ADVERTISEMENT

'ನೆಹರೂ ಮಾಡಿದ ತಪ್ಪು ಸರಿಪಡಿಸಲು ಮೋದಿ ಅವರೇ ಹುಟ್ಟಿ ಬರಬೇಕಾಯ್ತು'

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 14:35 IST
Last Updated 27 ಸೆಪ್ಟೆಂಬರ್ 2019, 14:35 IST
ಬೆಳಗಾವಿಯಲ್ಲಿ ಶುಕ್ರವಾರ ನಡೆದ ‘ರಾಷ್ಟ್ರೀಯ ಏಕತಾ ಅಭಿಯಾನ’ದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿದರು. ಮುಖಂಡರಾದ ಕಿರಣ ಜಾಧವ, ಸಂಜಯ ಪಾಟೀಲ, ರಾಜೇಂದ್ರ ಹರಕುಣಿ, ಶಾಸಕರಾದ ಪಿ. ರಾಜೀವ, ಅನಿಲ ಬೆನಕೆ ಇದ್ದಾರೆ
ಬೆಳಗಾವಿಯಲ್ಲಿ ಶುಕ್ರವಾರ ನಡೆದ ‘ರಾಷ್ಟ್ರೀಯ ಏಕತಾ ಅಭಿಯಾನ’ದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿದರು. ಮುಖಂಡರಾದ ಕಿರಣ ಜಾಧವ, ಸಂಜಯ ಪಾಟೀಲ, ರಾಜೇಂದ್ರ ಹರಕುಣಿ, ಶಾಸಕರಾದ ಪಿ. ರಾಜೀವ, ಅನಿಲ ಬೆನಕೆ ಇದ್ದಾರೆ   

ಬೆಳಗಾವಿ: ‘ಜಮ್ಮು– ಕಾಶ್ಮೀರಕ್ಕೆ ಹಿಂದೆ ಸರ್ಕಾರದಿಂದ ನೀಡಲಾಗಿರುವ ಅನುದಾನದ ಪ್ರಮಾಣ ಗಮನಿಸಿದರೆ, ಅಲ್ಲಿ ಬಂಗಾರದ ರಸ್ತೆಗಳನ್ನೇ ನಿರ್ಮಿಸಬಹುದಿತ್ತು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಬಿಜೆಪಿ ಉತ್ತರ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರೀಯ ಏಕತಾ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಮಾಡಿದ ತಪ್ಪು ಸರಿಪಡಿಸಲು ನರೇಂದ್ರ ಮೋದಿ ಅವರೇ ಹುಟ್ಟಿ ಬರಬೇಕಾಯಿತು. ವಿಶೇಷ ಸ್ಥಾನಮಾನ ರದ್ದುಪಡಿಸಿ, ಜಮ್ಮು–ಕಾಶ್ಮೀರವನ್ನು ದೇಶದಲ್ಲಿ ವಿಲೀನಗೊಳಿಸುವ ದಿಟ್ಟತೆಯನ್ನು ನಮ್ಮ ಸರ್ಕಾರ ಮಾಡಿದೆ. ಆದರೆ, ಕಾಂಗ್ರೆಸ್‌ನ ಕೆಲವರು ಈಗಲೂ ಪಾಕಿಸ್ತಾನದ ಪರವಾಗಿಯೇ ಮಾತಾಡುತ್ತಿದ್ದಾರೆ. ಈಗ ಮಾನವ ಹಕ್ಕುಗಳ ಬಗ್ಗೆ ಕೇಳುವವರು, ಪರಿಶಿಷ್ಟರಿಗೆ ಅಲ್ಲಿ ಮೀಸಲಾತಿ ಇತ್ತೇ ಎನ್ನುವುದನ್ನು ನೋಡಬೇಕಿತ್ತು. ಹೀಗಾಗಿಯೇ ಕಾಂಗ್ರೆಸ್‌ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ ಎಂದು ಚುನಾವಣೆ ವೇಳೆ ಹೇಳಿದ್ದೆ. ಆ ಕೇಸ್ ಇನ್ನೂ ನಡೆಯುತ್ತಿದೆ’ ಎಂದರು.

ADVERTISEMENT

ಈಗಲ್ಲಿ ನಿವೇಶನ ಖರೀದಿಸಬಹುದು:

‘ಭಾರತದ ಯಾವುದೇ ಭಾಗದವರೂ ಈಗ ಕಾಶ್ಮೀರದಲ್ಲಿ ನಿವೇಶನ ಖರೀದಿಸಬಹುದು. ಅಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ’ ಎಂದರು.

