ADVERTISEMENT

ಸನ್ಮತಿ ಶಿಕ್ಷಣ ಸಮಿತಿಗೆ ‘ಸುವರ್ಣ’ ಸಂಭ್ರಮ

ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯಿಂದ ಜ್ಞಾನ ದಾಸೋಹ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 9:12 IST
Last Updated 18 ಜನವರಿ 2019, 9:12 IST
ಎಸ್‌ಎಸ್‌ಎಸ್ ಸಮಿತಿ ಸಂಸ್ಥೆಯ ಕಟ್ಟಡ
ಎಸ್‌ಎಸ್‌ಎಸ್ ಸಮಿತಿ ಸಂಸ್ಥೆಯ ಕಟ್ಟಡ   

ಬೆಳಗಾವಿ: ‘ನಗರದೊಂದಿಗೆ ಗಡಿ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಜ್ಞಾನ ದಾಸೋಹದಲ್ಲಿ ತೊಡಗಿರುವ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯು ಇಲ್ಲಿನ ನೆಹರೂ ನಗರದಲ್ಲಿ ನಡೆಸುತ್ತಿರುವ ಮಹಾವೀರ ಪಿ. ಮಿರ್ಜಿ ವಾಣಿಜ್ಯ ಕಾಲೇಜಿನ ಸುವರ್ಣ ಮಹೋತ್ಸವವನ್ನು ಜ. 23ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆ ಅಧ್ಯಕ್ಷ ಜಗದೀಶ ಸವದತ್ತಿ ತಿಳಿಸಿದರು.

‘ಇಂಗ್ಲಿಷ್ ಮಾಧ್ಯಮ ಶಾಲೆಯ ಕಟ್ಟಡ ಉದ್ಘಾಟನೆ ಮತ್ತು ದಿ.ಶೋಭಾ ಜಗದೀಶ ಸವದತ್ತಿ ಇಂಗ್ಲಿಷ್ ಮಾಧ್ಯಮ ಶಾಲೆ ನಾಮಕರಣವೂ ನಡೆಯಲಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸ್ವಾದಿ ಸೋಂದಾ ಮಠದ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಆರ್‌ಸಿಯು ಕುಲ‍ಪತಿ ಪ್ರೊ.ಶಿವಾನಂದ ಹೊಸಮನಿ, ಮುಖಂಡ ಅಭಯಚಂದ್ರ ಜೈನ್‌ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು. ಹಿರಿಯ ವಿದ್ಯಾರ್ಥಿಯೂ ಆಗಿರುವ ಸಂಸದ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸುವರು. ನಮ್ಮಲ್ಲಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಹಳೆಯ ವಿದ್ಯಾರ್ಥಿಗಳನ್ನು ಸತ್ಕರಿಸಲಾಗುವುದು. ಸಂಜೆ 4ಕ್ಕೆ ಉದ್ಯೋಗಿಗಳನ್ನು ಸನ್ಮಾನಿಸಲಾಗುವುದು’ ಎಂದು ವಿವರಿಸಿದರು.

ADVERTISEMENT

ಸಂಸ್ಥೆಯ ಹೆಜ್ಜೆಗುರುತು:‘ರಾಜ್ಯದ ಹೆಬ್ಬಾಗಿಲು ಅಥಣಿ ತಾಲ್ಲೂಕು ಶೇಡಬಾಳದಲ್ಲಿ ಕೆಲವು ಸುಶಿಕ್ಷಿತರು ಸಹಕಾರಿ ತತ್ವದಲ್ಲಿ 1951ರಲ್ಲಿ ಸಂಸ್ಥೆ ನೋಂದಾಯಿಸಿದ್ದರು. ಆಗಿನ ಮೈಸೂರು ರಾಜ್ಯದಲ್ಲಿ ಸಹಕಾರಿ ಕ್ಷೇತ್ರದಡಿ ಜನ್ಮ ತಾಳಿದ ಪ್ರಥಮ ಶಿಕ್ಷಣ ಸಂಸ್ಥೆ ಇದು. 1952ರಲ್ಲಿ ಸನ್ಮತಿ ವಿದ್ಯಾಲಯ ಎಂಬ ಪ್ರೌಢಶಾಲೆ ಪ್ರಾರಂಭಿಸಿದರು. ಸ್ವಂತ ಕಟ್ಟಡ, ಒಳ್ಳೆಯ ಶೈಕ್ಷಣಿಕ ಪರಿಸರ ಹೊಂದಿದ ಈ ಶಾಲೆ ಬೆಳೆಯುತ್ತಿದೆ’ ಎಂದು ನಿವೃತ್ತ ಪ್ರಾಂಶುಪಾಲ ಎ.ಆರ್. ರೊಟ್ಟಿ ತಿಳಿಸಿದರು.

