಾವೇ ಹೇಳಬೇಕು’ಎಂಬುದು ರೈತ ರಮೇಶ ಅವರ ಅಳಲು.
ನದಿ ದಡದಲ್ಲಿವೆ 330 ಹಳ್ಳಿ
ಕೃಷ್ಣಾ ವೇದಗಂಗಾ ದೂಧಗಂಗಾ ಘಟಪ್ರಭಾ ಮಲಪ್ರಭಾ ಹಾಗೂ ಮಾರ್ಕಂಡೇಯ ನದಿಗಳ ದಡದಲ್ಲಿ ಸಮಾರು 330 ಹಳ್ಳಿಗಳಿವೆ. ಅದರಲ್ಲೂ 33 ಹಳ್ಳಿಗಳು ನದಿಗೆ ಕೂಗಳತೆಯಲ್ಲಿವೆ. ಈಗ ಈ ಎಲ್ಲ ಹಳ್ಳಿಗಳ ರೈತರ ಹೊಲಗಳೂ ನೀರಿನಿಂದಾವೃತವಾಗಿವೆ. ಸದ್ಯಕ್ಕೆ ಪ್ರವಾಹ ಭೀತಿ ಇಲ್ಲವಾದರೂ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡುತ್ತಲೇ ಇದೆ. ಮಂಗಳವಾರ ‘ರೆಡ್‌ಅಲರ್ಡ್’ ಘೋಷಣೆ ಮಾಡುವ ಮೂಲಕ ಮತ್ತೊಂದು ಪ್ರವಾಹ ಎದುರಿಸಲು ಸಜ್ಜಾಗಿ ಎಂಬ ಸಂದೇಶ ನೀಡಿದೆ.
550 ಕಾಳಜಿ ಕೇಂದ್ರಗಳಿಗೆ ಸಿದ್ಧತೆ
‘ಜಿಲ್ಲೆಯಲ್ಲಿ ಸದ್ಯಕ್ಕೆ 30 ಕಾಳಜಿ ಕೇಂದ್ರಗಳ ಅವಶ್ಯಕತೆ ಇದೆ. ಇದೇ ರೀತಿ ಮಳೆ ಮುಂದುವರಿದರೆ ಮತ್ತೆ 20 ಕೇಂದ್ರಗಳು ಬೇಕಾಗುತ್ತವೆ. ಮುನ್ನೆಚ್ಚರಿಕೆಯಾಗಿ 550 ಕಾಳಜಿ ಕೇಂದ್ರಗಳನ್ನು ಸಿದ್ಧ ಮಾಡಿ ಇಟ್ಟುಕೊಂಡಿದ್ದೇವೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.
‘ಕೃಷ್ಣಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಹರಿದು ಬಂದರೆ ಪ್ರವಾಹ ಸೃಷ್ಟಿಯಾಗುತ್ತದೆ. ಹಾಗಾಗಿ ಸದ್ಯಕ್ಕೆ ಕೃಷ್ಣಾ ನದಿ ಪಾತ್ರದಲ್ಲಿ ಯಾವುದೇ ಆತಂಕದ ಸ್ಥಿತಿ ಆಗಿಲ್ಲ. ಮಲಪ್ರಭಾ ನದಿಯಲ್ಲಿ 14 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು ಆತಂಕ ಇಲ್ಲ. 25 ಸಾವಿರ ಕ್ಯೂಸೆಕ್ ನೀರು ಹರಿದರೆ ರಾಮದುರ್ಗ ತಾಲ್ಲೂಕಿನಲ್ಲಿ ಸಮಸ್ಯೆ ಉದ್ಭವಿಸುತ್ತದೆ. ಸದ್ಯಕ್ಕೆ ಮಲಪ್ರಭಾ ನದಿಗೆ ವಾಡಿಕೆಯಷ್ಟು ನೀರು ಹರಿಯುತ್ತಿದೆ’ ಎಂಬುದು ಅವರ ಹೇಳಿಕೆ.
ಸುರಕ್ಷಿತ ಸ್ಥಳಗಳಿಗೆ ಹೋಗಿ: ಸಚಿವ ಸತೀಶ
‘ನಿರಂತರ ಮಳೆಯಿಂದ ಘಟಪ್ರಭಾ ಕೃಷ್ಣಾ ದೂಧಗಂಗಾ ಹಿರಣ್ಯಕೇಶಿ ಮಾರ್ಕಂಡೇಯ ಹಾಗೂ ಮಲಪ್ರಭಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಆದ್ದರಿಂದ ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮನವಿ ಮಾಡಿದ್ದಾರೆ.
‘ಹಿಡಕಲ್ ಜಲಾಶಯ ಸಂಪೂರ್ಣ ತುಂಬಿಕೊಂಡಿದೆ. ಹಿಡಕಲ್ ಡ್ಯಾಂ ಹಿರಣ್ಯಕೇಶಿ ಮಾರ್ಕಂಡೇಯ ಹಾಗೂ ಬಳ್ಳಾರಿ ನಾಲಾ ನೀರು ಸೇರಿ ಘಟಪ್ರಭಾ ನದಿಗೆ 43 ಸಾವಿರ ಕ್ಯೂಸೆಕ್ ನೀರು ಸೇರುತ್ತಿರುವುದರಿಂದ ಪ್ರವಾಹದ ಅಪಾಯ ಇನ್ನಷ್ಟು ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ನದಿಪಾತ್ರಗಳಲ್ಲಿ ವಾಸಿಸುತ್ತಿರುವ ರೈತರು ಹಾಗೂ ನಾಗರಿಕರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
‘ಜಿಲ್ಲಾ ಆಡಳಿತ ಪೊಲೀಸ್ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಪಡೆಗಳೊಂದಿಗೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಸಮಗ್ರವಾಗಿ ನಿಗಾದಲ್ಲಿ ಇಟ್ಟುಕೊಂಡಿದ್ದೇನೆ. ನಾಗರಿಕರ ಜೀವದ ರಕ್ಷಣೆಯೇ ನಮ್ಮ ಮೊದಲ ಆದ್ಯತೆ. ತಮ್ಮ ಕುಟುಂಬದ ಸುರಕ್ಷತೆ ಖಚಿತಪಡಿಸಿಕೊಳ್ಳಿ’ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.