ಕುಡಚಿ ಶಾಸಕ ಪಿ. ರಾಜೀವ ಮಾತನಾಡಿ, ‘ಡಾ.ಬಿ.ಆರ್. ಅಂಬೇಡ್ಕರ್‌ ನೀಡಿದ ಅದ್ಭುತವಾದ ಸಂವಿಧಾನ ಜಮ್ಮು–ಕಾಶ್ಮೀರಕ್ಕೆ ಅನ್ವಯವಾಗದ ಸ್ಥಿತಿ ಇತ್ತು. ಅಬ್ದುಲ್ಲ, ಸೈಯದ್ ಮುಫ್ತಿ ಕುಟುಂಬ ಮತ್ತು ನೆಹರೂ ಮನೆತನದವರದ್ದೇ ನಡೆಯುತ್ತಿತ್ತು. ಅವರದೇ ಸಂವಿಧಾನ ಎನ್ನುವಂತಿತ್ತು’ ಎಂದು ತಿಳಿಸಿದರು.

ಪೌರಕಾರ್ಮಿಕನಾಗಿಯೇ ಇರಬೇಕಿತ್ತು:

‘ಅಲ್ಲಿನ ಪೌರಕಾರ್ಮಿಕನ ಮಗ ಇಲ್ಲಿ ವೈದ್ಯಕೀಯ ಪದವಿ ಪಡೆದು ಹೋದರೂ ಅಲ್ಲಿ ವೈದ್ಯ ಆಗುವಂತಿರಲಿಲ್ಲ. ಪೌರಕಾರ್ಮಿಕನಾಗಿಯೇ ಕೆಲಸ ಮಾಡಬೇಕಾಗಿತ್ತು. ಶಾಲೆ, ಅಂಗನವಾಡಿ, ಆಸ್ಪತ್ರೆ ತೆರೆಯಲು ಸರ್ಕಾರ ಮುಂದಾದರೆ ಬಾಂಬ್ ಸ್ಫೋಟ ಮಾಡಲಾಗುತ್ತಿತ್ತು. ನಿಮಗೆ ಅಧಿಕಾರ ಇಲ್ಲ ಹೇಳುತ್ತಿದ್ದರು. ಹೀಗಾಗಿಯೇ ಅಲ್ಲಿ ಬರೋಬ್ಬರಿ 41ಸಾವಿರ ಜನರ ಹತ್ಯೆಯಾಗಿದೆ. ಅಲ್ಲಿ ಮಾರಣಹೋಮ ಬಿಟ್ಟರೆ ಬೇರೇನೂ ಆಗಿಲ್ಲ’ ಎಂದರು.

‘ಬಿಜೆಪಿಗೆ ಮತ್ತೊಮ್ಮೆ ಶಕ್ತಿ ತುಂಬಿದ ಪರಿಣಾಮ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ, ದೇಶಾಭಿಮಾನಿಗಳಿಗೆ ಸ್ವಾತಂತ್ರ್ಯ ಸಿಕ್ಕಷ್ಟೇ ಖುಷಿಯಾಗಿದೆ. 70 ವರ್ಷಗಳ ಕನಸು ನನಸಾಗಿದೆ’ ಎಂದರು.

‘ಕಾಶ್ಮೀರದಲ್ಲಿ ಇನ್ಮುಂದೆ ಸಮಾನತೆ ಬರುತ್ತದೆ. ಅಲ್ಲಿ ಸಾವಿರಾರು ದೇವಸ್ಥಾನಗಳು ನೆಲಸಮವಾಗಿವೆ. ಅವುಗಳನ್ನು ಕಟ್ಟಬೇಕಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನೂ ಭಾರತದ ಅವಿಭಾಜ್ಯ ಅಂಗ ಮಾಡುವುದು ನಮ್ಮ ಜವಾಬ್ದಾರಿ ಆಗಿದೆ. ಇದಕ್ಕಾಗಿ, ಭಯೋತ್ಪಾದನೆ ಜೀವಂತವಿರಬೇಕು ಎನ್ನುವ ಪಟ್ಟಭದ್ರ ಹಿತಾಸಕ್ತಿಗಳಿಗೆ ತಕ್ಕ ಉತ್ತರ ಕೊಡಬೇಕು’ ಎಂದು ತಿಳಿಸಿದರು.

ಶಾಸಕ ಅನಿಲ ಬೆನಕೆ ಮಾತನಾಡಿ, ‘ಕಾಶ್ಮೀರದೊಂದಿಗೆ ನಾವೆಲ್ಲರೂ ನಿಲ್ಲಬೇಕು. ಅದನ್ನು ನಂದನ ವನ ಮಾಡಬೇಕು’ ಎಂದರು.

ಪಕ್ಷದ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಪ್ರಧಾನ ಕಾರ್ಯದರ್ಶಿ ಕಿರಣ ಜಾಧವ, ಅಭಿಯಾನದ ರಾಜ್ಯ ಸಂಯೋಜಕ ಸಂಜಯ ಪಾಟೀಲ, ಜಿಲ್ಲಾ ಸಂಯೋಜಕ ಆರ್.ಎಸ್. ಮುತಾಲಿಕ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ದೀಪಾ ಕುಡಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.