‘1968ರಲ್ಲಿ ಶೇಡಬಾಳದಲ್ಲೇ ವಾಣಿಜ್ಯ ಕಾಲೇಜು ಆರಂಭಿಸಲಾಯಿತು. ಜಿಲ್ಲೆಯ 2ನೇ ವಾಣಿಜ್ಯ ಕಾಲೇಜು ಇದಾಗಿತ್ತು. ಕರ್ನಾಟಕ ವಿಶ್ವವಿದ್ಯಾಲಯದಡಿ ಪಿಯು ಮತ್ತು ಬಿ.ಕಾಂ. ಮೊದಲನೇ ವರ್ಷಕ್ಕೆ 35 ವಿದ್ಯಾರ್ಥಿಗಳಿದ್ದರು. ಅನೇಕ ಕಠಿಣ ಸವಾಲುಗಳನ್ನು ಎದುರಿಸಿ ಸಂಸ್ಥೆ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸಹಕಾರದಿಂದ ಉತ್ತಮ ಶಿಕ್ಷಣ ನೀಡುತ್ತಿದೆ’ ಎಂದು ಹೇಳಿದರು.

ಸಾವಿರಾರು ವಿದ್ಯಾರ್ಥಿಗಳು:‘1972ರಲ್ಲಿ ಬರಗಾಲದಿಂದಾಗಿ ಸಂಸ್ಥೆಗೆ ಸಂಚಕಾರ ಬಂತು. ಜನರು ಗುಳೆ ಹೋಗತೊಡಗಿದರು. ಹೀಗಾಗಿ, ವಿದ್ಯಾರ್ಥಿಗಳ ಸಂಖ್ಯೆ ಕುಸಿಯಿತು. 1973–74ರಲ್ಲಿ ಬೆಳಗಾವಿಗೆ ಕಾಲೇಜು ಸ್ಥಳಾಂತರಿಸಲಾಯಿತು. 1983ರಲ್ಲಿ ಮಹಾವೀರ ಪಿ. ಮಿರ್ಜಿ ಅವರ ದೇಣಿಗೆಯಿಂದ ಕಾಲೇಜನ್ನು ಮಹಾವೀರ ಪಿ.ಮಿರ್ಜಿ ವಾಣಿಜ್ಯ ಕಾಲೇಜೆಂದು ನಾಮಕರಣ ಮಾಡಲಾಯಿತು. ಸರ್ಕಾರವು ಸಂಯುಕ್ತ ಪದವಿ ಕಾಲೇಜಿನಿಂದ, ಪಿಯು ಬೇರ್ಪಡಿಸಿದಾಗ ಜಗದೀಶ ಸವದತ್ತಿ ದೇಣಿಗೆ ನೀಡಿದ್ದರಿಂದ 2001ರಲ್ಲಿ ಮರುನಾಮಕರಣ ಮಾಡಲಾಗಿದೆ’ ಎಂದು ಹಿಂದಿನ ಹೆಜ್ಜೆಗಳನ್ನು ಹಂಚಿಕೊಂಡರು.

‘ಪ್ರಸ್ತುತ 9 ವಿವಿಧ ಅಂಗಸಂಸ್ಥೆಗಳಿದ್ದು, 8ಸಾವಿರ ವಿದ್ಯಾರ್ಥಿಗಳಿದ್ದಾರೆ ಹಾಗೂ 200 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಮಹಾವೀರ ಹರದಿ, ಸಾವಿತ್ರಿ ದೊಡ್ಡಣ್ಣವರ, ಅಶೋಕ ಕುಸನಾಳೆ, ಪ್ರಕಾಶ ದೊಡ್ಡಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.